ಸಿಐಡಿ ಖ್ಯಾತಿಯ ನಟ ದಿನೇಶ್ ಫಡ್ನಿಸ್ ನಿಧನ

ದಿನೇಶ್ ಫಡ್ನಿಸ್ (X/@Yours_Viru)
ಮುಂಬೈ: ದೂರದರ್ಶನದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ಸಿಐಡಿ ಧಾರಾವಾಹಿಯಲ್ಲಿ ಫ್ರೆಡರಿಕ್ಸ್ ಪಾತ್ರ ನಿರ್ವಹಿಸಿದ್ದ ನಟ ದಿನೇಶ್ ಫಡ್ನಿಸ್ ಬಹು ಅಂಗಾಂಗ ವೈಫಲ್ಯದಿಂದ ಮಂಗಳವಾರ ನಿಧನರಾಗಿದ್ದಾರೆ. ಅವರಿಗೆ 57 ವರ್ಷ ವಯಸ್ಸಾಗಿತ್ತು. ಆ ಧಾರಾವಾಹಿಯಲ್ಲಿ ಅವರೊಂದಿಗೆ ದಯಾ ಪಾತ್ರವನ್ನು ನಿರ್ವಹಿಸಿದ್ದ ಸಹ ನಟ ದಯಾನಂದ್ ಶೆಟ್ಟಿ ಈ ಸುದ್ದಿಯನ್ನು ದೃಢಪಡಿಸಿದ್ದು, “ದಿನೇಶ್ ಮುಂಜಾನೆ 12.08ರ ವೇಳೆಗೆ ತಮ್ಮ ಕೊನೆಯುಸಿರೆಳೆದರು” ಎಂದು ತಿಳಿಸಿದ್ದಾರೆ. ದಿನೇಶ್ ಫಡ್ನಿಸ್ ಮುಂಬೈನ ತುಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು indianexpress.com ವರದಿ ಮಾಡಿದೆ.
ದಿನೇಶ್ ತೀವ್ರ ಸ್ವರೂಪದ ಸಮಸ್ಯೆಗಳಿಗೆ ಈಡಾಗಿದ್ದರಿಂದ, ಕಳೆದ ರಾತ್ರಿ ಅವರಿಗೆ ಒದಗಿಸಲಾಗಿದ್ದ ವೆಂಟಿಲೇಟರ್ ನೆರವವನ್ನು ಹಿಂಪಡೆಯಲಾಗಿತ್ತು ಎಂದು ದಯಾನಂದ ಶೆಟ್ಟಿ ಹೇಳಿದ್ದಾರೆ. ದಿನೇಶ್ ಫಡ್ನಿಸ್ ಅವರ ಅಂತ್ಯಕ್ರಿಯೆಯು ಇಂದು ನಡೆಯಲಿದೆ.
ಇದಕ್ಕೂ ಮುನ್ನ, ರವಿವಾರ ಹೃದಯ ಸ್ತಂಭನಕ್ಕೆ ಒಳಗಾಗಿದ್ದರಿಂದ ದಿನೇಶ್ ಪಡ್ನಿಸ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿತ್ತು. ಆದರೆ, ದಿನೇಶ್ ಫಡ್ನಿಸ್ ಹೃದಯ ಸ್ತಂಭನಕ್ಕೆ ಒಳಗಾಗಿರಲಿಲ್ಲ, ಬದಲಿಗೆ ಯಕೃತ್ತು ಹಾನಿಗೀಡಾಗಿದ್ದರು ಎಂದು ದಯಾನಂದ ಶೆಟ್ಟಿ ದೃಢಪಡಿಸಿದ್ದಾರೆ.
ದೂರದರ್ಶನದಲ್ಲಿ ಸುದೀರ್ಘ ಕಾಲ ಪ್ರಸಾರವಾಗಿದ್ದ ಸಿಐಡಿ ಧಾರಾವಾಹಿಯಲ್ಲಿ ದಿನೇಶ್ ಫಡ್ನಿಸ್ ನಿರ್ವಹಿಸಿದ್ದ ಫ್ರೆಡರಿಕ್ಸ್ ಪಾತ್ರದಿಂದ ಮನೆ ಮಾತಾಗಿದ್ದರು. ಈ ಧಾರಾವಾಹಿಯು 1998ರಲ್ಲಿ ಮೊದಲ ಬಾರಿಗೆ ಸೋನಿ ಟಿವಿಯಲ್ಲಿ ಪ್ರಸಾರವಾಗಿತ್ತು ಹಾಗೂ ಸುದೀರ್ಘ 20 ವರ್ಷಗಳ ಕಾಲ ಬಿತ್ತರಗೊಂಡಿತ್ತು. ಇದಲ್ಲದೆ, ಅವರು ಜನಪ್ರಿಯ ಕಾರ್ಯಕ್ರಮವಾದ “ತಾರಕ್ ಮೆಹ್ತಾ ಕಾ ಉಲ್ಟಾ ಚಷ್ಮಾ’ದಲ್ಲೂ ಕಾಣಿಸಿಕೊಂಡಿದ್ದರು. ಇದರೊಂದಿಗೆ ಸೂಪರ್ 30 ಹಾಗೂ ಸರ್ಫರೋಷ್ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದರು.







