ಕಳೆದ 8 ವರ್ಷಗಳಿಂದ ಬಾಲಿವುಡ್ನಲ್ಲಿ ಅವಕಾಶಗಳು ಸಿಕ್ಕಿಲ್ಲ, ಇದಕ್ಕೆ ಕೋಮುವಾದಿ ಮನಸ್ಥಿತಿಯೂ ಕಾರಣವಿರಬಹುದು: ಎ.ಆರ್. ರೆಹಮಾನ್

ಎ.ಆರ್. ರೆಹಮಾನ್ (Photo: PTI)
ಯಶಸ್ವೀ ಸಂಗೀತಗಳನ್ನು ನೀಡಿದ ಹೊರತಾಗಿಯೂ ಬಾಲಿವುಡ್ ನಲ್ಲಿ ಹೊರಗಿನವನು ಎಂಬ ಭಾವನೆ ಹೋಗಿಲ್ಲ. ಕಳೆದ ಎಂಟು ವರ್ಷಗಳಲ್ಲಿ ಬಾಲಿವುಡ್ ನ ಕದ ಮುಚ್ಚಿದೆ ಎನ್ನುವ ಬಗ್ಗೆ ಎ.ಆರ್. ರೆಹಮಾನ್ ಬೇಸರ ವ್ಯಕ್ತಪಡಿಸಿದ್ದಾರೆ.
ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಅವರು ಬಾಲಿವುಡ್ ಚಿತ್ರರಂಗದಲ್ಲಿ ‘ಹೊರಗಿನವನು’ ಎಂಬ ಭಾವನೆ ಬಂದಿರುವ ಕುರಿತಾಗಿ ಆಘಾತಕಾರಿ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ಕಳೆದ ಎಂಟು ವರ್ಷಗಳಲ್ಲಿ ತನಗೆ ಹಿಂದಿ ಚಿತ್ರಗಳಲ್ಲಿ ಸಿಗಬೇಕಾದ ಅವಕಾಶಗಳು ಕೈತಪ್ಪುತ್ತಿವೆ. ಸೃಜನಶೀಲತೆ ಇಲ್ಲದವರ ಕೈಯಲ್ಲಿ ಅಧಿಕಾರವಿರುವುದು ಮತ್ತು ಕೋಮುವಾದಿ ಮನಸ್ಥಿತಿ ಇದಕ್ಕೆ ಮುಖ್ಯ ಕಾರಣವಾಗಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ ಎಂದು indianexpress.com ವರದಿ ಮಾಡಿದೆ.
"ರೋಜಾ, ಬಾಂಬೆ ಮತ್ತು ದಿಲ್ಸೇಯಂತಹ ಸೂಪರ್ಹಿಟ್ ಚಿತ್ರಗಳಿಗೆ ಸಂಗೀತ ನೀಡಿದರೂ ಮತ್ತು ‘ರಂಗೀಲಾ’ ಸಿನಿಮಾ ಅಭೂತಪೂರ್ವ ಯಶಸ್ಸು ಕಂಡರೂ ನಾನು ‘ಹೊರಗಿನವ’ ಎನ್ನುವ ಭಾವನೆ ಇತ್ತು. ಸುಭಾಷ್ ಘೈ ಅವರ ‘ತಾಲ್’ ಸಿನಿಮಾ ಬಿಡುಗಡೆಯಾದ ನಂತರವಷ್ಟೇ ಉತ್ತರ ಭಾರತದಲ್ಲಿ ಮನೆಮಾತಾಗಲು ಸಾಧ್ಯವಾಯಿತು" ಎಂದು ಅವರು ಹೇಳಿದ್ದಾರೆ.
“ಹಿಂದಿ ಭಾಷೆ ಮಾತನಾಡದೆ ಇರುವ ತಮಿಳು ವ್ಯಕ್ತಿಗೆ ಬಾಲಿವುಡ್ ನಲ್ಲಿ ‘ಹೊರಗಿನವ’ ಎನ್ನುವ ಭಾವನೆ ಬರುತ್ತದೆ. ಬಾಲಿವುಡ್ ನಲ್ಲಿ ದೀರ್ಘಕಾಲ ಇರಬೇಕೆಂದರೆ ಹಿಂದಿ ಕಲಿಯಿರಿ ಎಂದು ಸುಭಾಷ್ ಘೈ ಸ್ವತಃ ಹೇಳಿದ್ದರು. ಆದರೆ ತಮಿಳಿನ ಜೊತೆಗಿನ ಆಪ್ತ ಬಾಂಧವ್ಯದಿಂದಾಗಿ ಹಿಂದಿ ಮಾತನಾಡಲು ಸಾಧ್ಯವಾಗಲಿಲ್ಲ. ಆದರೆ ನಾನು ಹಿಂದಿ ಕಲಿಯಲು ಒಂದು ಹೆಜ್ಜೆ ಮುಂದೆ ಹೋಗಿ ಉರ್ದು ಕಲಿತೆ. ಏಕೆಂದರೆ 1960-70ರಲ್ಲಿ ಇದು ಹಿಂದಿ ಸಂಗೀತದ ಮೂಲವಾಗಿತ್ತು. ಉರ್ದುಗೆ ಸಮೀಪವಿರುವ ಅರೆಬಿಕ್ ಮತ್ತು ಪಂಜಾಬಿ ಭಾಷೆಯನ್ನೂ ಕಲಿತೆ” ಎಂದು ಅವರು ಹೇಳಿದ್ದಾರೆ.
ಪಂಜಾಬಿ ಗಾಯಕ ಸುಖ್ವಿಂದರ್ ಮತ್ತು ರೆಹಮಾನ್ ಸಹಯೋಗದಲ್ಲಿ ಬಹಳ ಜನಪ್ರಿಯ ಹಾಡುಗಳಾದ, ‘ಚಯ್ಯ ಚಯ್ಯ’, ‘ರಮ್ತಾ ಜೋಗಿ’, ಮತ್ತು ಆಸ್ಕರ್ ಪ್ರಶಸ್ತಿ ಗೆದ್ದ ‘ಜೈ ಹೋ’ಗಳು ಬಂದಿದ್ದವು.
ಹಿಂದಿ ಚಿತ್ರರಂಗದಲ್ಲಿ ಪೂರ್ವಗ್ರಹವಿದೆಯೆ ಮತ್ತು ತಮಿಳು ಸಮುದಾಯದವರ ವಿರುದ್ಧ ಅಥವಾ ಮಹಾರಾಷ್ಟ್ರದವರಲ್ಲದೆ ಇದ್ದರೆ ತಾರತಮ್ಯ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನನಗೆ ಎಂದಿಗೂ ಆ ಬಗ್ಗೆ ತಿಳಿದುಬರಲಿಲ್ಲ. ನನಗೆ ಅಂತಹ ಅನುಭವವಾಗಿಲ್ಲ. ಕಳೆದ ಎಂಟು ವರ್ಷಗಳಲ್ಲಿ ಬಾಲಿವುಡ್ ನಲ್ಲಿ ಅಧಿಕಾರ ಬದಲಾವಣೆಯಾದ ಕಾರಣ ಮತ್ತು ಸೃಜನಶೀಲರ ಬಳಿ ಈಗ ಅಧಿಕಾರವಿಲ್ಲದ ಕಾರಣ ಇರಬಹುದು. ಇದು ಕೋಮುವಾದಿ ಕಾರಣವೂ ಇರಬಹುದು. ಆದರೆ ನನ್ನ ಮುಖದ ಮೇಲೆ ನೇರವಾಗಿ ಕಾಣಿಸುತ್ತಿಲ್ಲ. ಕೆಲವೊಮ್ಮೆ ನನ್ನನ್ನು ಚಿತ್ರಕ್ಕೆ ಆಯ್ಕೆ ಮಾಡಿರುತ್ತಾರೆ ನಂತರ ಸಂಗೀತ ಕಂಪನಿಗಳು ಐವರು ಸಂಗೀತ ನಿರ್ದೇಶಕರನ್ನು ನೇಮಿಸಿಕೊಂಡಿರುವುದು ಕೇಳಿ ನಗು ಬರುತ್ತದೆ. ನಾನು ಕೆಲಸದ ಹುಡುಕಾಟದಲ್ಲಿಲ್ಲ. ನನ್ನ ಪ್ರಾಮಾಣಿಕತೆ ನನಗೆ ಕೆಲಸ ತಂದುಕೊಡಬೇಕು” ಎಂದು ಹೇಳಿದ್ದಾರೆ.
ಈ ಮೊದಲು, ಮಣಿರತ್ನಂ ಸಿನಿಮಾಗಳಂತೆ ತಮಿಳಿನಿಂದ ಹಿಂದಿಗೆ ಡಬ್ ಆಗಿರುವ ಸಿನಿಮಾಗಳನ್ನು ಮಾಡದೆ ಹೆಚ್ಚು ಹಿಂದಿ ಸಿನಿಮಾಗಳನ್ನೇ ಆರಿಸಿಕೊಂಡಿದ್ದಕ್ಕೆ ಕಾರಣ ವಿವರಿಸಿದ ರೆಹಮಾನ್, “ತಮಿಳು ಸಿನಿಮಾಗಳು ಹಿಂದಿಗೆ ಡಬ್ ಆದಾಗ ತಮಿಳು ಸಾಹಿತ್ಯದ ಆಕ್ಷರಶಃ ಹಿಂದಿಗೆ ಅನುವಾದವಾಗಲಾರಂಭಿಸಿದವು. ಆಗ ಕೆಲವರು ಹಿಂದಿಗಿಂತ ತಮಿಳು ಸಾಹಿತ್ಯವೇ ಚೆನ್ನಾಗಿದೆ ಎಂದು ಅಭಿಪ್ರಾಯಪಟ್ಟರು. ಹೀಗಾಗಿ ನಾನು ಹಿಂದಿಯಲ್ಲಿಯೇ ಸಾಹಿತ್ಯ ನೀಡುವತ್ತ ಗಮನಹರಿಸಿದೆ” ಎಂದು ಹೇಳಿದರು.







