ಬಾಲಿವುಡ್ ಕಲಾ ನಿರ್ದೇಶಕ ನಿತಿನ್ ದೇಸಾಯಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ; ಆತ್ಮಹತ್ಯೆ ಶಂಕೆ

ನಿತಿನ್ ದೇಸಾಯಿ (Photo: Twitter/@Riteishd)
ಮುಂಬೈ: ಖ್ಯಾತ ಬಾಲಿವುಡ್ ನಿರ್ಮಾಣ ವಿನ್ಯಾಸಕಾರ ನಿತಿನ್ ಚಂದ್ರಕಾಂತ್ ದೇಸಾಯಿ (58) ಅವರು ರಾಯಗಢ ಜಿಲ್ಲೆಯಲ್ಲಿನ ಸ್ಟುಡಿಯೊದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ. ದೇಸಾಯಿ ಅವರು ಆತ್ಮಹತ್ಯೆಯಿಂದ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
ಪೊಲೀಸ್ ಮೂಲಗಳ ಪ್ರಕಾರ, ಕರ್ಜತ್ನಲ್ಲಿನ ತಮ್ಮ ಸ್ಟುಡಿಯೊದಲ್ಲಿ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿದರು. ದೇಸಾಯಿ ಅವರ ಸಾವಿನ ಕುರಿತು ಎಲ್ಲ ಆಯಾಮಗಳ ತನಿಖೆಯು ಸದ್ಯ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಮಹಾರಾಷ್ಟ್ರದ ದಪೋಲಿಯಲ್ಲಿ ಜನವರಿ 25, 1965ರಲ್ಲಿ ಜನಿಸಿದ ದೇಸಾಯಿ ಕಿರುತೆರೆ ಧಾರಾವಾಹಿ 'ತಮಸ್'(1987)ನಲ್ಲಿ ಸಹಾಯಕ ಕಲಾ ನಿರ್ದೇಶಕರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಅವರು 1991ರಲ್ಲಿನ ಚಾಣಕ್ಯ ಚಿತ್ರದ ಮೂಲಕ ಸ್ವತಂತ್ರ ಕಲಾ ನಿರ್ದೇಶಕರಾದರು.
'ಭಾರತ್ ಏಕ್ ಖೋಜ್' (1992-1993), ಕೋರಾ ಕಾಗಝ್ (1993) ಹಾಗೂ ಸ್ವಾಭಿಮಾನ್ (1995-1996) ಸೇರಿದಂತೆ ಹಲವಾರು ದೂರದರ್ಶನ ಧಾರಾವಾಹಿಗಳಲ್ಲಿ ಕೆಲಸ ಮಾಡಿದರು. ಅವರು ಸ್ವತಂತ್ರ ಕಲಾ ನಿರ್ದೇಶಕರಾಗಿ 'ಹಮ್ ದಿಲ್ ದೇ ಚುಕೆ ಸನಂ' (1999) ಮೂಲಕ ಬಾಲಿವುಡ್ಗೆ ಪದಾರ್ಪಣೆ ಮಾಡಿದರು. ಅವರ ಇನ್ನಿತರ ಯಶಸ್ವಿ ಬಾಲಿವುಡ್ ಚಿತ್ರಗಳ ಪೈಕಿ 'ಲಗಾನ್' (2001), 'ದೇವದಾಸ್' (2002), 'ಸ್ವದೇಶ್' (2004), 'ಜೋಧಾ ಅಕ್ಬರ್' (2008) ಹಾಗೂ 'ಪ್ರೇಮ್ ರತನ್ ಧನ್ ಪಾಯೊ' (2015) ಅಂತಹ ಚಿತ್ರಗಳು ಸೇರಿವೆ.
ಅತ್ಯುತ್ತಮ ಕಲಾ ನಿರ್ದೇಶನಕ್ಕಾಗಿ ನಾಲ್ಕು ರಾಷ್ಟ್ರೀಯ ಚಿತ್ರ ಪ್ರಶಸ್ತಿಗಳು ಹಾಗೂ ಮೂರು ಫಿಲ್ಮ್ಫೇರ್ ಅತ್ಯುತ್ತಮ ಕಲಾ ನಿರ್ದೇಶನ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. 2016ರಲ್ಲಿ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.







