'ಸಿತಾರೆ ಝಮೀನ್ ಪರ್' ಚಿತ್ರಕ್ಕೆ ಪ್ರಧಾನಿ ಮೋದಿಯ ಸಾಲುಗಳನ್ನು ಸೇರಿಸಲು ಸೂಚಿಸಿದ ಸಿಬಿಎಫ್ಸಿ
ಚಿತ್ರಕ್ಕೆ ಐದು ಬದಲಾವಣೆಗಳನ್ನು ಮಾಡುವಂತೆ ನಿರ್ದೇಶ

Credit: Instagram/@aamirkhanproductions
ಹೊಸದಿಲ್ಲಿ : ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಆಮಿರ್ ಖಾನ್ ಅವರ 'ಸಿತಾರೆ ಝಮೀನ್ ಪರ್' ಚಿತ್ರಕ್ಕೆ ಐದು ಬದಲಾವಣೆಗಳನ್ನು ಮಾಡುವಂತೆ ನಿರ್ದೇಶಿಸಿದೆ.
ಜೂನ್ 17ರಂದು ಸೆನ್ಸಾರ್ ಮಂಡಳಿ(ಸಿಬಿಎಫ್ಸಿ) ʼಸೀತಾರೆ ಝಮೀನ್ ಪರ್' ಚಿತ್ರಕ್ಕೆ ಯು/ಎ 13+ ಪ್ರಮಾಣಪತ್ರ ನೀಡಿದೆ. ಆದರೆ ಮಂಡಳಿಯ ಪರಿಷ್ಕರಣಾ ಸಮಿತಿಯು ಐದು ಹೊಸ ಬದಲಾವಣೆಗಳನ್ನು ಸೂಚಿಸಿದೆ.
ಬಾಲಿವುಡ್ ಹಂಗಾಮಾ ವರದಿಯಂತೆ, ಚಿತ್ರಕ್ಕೆ ಸುಮಾರು ಐದು ಮಾರ್ಪಾಡುಗಳನ್ನು ಮಾಡಲು ನಿರ್ಮಾಪಕರಿಗೆ ಸೂಚಿಸಿದೆ. 'ಬಿಸಿನೆಸ್ ವುಮನ್' ಪದವನ್ನು 'ಬಿಸಿನೆಸ್ ಪರ್ಸನ್' ಎಂದು ಬದಲಾಯಿಸಲು ಹೇಳಿದೆ. 'ಮೈಕೆಲ್ ಜಾಕ್ಸನ್' ಬದಲಿಗೆ 'ಲವ್ ಬರ್ಡ್ಸ್' ಎಂದು ಸೇರಿಸುವಂತೆ ಸೂಚಿಸಿದೆ. 'ಕಮಲ್' (ಕಮಲ) ಪದವನ್ನು ದೃಶ್ಯದಿಂದ ತೆಗೆದುಹಾಕುವಂತೆಯೂ ಸೂಚಿಸಿದೆ. ಇದಲ್ಲದೆ ಚಿತ್ರಕ್ಕೆ ಪ್ರಧಾನಿ ಮೋದಿಯ ಸಾಲುಗಳನ್ನು ಸೇರಿಸಲು ನಿರ್ದೇಶಿಸಿದೆ.
ಆರ್.ಎಸ್. ಪ್ರಸನ್ನ ನಿರ್ದೇಶನದ ಈ ಚಿತ್ರದಲ್ಲಿ ಖಾನ್ ಮತ್ತು ಜೆನೆಲಿಯಾ ದೇಶಮುಖ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ಜೂನ್ 20 ರಂದು ಬಿಡುಗಡೆಯಾಗಲಿದೆ. ಕ್ರೀಡಾಧಾರಿತ ಚಲನಚಿತ್ರವು 2018ರಲ್ಲಿ ಬಿಡುಗಡೆಯಾಗಿದ್ದ ಸ್ಪ್ಯಾನಿಶ್ ಚಲನಚಿತ್ರವಾದ 'ಚಾಂಪಿಯನ್ಸ್'ನ ಅಧಿಕೃತ ರಿಮೇಕ್ ಆಗಿದೆ.
ಈ ಚಲನಚಿತ್ರವು 2007ರಲ್ಲಿ ಬಿಡುಗಡೆಯಾಗಿದ್ದ 'ತಾರೆ ಝಮೀನ್ ಪರ್' ಚಿತ್ರದ ದ್ವಿತೀಯ ಭಾಗವಾಗಿದೆ. ಆಮಿರ್ ಖಾನ್ ರ ವೃತ್ತಿಜೀವನದಲ್ಲಿ ಅವರಿಗೆ ಭಾರಿ ಜನಮನ್ನಣೆ ತಂದುಕೊಟ್ಟ ಚಿತ್ರ ಇದಾಗಿತ್ತು.
ಪ್ರಮುಖ ರಂಗ ನಿರ್ದೇಶಕ ವಾಮನ್ ಕೇಂದ್ರೆ ನೇತೃತ್ವದ 9 ಸದಸ್ಯರ ಪರಿಷ್ಕರಣಾ ಸಮಿತಿಯು ಚಿತ್ರವನ್ನು ಪರಿಶೀಲಿಸಿದೆ.