ಟೊಮೆಟೊ ವ್ಯಾಪಾರಿಯ ಸಂಕಷ್ಟಕ್ಕೆ ಮಿಡಿದ ನಟ ವಿಜಯ್ ವರ್ಮಾ: ಸಹಾಯ ಮಾಡಲು ನೆಟ್ಟಿಗರ ನೆರವು ಕೇಳಿದ ಬಾಲಿವುಡ್ ನಟ

Photo: ವಿಜಯ್ ವರ್ಮಾ | twitter
ಮುಂಬೈ: ದೇಶದಲ್ಲಿ ಟೊಮೆಟೊ ದರ ಗಗನಕ್ಕೇರಿದ್ದು, ಇದರಿಂದ ಗ್ರಾಹಕರು ಮಾತ್ರವಲ್ಲದೆ ಚಿಲ್ಲರೆ ವ್ಯಾಪಾರಿಗಳೂ ಸಂಕಷ್ಟ ಎದುರಿಸುತ್ತಿದ್ದಾರೆ.
ಟೊಮೆಟೊ ಚಿಲ್ಲರೆ ಮಾರಾಟಗಾರರೊಬ್ಬರು ಟೊಮೆಟೊಗಳ ವಿಪರೀತ ಬೆಲೆ ಏರಿಕೆಯಿಂದ ವ್ಯಾಪಾರ ಮಾಡಲು ಬಂಡವಾಳ ಸಾಲದೆ ತಾನು ಅಸಹಾಯಕರಾಗಿರುವುದನ್ನು ವಿವರಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವ್ಯಾಪಾರಿಯ ಸಂಕಷ್ಟಕ್ಕೆ ಹಲವರು ಮನಮಿಡಿದಿದ್ದಾರೆ. ಆ ಸಾಲಿಗೆ ಬಾಲಿವುಡ್ ನಟ ವಿಜಯ್ ವರ್ಮಾ ಕೂಡಾ ಸೇರಿದ್ದಾರೆ.
ಈ ವಿಡಿಯೋವನ್ನು ಹಂಚಿಕೊಂಡಿರುವ ವಿಜಯ್ ವರ್ಮಾ, “ಇದು ಹೃದಯವಿದ್ರಾವಕ. ಅವರಿಗೆ ಮತ್ತು ಅವರಂತೆ ಜೀವನೋಪಾಯವನ್ನು ಕಳೆದುಕೊಂಡವರಿಗೆ ಸಹಾಯ ಮಾಡಲು ಏನಾದರೂ ಮಾರ್ಗವಿದೆಯೇ? ದಯವಿಟ್ಟು ಹೇಳಿ,” ಎಂದು ಅವರು ಟ್ವೀಟ್ ಮಾಡಿದ್ದಾರೆ.
ವ್ಯಾಪಾರಿಯನ್ನು ರಾಮೇಶ್ವರ್ ಎಂದು ಗುರುತಿಸಲಾಗಿದ್ದು, ಅವರು ದಿಲ್ಲಿಯ ಆಝಾದ್ಪುರದ ಸಗಟು ತರಕಾರಿ ಮಾರುಕಟ್ಟೆಯಿಂದ ಟೊಮೇಟೋ ಹಾಗೂ ತರಕಾರಿಗಳನ್ನು ಖರೀದಿಸಿ ಬೀದಿ ಬೀದಿಯಲ್ಲಿ ಮಾರಾಟ ಮಾಡುತ್ತಿದ್ದರು. ಆದರೆ, ವಿಪರೀತ ಬೆಲೆ ಏರಿಕೆಯಿಂದ ವ್ಯಾಪಾರಕ್ಕೆ ಹೂಡಲು ಬಂಡವಾಳ ಸಾಲುತ್ತಿಲ್ಲ ಎಂದು ತಮ್ಮ ಅಸಹಾಯತೆ ತೋರಿದ್ದರು.







