ಅಜಿತ್ ಸಭ್ಯ ವ್ಯಕ್ತಿಯಲ್ಲ: ತಮಿಳು ನಟನ ವಿರುದ್ಧ ನಿರ್ಮಾಪಕ ವಾಗ್ದಾಳಿ

ಚೆನ್ನೈ: "ಅಜಿತ್ ಹಲವಾರು ವರ್ಷಗಳ ಹಿಂದೆ ತನ್ನ ಪೋಷಕರನ್ನು ಮಲೇಶಿಯಾಗೆ ರಜಾ ಪ್ರವಾಸಕ್ಕೆ ಕಳುಹಿಸಲು ನನ್ನ ಬಳಿ ಹಣ ಪಡೆದಿದ್ದರು. ನಾನು ನಿಮಗಾಗಿ ಒಂದು ಚಿತ್ರದಲ್ಲಿ ನಟಿಸುತ್ತೇನೆ ಹಾಗೂ ಈ ಮೊತ್ತವನ್ನು ನನ್ನ ಸಂಭಾವನೆಯಲ್ಲಿ ಹೊಂದಿಸಿಕೊಳ್ಳಬಹುದು ಎಂದು ಅಜಿತ್ ನನಗೆ ತಿಳಿಸಿದ್ದರು. ಆದರೆ, ಈವರೆಗೂ ಆತ ನನ್ನ ಹಣವನ್ನು ಹಿಂದಿರುಗಿಸಿಯೂ ಇಲ್ಲ, ನನಗಾಗಿ ಚಿತ್ರದಲ್ಲಿಯೂ ನಟಿಸಿಲ್ಲ. ಇಷ್ಟು ವರ್ಷಗಳಲ್ಲಿ ಆತ ಒಮ್ಮೆಯೂ ಈ ಕುರಿತು ಮಾತನಾಡಿಲ್ಲ. ಆತ ತನ್ನನ್ನು ತಾನು ಸಭ್ಯ ವ್ಯಕ್ತಿ ಎಂದು ಕರೆದುಕೊಳ್ಳುತ್ತಾನಾದರೂ, ಆತ ಸಭ್ಯ ವ್ಯಕ್ತಿಯಲ್ಲ" ಎಂದು ತಮಿಳು ನಿರ್ಮಾಪಕ ಮಣಿಕಮ್ ನಾರಾಯಣನ್ ವಾಗ್ದಾಳಿ ನಡೆಸಿದ್ದಾರೆ ಎಂದು indiatoday.in ವರದಿ ಮಾಡಿದೆ.
ತಮಿಳು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ನಾರಾಯಣನ್, "ನಾನು ಹಲವಾರು ವರ್ಷಗಳ ಹಿಂದೆ ಅಜಿತ್ ಅವರ ಪತ್ನಿ ಶಾಲಿನಿ ಅವರೊಂದಿಗೆ ಉತ್ತಮ ಗೆಳೆತನ ಹೊಂದಿದ್ದೆ ಹಾಗೂ ಅವರು ಒಳ್ಳೆಯ ವ್ಯಕ್ತಿಯಾಗಿದ್ದರು. ಅಜಿತ್‌ಗೆ ಉತ್ತಮ ಕುಟುಂಬವಿದ್ದು, ಆತ ಪ್ರತಿ ಚಿತ್ರವೊಂದಕ್ಕೆ ರೂ. 50 ಕೋಟಿಗೂ ಹೆಚ್ಚು ಸಂಪಾದಿಸುತ್ತಿದ್ದಾರೆ. ಅವರಿಗೆ ಜನರನ್ನು ವಂಚಿಸುವ ಅಗತ್ಯವೇನಿದೆ?" ಎಂದು ಪ್ರಶ್ನಿಸಿದ್ದಾರೆ. ಎ.ಎಂ.ರತ್ನಂ ತರಹದ ನಿರ್ಮಾಪಕರು ಅಜಿತ್ ನಾಯಕತ್ವದ ಚಿತ್ರ ನಿರ್ಮಾಣ ಮಾಡಿ ಹೇಗೆ ನಷ್ಟಕ್ಕೀಡಾದರು ಮತ್ತು ತಾರಾನಟ ಅವರಿಗೆ ಹೇಗೆ ಯಾವ ನೆರವನ್ನೂ ನೀಡಲಿಲ್ಲ ಎಂಬುದರ ಕುರಿತೂ ನಾರಾಯಣನ್ ಮಾತನಾಡಿದ್ದಾರೆ.
ಈ ವಿಷಯದ ಕುರಿತು ನಿರ್ಮಾಪಕ ನಾರಾಯಣನ್ ಹಲವಾರು ಬಾರಿ ಮಾಧ್ಯಮಗಳೊಂದಿಗೆ ಮಾತನಾಡಿದ್ದರೂ, ನಟ ಅಜಿತ್ ಕುಮಾರ್ ಮಾತ್ರ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ನಿರ್ಮಾಪಕ ಮಗಿಳ್ ತಿರುಮೇನಿ ಅವರೊಂದಿಗೆ ನಟ ಅಜಿತ್ ಕುಮಾರ್ ತಮ್ಮ ನಾಯಕತ್ವದ ಹೊಸ ಚಿತ್ರದಲ್ಲಿ ನಟಿಸುವ ಸಿದ್ಧತೆಯಲ್ಲಿದ್ದಾರೆ. ಈ ನಡುವೆಯೇ ನಿರ್ಮಾಪಕ ಮಣಿಕಮ್ ನಾರಾಯಣನ್ ಅವರು ಅಜಿತ್ ವಿರುದ್ಧ ತಮಿಳು ಮಾಧ್ಯಮಗಳೆದುರು ವಾಗ್ದಾಳಿ ನಡೆಸಿದ್ದಾರೆ. ಮಣಿಕಮ್ ನಾರಾಯಣನ್ ಅವರು ಕಮಲ್ ಹಾಸನ್ ನಾಯಕತ್ವದ 'ವೆಟ್ಟೈಯಾಡು ವಿಲಯಾಡು' ಹಾಗೂ 'ಇಂದ್ರಲೋಹತಿಲ್ ನಾ ಅಳಗಪ್ಪನ್' ಎಂಬ ಚಿತ್ರಗಳನ್ನು ನಿರ್ಮಿಸಿದ್ದಾರೆ.







