‘ಡೆವಿಲ್’ ನೋಡುವಂತೆ ಜೈಲಿನಿಂದಲೇ ವಿನಂತಿಸಿದ ದರ್ಶನ್; ಸಿನಿಮಾಗೆ ಅಭಿಮಾನಿಗಳ ಪ್ರಶಂಸೆ

Photo source: X
ಜೈಲಿನಲ್ಲಿರುವಾಗಲೇ ಎರಡು ಸಿನಿಮಾ ಬಿಡುಗಡೆ ಮಾಡಿ ದಾಖಲೆ
ನಟ ದರ್ಶನ್ ತೂಗುದೀಪ ಬಳ್ಳಾರಿ ಜೈಲಿನಲ್ಲಿರುವಂತೆಯೇ ಅವರು ನಟಿಸಿದ ‘ಡೆವಿಲ್’ ಸಿನಿಮಾ ಬಿಡುಗಡೆಯಾಗಿ ಅಭಿಮಾನಿಗಳಿಂದ ಪ್ರಶಂಸೆ ವ್ಯಕ್ತವಾಗಿದೆ. ದರ್ಶನ್ ಬುಧವಾರ ಜೈಲಿನಿಂದಲೇ ಅಭಿಮಾನಿಗಳಿಗೆ ಸಂದೇಶ ಕಳುಹಿಸಿ ಚಿತ್ರವನ್ನು ಯಶಸ್ವಿಗೊಳಿಸುವಂತೆ ವಿನಂತಿಸಿಕೊಂಡಿದ್ದರು. ಇದೀಗ ಅವರ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಚಿತ್ರಮಂದಿರಕ್ಕೆ ಹೋಗಿ ಅಭಿಮಾನಿಗಳ ಜೊತೆಗೂಡಿ ಸಿನಿಮಾ ನೋಡಿದ್ದಾರೆ.
ವಾರಾಂತ್ಯದಲ್ಲಿ ಉತ್ತಮ ಗಳಿಕೆಯ ನಿರೀಕ್ಷೆ
ಬಹುತೇಕ ಚಿತ್ರಮಂದಿರಗಳಲ್ಲಿ ಬೆಳಿಗ್ಗೆ 6.30ರಿಂದಲೇ ಸಿನಿಮಾ ಬಿಡುಗಡೆಯಾಗಿದೆ. ಗುರುವಾರವೇ ಬಿಡುಗಡೆಯಾಗಿರುವ ಸಿನಿಮಾ ವಾರಾಂತ್ಯದಲ್ಲಿ ಉತ್ತಮ ಗಳಿಕೆಯ ನಿರೀಕ್ಷೆ ಹೊಂದಿದೆ. ದರ್ಶನ್ ರನ್ನು ಪರದೆಯ ಮೇಳೆ ನೋಡಲು ಕಾದು ಕುಳಿತಿದ್ದ ಅಭಿಮಾನಿಗಳು ಸಿನಿಮಾವನ್ನು ಬೆಂಬಲಿಸಿದ್ದಾರೆ.
ಜೈಲಿನಲ್ಲಿದ್ದೇ ಸಿನಿಮಾ ಬಿಡುಗಡೆ ದಾಖಲೆ
ದರ್ಶನ್ ಎರಡು ಬಾರಿ ಜೈಲು ಸೇರಿದ್ದು, ಎರಡು ಬಾರಿಯೂ ಸಿನಿಮಾಗಳು ರಿಲೀಸ್ ಆಗಿವೆ. ಇದಕ್ಕೂ ಮೊದಲು ದರ್ಶನ್ ಜೈಲು ಸೇರಿದಾಗ ‘ಸಾರಥಿ’ ಸಿನಿಮಾ ಬಿಡುಗಡೆಯಾಗಿ ಯಶಸ್ವಿಯಾಗಿತ್ತು.
ಡೆವಿಲ್ ಸಿನಿಮಾದಲ್ಲಿ ಪ್ರಕಾಶ್ ವೀರ್ ನಿರ್ದೇಶನವಿದೆ. ನಾಯಕಿಯರಾಗಿ ರಚನಾ ರೈ, ಶರ್ಮಿಳಾ ಮಾಂಡ್ರೆ ನಟಿಸಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್, ವಿನಯ್ ಗೌಡ, ಶೋಭರಾಜ್ ಮೊದಲಾದವರು ನಟಿಸಿದ್ದಾರೆ.
ಚಿತ್ರದುರ್ಗದ ನಿವಾಸಿ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿ 13 ಮಂದಿ ಜೈಲಿನಲ್ಲಿದ್ದಾರೆ.







