ನುಡಿಯ ನಡೆ ಎತ್ತ ಕಡೆ..?

ಚಿತ್ರ: ಅಮೆರಿಕಾ ಅಮೆರಿಕಾ 2
ನಿರ್ದೇಶನ: ನಾಗತಿಹಳ್ಳಿ ಚಂದ್ರಶೇಖರ್
ನಿರ್ಮಾಣ: ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್
ತಾರಾಗಣ: ಪೃಥ್ವಿ ಅಂಬಾರ್, ಶಾನ್ವಿ ಶ್ರೀವಾತ್ಸವ್ ಮತ್ತು ನಿರೂಪ್ ಭಂಡಾರಿ ಮೊದಲಾದವರು.
ಇದು ರಮೇಶ್ ಅರವಿಂದ್ ನಟನೆಯಲ್ಲಿ ತೆರೆಕಂಡ ಮೂರು ದಶಕಗಳ ಹಿಂದಿನ ‘ಅಮೆರಿಕಾ ಅಮೆರಿಕಾ’ ಚಿತ್ರದ ಮುಂದುವರಿದ ಕಥೆಯಲ್ಲ. ಹಾಗಂತ ಹೆಸರು ಘೋಷಣೆಯಾದ ದಿನದಿಂದಲೂ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳುತ್ತಲೇ ಬಂದಿದ್ದಾರೆ. ಅದು ಸತ್ಯ. ಆದರೆ ಇಲ್ಲಿ ಅಮೆರಿಕದ ಒಡಲಲ್ಲಿರುವ ಇಬ್ಬರ ಸಂಬಂಧದ ಕಥೆಯಿದೆ. ಹಾಗಾಗಿ ಶೀರ್ಷಿಕೆಯಲ್ಲಿ ಖಂಡಿತವಾಗಿ ನ್ಯಾಯವಿದೆ.
ಆಕೆ ಮೈಸೂರಿನ ಹುಡುಗಿ. ಹೆಸರು ನುಡಿ. ಕಾಲೇಜ್ ದಿನಗಳಲ್ಲೇ ಪ್ರೀತಿಸಿದವಳು. ಆದರೆ ಪ್ರೀತಿಸಿದ ಹುಡುಗನೊಂದಿಗೆ ಮದುವೆಯಾಗುವುದಿಲ್ಲ. ವೃತ್ತಿಯ ಹೆಸರಲ್ಲಿ ಅಮೆರಿಕ ಸೇರುತ್ತಾಳೆ. ಅದಕ್ಕೂ ಮೊದಲು ಆನ್‌ಲೈನ್‌ನಲ್ಲಿ ವರಾನ್ವೇಷಣೆ ನಡೆಸಿ ಮದುವೆಯಾಗುತ್ತಾಳೆ.
ಮೈಸೂರಿನ ಮನೆಯಲ್ಲಿ ಒಂಟಿಯಾಗಿ ಬಿಡುವ ತಂದೆಯನ್ನು ನೋಡಿಕೊಳ್ಳುವಂತಹ ಹುಡುಗನೇ ಆಕೆಯ ಆದ್ಯತೆ. ಹಾಗೆ ಮನೆ ಸೇರಿದ ನಿನಾದನ ಕೈಗೊಂದು ಮಗುವನ್ನು ಕೊಟ್ಟು ತಾನು ಅಮೆರಿಕ ಸೇರುತ್ತಾಳೆ. ಒಂದು ದಿನ ಅವಳಿದ್ದ ಕಚೇರಿಯಲ್ಲಿ ಕಾಲೇಜ್ ದಿನಗಳ ಪ್ರಿಯಕರ ಕಾಣಿಸುತ್ತಾನೆ. ಮುಂದೇನಾಗುತ್ತದೆ ಎನ್ನುವುದೇ ಚಿತ್ರದ ಕಥೆ.
ನುಡಿಯ ಪಾತ್ರಕ್ಕೆ ಶಾನ್ವಿ ಶ್ರೀವಾಸ್ತವ್ ಭಾವ ತುಂಬಿದ್ದಾರೆ. ತಮ್ಮ ಪುಟ್ಟ ಹುಬ್ಬುಗಳಲ್ಲೇ ಮನದ ಅಶಾಂತಿ, ಗೊಂದಲಗಳನ್ನು ಬಳುಕಿಸಿದ್ದಾರೆ ಮತ್ತು ಬದುಕಿಸಿದ್ದಾರೆ. ನುಡಿಯ ಪತಿ ನಿನಾದ್ ಪಾತ್ರದಲ್ಲಿ ನಿರೂಪ್ ಭಂಡಾರಿ ಕಾಣಿಸಿಕೊಂಡಿದ್ದಾರೆ. ಕ್ಲೈಮ್ಯಾಕ್ಸ್ ಕಡೆಗೆ ಹೊರಟಂತೆ ಇವರ ಪಾತ್ರ ಬಲಿಷ್ಠವಾಗುತ್ತಾ ಹೋಗುತ್ತದೆ. ಬೆರಳೆಣಿಕೆಯ ಪೋಷಕ ಪಾತ್ರಗಳಿವೆ. ಅದರಲ್ಲೂ ನಾಯಕಿಯ ತಂದೆಯಾಗಿ ನಟಿಸಿದ ಮಂಡ್ಯ ರಮೇಶ್ ಪಾತ್ರ ಕಾಡುವಂತಿದೆ.
ಪ್ರೇಮಕಥೆಯಲ್ಲಿ ಕೂಡ ಮಹಿಳಾ ಭಾವಗಳಿಗೆ ಪ್ರಾಧಾನ್ಯತೆ ನೀಡುವ ಪ್ರಯತ್ನವನ್ನು ನಾಗತಿಹಳ್ಳಿಯವರು ಇಲ್ಲಿಯೂ ಮುಂದುವರಿಸಿದ್ದಾರೆ. ನಾಯಕಿಗೆ ಬಾಲ್ಯದಲ್ಲೇ ಕಂಡ ತನ್ನ ತಾಯಿಯ ಸಾವು ಮತ್ತು ಪ್ರೀತಿ ಕೈತಪ್ಪಿದ ನೋವು ಸಂಬಂಧಗಳಲ್ಲಿನ ಸಡಗರವನ್ನೇ ಸಾಯಿಸಿರುತ್ತದೆ. ಪತಿಯಾಗಿ ಬಂದವನೋ ಬಂಧುತ್ವ ಅರಿಯದ ಅನಾಥ! ಪ್ರೀತಿಗೆ ಬರವಿದ್ದ ಸಂಬಂಧ ಎಂದು ದೂರ ನಿಂತು ವಿದೇಶದಲ್ಲಿ ಕಳೆಯುವುದೇ ಆಕೆಗೆ ಆಪ್ತ. ಪುಟ್ಟ ಮಗಳನ್ನು, ಮಾವನನ್ನು ನೋಡಿಕೊಂಡು ಕುಳಿತ ಮನೆ ಅಳಿಯನಿಗೆ ಪತ್ನಿ ಸಾಂಗತ್ಯ ಸಿಗದ ನೋವು.
ಈ ಎರಡು ಪಾತ್ರಗಳಲ್ಲೂ ಬೇಗುದಿ ಇದೆ. ಆದರೆ ಕಾಲೇಜ್ ಪ್ರೀತಿಯನ್ನು ಕಳೆದುಕೊಂಡ ಪ್ರಿಯಕರನ ಕಾರಣಗಳು ಸಮರ್ಥನೀಯ ಅನಿಸದು. ಅಂಥ ಪಾತ್ರವನ್ನು ನಂಬಲರ್ಹ ಎನ್ನುವಂತೆ ನಟಿಸಿರುವ ಕೀರ್ತಿ ಪೃಥ್ವಿ ಅಂಬಾರ್ ಅವರದು.
ಮಾತ್ರವಲ್ಲ ಮೂರು ಪಾತ್ರಗಳ ಕಡೆಗೂ ಸಮಾನ ಸಹಾನುಭೂತಿ ಮೂಡಿಸಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಪೃಥ್ವಿ ಅಂಬಾರ್ ನಟನೆ, ಶಾನ್ವಿ ಪಾತ್ರದ ವರ್ತನೆ ಮತ್ತು ನಿರೂಪ್ ಭಂಡಾರಿ ಪಾತ್ರ ಆಡುವ ಸಂಭಾಷಣೆಗಳೇ ಆಯಾ ಪಾತ್ರದ ಪ್ರಮುಖ ಆಕರ್ಷಣೆ ಎನ್ನಬಹುದು.
ಪೃಥ್ವಿ ಅವರ ಅಭಿನಯವನ್ನು ಕಮಲ್‌ಹಾಸನ್ ಅವರೊಂದಿಗೆ ಹೋಲಿಸಲಾಗುತ್ತದೆ. ಈ ಬಾರಿ ಅದಕ್ಕೊಂದು ಸನ್ನಿವೇಶವನ್ನೇ ನೀಡಲಾಗಿದೆ. ಚಿತ್ರದಲ್ಲಿ ನಾಯಕಿ ಬರ್ತ್ ಡೇ ಕೇಕ್ ಕತ್ತರಿಸುವ ದೃಶ್ಯವಿದೆ. ಆಕೆ ಕೇಕ್‌ನ ಮೊದಲ ತುಣುಕನ್ನು ಯಾರೆಡೆಗೆ ತರುತ್ತಾಳೆ ಎಂದು ಕಣ್ಣಾಡಿಸುವ ಪೃಥ್ವಿಯ ನೋಟದಲ್ಲೇ ಮಾತನಾಡಿದ್ದಾರೆ. ತಮಿಳಿನ ‘ಅಪೂರ್ವ ಸಗೋದರರ್ಗಳ್’ ಚಿತ್ರದಲ್ಲಿ ಉಂಗುರ ಬದಲಾಯಿಸುವ ದೃಶ್ಯವಿದೆ. ಇಲ್ಲಿ ಕಮಲ್ ನೆನಪಾಗಲು ಪೃಥ್ವಿಯ ನಟನೆ ಮತ್ತು ದೃಶ್ಯ ಸಂಯೋಜನೆ ಕೂಡ ಪೂರಕವಾಗಿದೆ. ಇಷ್ಟು ಮುಗ್ಧ ಪ್ರೇಮಿಯಾಗಲು ಸದ್ಯಕ್ಕೆ ಕನ್ನಡದಲ್ಲಿ ಮತ್ತೊಬ್ಬರಿಲ್ಲ ಎನ್ನುವಂತೆ ಪೃಥ್ವಿ ಅಂಬಾರ್ ಕಾಣಿಸಿದ್ದಾರೆ.
ನಾಗತಿಹಳ್ಳಿ ಚಂದ್ರಶೇಖರ್ ಅವರು ಸಹನಾ ವಿಜಯಕುಮಾರ್ ಅವರ ‘ಕ್ಷಮೆ’ ಕಾದಂಬರಿ ಆಧರಿಸಿ ಈ ಚಿತ್ರ ಮಾಡಿದ್ದಾರೆ. ಆದರೆ ದೃಶ್ಯಕ್ಕೆ, ಕಾಲಕ್ಕೆ ಬೇಕಾದ ಬದಲಾವಣೆಗಳನ್ನು ಚೆನ್ನಾಗಿಯೇ ಮಾಡಿದ್ದಾರೆ. ಸಾರಯುತ ಸಂಭಾಷಣೆಗಳು ಈ ಚಿತ್ರದ ಆಸ್ತಿ. ಆದರೆ ನಾಯಕಿ ತನ್ನ ಅನೈತಿಕ ಆಸಕ್ತಿಯನ್ನು ಸಮರ್ಥಿಸುವಾಗ ಆಡುವ ಮಾತು ಎಲ್ಲೋ ಹತೋಟಿ ತಪ್ಪಿದಂತೆ ಅನಿಸಿದ್ದು ಸುಳ್ಳಲ್ಲ.
ವಿವಾಹದ ಬಳಿಕ ಕಾಲೇಜ್ ದಿನಗಳ ಪ್ರಿಯಕರನ ಭೇಟಿ ಎನ್ನುವುದನ್ನು ತಮಿಳಿನ 96 ಚಿತ್ರದಲ್ಲಿ ಭಾವನಾತ್ಮಕವಾಗಿ ತೋರಿಸಲಾಗಿತ್ತು. ಇಲ್ಲಿ ನಿರ್ದೇಶಕರು ಅದಕ್ಕೆ ಮತ್ತೊಂದು ರೂಪವನ್ನು ನೀಡಿದ್ದಾರೆ. ಸಂಬಂಧಗಳೆಡೆಗಿನ ಗೊಂದಲವನ್ನು ನೈತಿಕ ನೆಲೆಗಟ್ಟಿನಲ್ಲಿ ಪರಿಹರಿಸುವಂತೆ ಮೇಷ್ಟ್ರು ಪಾಠ ಮಾಡಿದ್ದಾರೆ.






