ನಾಲ್ಕು ದಿನಗಳಲ್ಲಿ 100 ಕೋಟಿಯ ಗಡಿ ದಾಟಿದ ‘ಭೂತಬಂಗಲೆ’

PC: x.com/abplive
ಮುಂಬೈ: ಬಹುನಿರೀಕ್ಷಿತ ಅಕ್ಷಯ್ ಕುಮಾರ್ ಮತ್ತು ಪ್ರಿಯದರ್ಶನ್ ಸಹಭಾಗಿತ್ವದ ‘ಭೂತಬಂಗಲೆ’ ಚಿತ್ರ ಈ ತಿಂಗಳ 18ರಂದು ಬಿಡುಗಡೆಯಾಗಿದ್ದು, ನಾಲ್ಕು ದಿನಗಳಲ್ಲಿ ವಿಶ್ವವ್ಯಾಪಿ 100 ಕೋಟಿ ರೂಪಾಯಿ ಗಳಿಸಿದೆ.
ಭೀತಿ ಮತ್ತು ಹಾಸ್ಯ ಲೇಪಿತ ಅಕ್ಷಯ್ ಕುಮಾರ್–ವಮಿಕಾ ಗಬ್ಬಿ ಅಭಿನಯದ ಈ ಚಿತ್ರ, ಅಜೇಯ ಬಾಕ್ಸ್ ಆಫೀಸ್ ಚಾಂಪಿಯನ್ ರಣವೀರ್ ಸಿಂಗ್ ಅವರ ‘ಧುರಂಧರ್’ ಚಿತ್ರಕ್ಕೆ ತೀವ್ರ ಪೈಪೋಟಿ ನೀಡುತ್ತಿದ್ದು, ‘ಧುರಂಧರ್’ ಚಿತ್ರದ ಆಧಿಪತ್ಯಕ್ಕೆ ಮಂಗಳ ಹಾಡುವಲ್ಲಿ ಯಶಸ್ವಿಯಾಗಿದೆ. ವಾರಾಂತ್ಯದಲ್ಲಿ ಅದ್ಭುತ ಗಳಿಕೆಯ ಮೂಲಕ ಸುದ್ದಿ ಮಾಡಿದ ‘ಭೂತಬಂಗಲೆ’, ಸೋಮವಾರದ ವಹಿವಾಟಿನಲ್ಲಿ ಇಳಿಕೆ ಕಂಡರೂ 100 ಕೋಟಿಯ ಕ್ಲಬ್ ಸೇರಿದೆ. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುವ ಜೊತೆಗೆ ಐಪಿಎಲ್ ಕ್ರೇಜ್ ನಡುವೆಯೂ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದೆ.
ಆರಂಭದಲ್ಲಿ ಭರ್ಜರಿ ಸುದ್ದಿ ಮಾಡಿದ ಚಿತ್ರದ ನಾಲ್ಕನೇ ದಿನದ ನಿವ್ವಳ ಗಳಿಕೆ 6.75 ಕೋಟಿ ರೂಪಾಯಿ ಆಗಿದ್ದು, ದೇಶಾದ್ಯಂತ 10,984 ಪ್ರದರ್ಶನಗಳನ್ನು ಕಂಡಿದೆ ಎಂದು ಸ್ಯಾಕ್ನಿಲ್ಕ್ ಅಂದಾಜಿಸಿದೆ. ರವಿವಾರದ 23 ಕೋಟಿ ಗಳಿಕೆಗೆ ಹೋಲಿಸಿದರೆ ಸೋಮವಾರದ ಸಂಗ್ರಹ ಶೇಕಡಾ 70ರಷ್ಟು ಇಳಿಕೆಯಾಗಿದ್ದರೂ, ದೇಶಾದ್ಯಂತ ಒಟ್ಟಾರೆ 64.75 ಕೋಟಿ ರೂಪಾಯಿ ಗಳಿಸುವಲ್ಲಿ ಯಶಸ್ವಿಯಾಗಿದೆ.
ಪ್ರಿಯದರ್ಶನ್ ನಿರ್ದೇಶನದ ಈ ಚಿತ್ರ ಸಾಗರೋತ್ತರ ದೇಶಗಳಲ್ಲಿ 2.5 ಕೋಟಿ ರೂಪಾಯಿ ಗಳಿಸಿದೆ. ಇದರಿಂದ ಚಿತ್ರದ ಒಟ್ಟಾರೆ ವಿದೇಶಿ ಗಳಿಕೆ 29 ಕೋಟಿ ರೂಪಾಯಿ ದಾಟಿದೆ. ಭಾರತದಲ್ಲಿ ಗಳಿಸಿದ 77.34 ಕೋಟಿ ಸೇರಿ, ಚಿತ್ರ ಇದುವರೆಗೆ 106.34 ಕೋಟಿ ರೂಪಾಯಿ ಆದಾಯ ಗಳಿಸಿದೆ ಎಂದು ಅಂದಾಜಿಸಲಾಗಿದೆ.






