ಬಲರಾಮನ ಛಲಗಳಿಗೆ ಇಲ್ಲಿ ಫಲವಿಲ್ಲ!

ಚಿತ್ರ: ಬಲರಾಮನ ದಿನಗಳು
ನಿರ್ದೇಶನ: ಕೆ.ಎಂ. ಚೈತನ್ಯ
ನಿರ್ಮಾಣ: ಪದ್ಮಾವತಿ ಜಯರಾಮ್ ಮತ್ತು ಶ್ರೇಯಸ್ ಜಯರಾಮ್
ತಾರಾಗಣ: ವಿನೋದ್ ಪ್ರಭಾಕರ್, ಪ್ರಿಯಾ ಆನಂದ್, ಆಶಿಷ್ ವಿದ್ಯಾರ್ಥಿ ಮೊದಲಾದವರು.
‘ಆ ದಿನಗಳು’ ಚಿತ್ರ ನೋಡಿದವರು ಇದನ್ನು ಅದರ ಮುಂದುವರಿದ ಭಾಗ ಎಂದು ಕಲ್ಪಿಸಿಕೊಂಡಿದ್ದರು. ಅದಕ್ಕೆ ಕಾರಣ ಟ್ರೇಲರ್ ಮತ್ತು ಶೀರ್ಷಿಕೆಯಲ್ಲಿ ಕಾಣಿಸಿದ್ದ ಹೋಲಿಕೆಗಳು ಎಂದೇ ಹೇಳಬೇಕು. ಆದರೆ ಕೊತ್ವಾಲ್ ಪಾತ್ರದ ಮುಂದುವರಿಕೆ ಹಾಗೂ ಎಂಭತ್ತರ ದಶಕದ ಕತೆ ಎನ್ನುವುದನ್ನು ಬಿಟ್ಟರೆ ಅದರೊಂದಿಗೆ ಅಂಥ ಯಾವ ಅನುಬಂಧ ಕೂಡ ಇಲ್ಲಿ ಕಾಣಿಸುವುದಿಲ್ಲ.
ಬಲರಾಮ ಬಲಶಾಲಿ ಯುವಕ. ಕೆಲಸಕ್ಕೆಂದು ಸರ್ಟಿಫಿಕೇಟ್ ಹಿಡಿದುಕೊಂಡು ಬೆಂಗಳೂರಿಗೆ ಬಂದವನು ಕೋಪದ ಕೈಗೆ ಬುದ್ಧಿ ಕೊಟ್ಟು ರೌಡಿಯಾಗುತ್ತಾನೆ. ಜಯರಾಮನ ಗ್ಯಾಂಗ್ ಸೇರಿಕೊಂಡವನ ಮುಂದಿನ ಬಾಳು ಏನಾಗುತ್ತದೆ ಎನ್ನುವುದೇ ಚಿತ್ರದ ಮುಖ್ಯಭಾಗ.
ಬಲರಾಮನಾಗಿ ವಿನೋದ್ ಪ್ರಭಾಕರ್ ಬಾಳುವ ಪ್ರಯತ್ನ ಮಾಡಿದ್ದಾರೆ. ಆದರೂ ನಡಿಗೆ ಮತ್ತು ಧ್ವನಿಯಲ್ಲಿ ಸಹಜವಾಗಿಯೇ ಟೈಗರ್ ಪ್ರಭಾಕರ್ ಪ್ರವೇಶವಾಗಿದೆ. ಹಳ್ಳಿಯಿಂದ ಕೆಲಸಕ್ಕೆಂದು ಬರುವ ಯುವಕ ರೌಡಿಯಾಗುವ ಕಥೆ ಇದು. ಹಾಗಂತ ಇದು ಮತ್ತೊಂದು ‘ಜೋಗಿ’ ಅಲ್ಲ. ಯಾಕೆಂದರೆ ಇಲ್ಲಿ ಸಂಬಂಧಗಳ ಸೆಂಟಿಮೆಂಟ್ಸ್ ಕಡಿಮೆ. ಭಾವನೆಗಳು ಬಾಯಿಮಾತಿಗಷ್ಟೇ ಮೀಸಲು. ಹಾಗಾಗಿ ಯಾರೂ ಹೊಡೆದಾಟಗಳನ್ನು ದಾಟಿ ಮನದೊಳಗೆ ಜಾಗ ಪಡೆಯುವುದಿಲ್ಲ. ಆದರೆ ಸಂಭಾಷಣೆಗಳ ಮೂಲಕ ಆ ಕೊರತೆ ನೀಗಿಸುವ ಪ್ರಯತ್ನವನ್ನು ಕೆ.ಎಲ್. ರಾಜಶೇಖರ್ ಮಾಡಿದ್ದಾರೆ. ‘‘ಕೈಗಂಟಿರುವ ರಕ್ತ ತೊಳೆದರೆ ಹೋಗುತ್ತೆ, ಹೆಸರಿಗಂಟಿರುವ ರಕ್ತ ಸತ್ತ ಮೇಲೂ ಇರುತ್ತೆ’’, ‘‘ಇಲ್ಲಿ ನಾವು ನಮ್ಮಷ್ಟಕ್ಕೇ ಸಾಗುತ್ತೀವಿ ಅನ್ನೋಕಾಗಲ್ಲ. ಯಾಕೆಂದರೆ ರೌಡಿಸಮ್ ಎನ್ನುವುದು ಜರ್ನಿಯಲ್ಲ. ರೇಸ್’’ ಎನ್ನುವ ಸಂಭಾಷಣೆಗಳು ಅವರಲ್ಲಿನ ವೈವಿಧ್ಯಕ್ಕೆ ಸಾಕ್ಷಿ. ಹೀಗಾಗಿಯೇ ರೈ ಪಾತ್ರದ ಮಂಗಳೂರು ಶೈಲಿ ಸಂಭಾಷಣೆ ಮತ್ತು ‘ಕತ್ತಿ’ ಪಾತ್ರಧಾರಿಯ ತಮಿಳು ಮಿಶ್ರಿತ ಮಾತುಗಳಲ್ಲಿ ಸಹಜತೆ ತುಂಬಲು ಅವರಿಗೆ ಸಾಧ್ಯವಾಗಿದೆ.
ಚಿತ್ರದ ಆರಂಭದಲ್ಲೇ ಇದು ಕೇವಲ ಕಾಲ್ಪನಿಕ ಮತ್ತು ಹೋಲಿಕೆಗಳು ಕಾಕತಾಳೀಯ ಎನ್ನಲಾಗಿದೆ. ಆದರೆ ಮೋನಪ್ಪ ರೈ ಹೆಸರು ಮತ್ತು ನೋಟದಲ್ಲಿ ನಮಗೆ ಮುತ್ತಪ್ಪ ರೈಯ ಛಾಯೆ ಎದ್ದು ಕಾಣಿಸುತ್ತದೆ. ಶಶಿಧರ್ ಪಾತ್ರದಲ್ಲಿ ಅಗ್ನಿ ಶ್ರೀಧರ್ ಕಾಣಿಸುತ್ತಾರೆ. ಮಾತ್ರವಲ್ಲ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದಾಗಿನ ಕಾಲಘಟ್ಟ, ದಾವೂದ್ ಪಾಕಿಸ್ತಾನದ ಕರಾಚಿಗೆ ಹೋಗಿದ್ದು ಮೊದಲಾದ ಇತಿಹಾಸದ ಘಟನೆಗಳನ್ನು ಅವರ ನೇರ ಹೆಸರಿನೊಂದಿಗೆ ತಳುಕು ಹಾಕಲಾಗಿದೆ. ಹಾಗಾಗಿ ಅವನ್ನೆಲ್ಲ ಕಾಕತಾಳೀಯ ಎನ್ನಲಾಗದು.
ಬಲರಾಮನಿಗೆ ಬೆಂಗಳೂರಲ್ಲೊಂದು ಪ್ರೇಮಕಥೆ ಇದೆ. ರೇವತಿ ಎನ್ನುವ ಪ್ರೇಯಸಿಯಾಗಿ ಪ್ರಿಯಾ ಆನಂದ್ ನಟಿಸಿದ್ದಾರೆ. ಇಲ್ಲಿ ಪ್ರೇಮಕ್ಕೂ ವಿಶೇಷ ಅವಕಾಶಗಳಿಲ್ಲ. ನಾಯಕಿ ಇದ್ದರೂ ಕಥೆ ಶುಷ್ಕವಾಗಿಯೇ ಸಾಗುತ್ತದೆ. ತುಟಿಗೆ ತುಟಿ ಇಟ್ಟು ಮುತ್ತಿಡುವ ದೃಶ್ಯವಿದ್ದರೂ ಅಲ್ಲಿ ನೋವಷ್ಟೇ ಕಾಣುವಂತೆ ಮಾಡಿದ್ದಾರೆ. ಸಂತೋಷ್ ನಾರಾಯಣನ್ ಸಂಗೀತದಲ್ಲಿ ಹಾಡುಗಳೇನೋ ಇವೆ. ಆದರೆ ‘ಆ ದಿನಗಳು’ ಇಳಯರಾಜ ಫೀಲ್ ನಿರೀಕ್ಷಿಸಿ ಬರುವವರಿಗೆ ಒಂದು ನಿಮಿಷ ಮೌನಾಚರಣೆ.
ಜಯರಾಮನಾಗಿ ಆಶಿಷ್ ವಿದ್ಯಾರ್ಥಿ ಒಂದು ಗ್ಯಾಪ್ ಬಳಿಕ ಕನ್ನಡಕ್ಕೆ ಮರಳಿದ್ದಾರೆ. ಜಯರಾಮನ ವಿರೋಧಿ ಗ್ಯಾಂಗ್ ಮೋನಪ್ಪ ರೈ ಪಾತ್ರವನ್ನು ರಮೇಶ್ ಇಂದಿರಾ ನಿಭಾಯಿಸಿದ್ದಾರೆ. ರೈ ಗ್ಯಾಂಗ್‌ನಲ್ಲಿರುವ ‘ಕತ್ತಿ’ಯಾಗಿ ವಿನಯ್ ಗೌಡ ಗಮನ ಸೆಳೆಯುವ ನಟನೆ ನೀಡಿದ್ದಾರೆ. ವಿನಯ್ ಗೌಡ ಪತ್ನಿಯಾಗಿ ನಿಕಿತಾ ದೋರ್ತೋಡಿ ಅಭಿನಯಿಸಿದ್ದಾರೆ. ರಜತ್ ಪಾತ್ರ ಹಾಗೆ ಬಂದು ಹೀಗೆ ಹೋಗಿ ಬಿಡುತ್ತದೆ. ಡ್ರ್ಯಾಗನ್ ಮಂಜು ಒಂದೇ ದೃಶ್ಯದಲ್ಲಿ ಬಂದರೂ ಕೊನೆಯ ತನಕ ನೆನಪಿನಲ್ಲಿ ಉಳಿಯುತ್ತಾರೆ. ಎರಡೂವರೆ ಗಂಟೆ ಕಾಲಾವಧಿಯ ಚಿತ್ರದಲ್ಲಿ ನಿರ್ದೇಶಕರಿಗೆ ಇನ್ನೇನೋ ಹೇಳುವುದಿತ್ತು. ಆದರೆ ಕತ್ತರಿಸುವ ಭರದಲ್ಲಿ ಹೇಳಿರುವುದೇ ತಾಳ ತಪ್ಪಿದಂತಿದೆ.
ಎಂಭತ್ತರ ದಶಕಕ್ಕೆ ಹೊಂದುವಂಥ ವಸ್ತ್ರ ವಿನ್ಯಾಸ, ಪ್ರಸಾಧನ, ಕಲಾ ನಿರ್ದೇಶನ ಪ್ರತಿಯೊಂದು ಕೂಡ ಮೆಚ್ಚುವ ರೀತಿಯಲ್ಲಿದೆ. ವೇಣು ಛಾಯಾಗ್ರಹಣ ಕೂಡ ಗಮನಾರ್ಹ. ರೌಡಿಸಮ್ ಚಿತ್ರಗಳಿಗೆಲ್ಲ ‘ಗಾಡ್ ಫಾದರ್’ ಮೂಲ ಅಂತಾರೆ. ಇಲ್ಲಿ ತಮಿಳಿನ ‘ನಾಯಗನ್’ ಸ್ಫೂರ್ತಿಯಾಗಿರುವುದು ರಹಸ್ಯವಾಗಿ ಉಳಿಯುವುದಿಲ್ಲ. ಹೀಗಾಗಿ ನಿರ್ದೇಶಕ ಚೈತನ್ಯ ಈ ಬಾರಿ ‘ಆ ದಿನಗಳ’ ಮ್ಯಾಜಿಕ್ ಮಾಡಿಲ್ಲ ಎನ್ನುವುದು ಸತ್ಯ.






