1000 ಕೋಟಿ ಕ್ಲಬ್ ಗೆ ಪ್ರವೇಶಿಸಿದ ‘ಧುರಂಧರ್’ ಚಿತ್ರ

ಧುರಂಧರ್ ಚಿತ್ರ | Photo Credit ; bookmyshow.com
ರಣ್ ವೀರ್ ಸಿಂಗ್ ಮತ್ತು ಅಕ್ಷಯ್ ಖನ್ನಾ ನಟಿಸಿರುವ ‘ಧುರಂಧರ್’ ಸಿನಿಮಾ 21 ದಿನಗಳಲ್ಲಿ ಸಾವಿರ ಕೋಟಿ ರೂಪಾಯಿ ಗಳಿಕೆ ಮಾಡಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ.
ಆದಿತ್ಯ ಧರ್ ನಿರ್ಮಾಣದ ಗೂಢಾಚಾರಿಕೆ ಕಥೆಯುಳ್ಳ ‘ಧುರಂಧರ್’ ಚಿತ್ರವು ಅತಿದೊಡ್ಡ ಬಾಕ್ಸ್ ಆಫೀಸ್ ಲಾಭಗಳ ಸಿನಿಮಾಗಳ ಸಾಲಿಗೆ ಸೇರಿದ್ದು, 21 ದಿನಗಳಲ್ಲಿ ವಿಶ್ವಾದ್ಯಂತ 1000 ಕೋಟಿ ರೂ.ಗಳ ಗಳಿಕೆಯನ್ನು ಮೀರಿದೆ. ಕೆಲವೇ ಭಾರತೀಯ ಸಿನಿಮಾಗಳು 1000 ಕೋಟಿ ರೂಪಾಯಿ ಗಳಿಕೆಯ ಮೈಲಿಗಲ್ಲನ್ನು ದಾಟಿವೆ. 2025ರಲ್ಲಿ ಅತಿ ಹೆಚ್ಚು ಲಾಭ ಗಳಿಸಿದ ಸಿನಿಮಾ ಎನ್ನುವ ಹಿರಿಮೆಯೂ ‘ಧುರಂಧರ್’ಗೆ ದೊರೆತಿದೆ.
ರಣ್ ವೀರ್ ಸಿಂಗ್ ಮತ್ತು ಅಕ್ಷಯ್ ಖನ್ನಾ ನಟಿಸಿರುವ ‘ಧುರಂಧರ್’ ಸಿನಿಮಾ 21 ದಿನಗಳಲ್ಲಿ ಸಾವಿರ ಕೋಟಿ ರೂಪಾಯಿ ಗಳಿಕೆ ಮಾಡಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ಡಿಸೆಂಬರ್ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸಿನಿಮಾ ಎಲ್ಲಾ ನಿರೀಕ್ಷೆಗಳನ್ನು ಮೀರಿ ತ್ವರಿತವಾಗಿ ಗಳಿಕೆಯ ಸಾಧನೆ ಮಾಡಿದೆ. ಈ ಸಂದರ್ಭದಲ್ಲಿ 1000 ಕೋಟಿ ರೂ. ಗಳಿಕೆ ಮಾಡಿದ ಇತರ ಸಿನಿಮಾಗಳತ್ತ ಒಮ್ಮೆ ಕಣ್ಣು ಹಾಯಿಸೋಣ.
2017ರಲ್ಲಿ ಎಸ್.ಎಸ್. ರಾಜಮೌಳಿ ಅವರ ‘ಬಾಹುಬಲಿ 2: ದಿ ಕನ್ಕ್ಲೂಶನ್’ ಮೊತ್ತ ಮೊದಲ ಬಾರಿಗೆ 1000 ಕೋಟಿ ರೂ. ಗಳಿಕೆಯ ದಾಖಲೆಯನ್ನು ಮಾಡಿತ್ತು. ಆ ಸಿನಿಮಾ ಜಾಗತಿಕವಾಗಿ 1788.06 ಕೋಟಿ ರೂ. ಗಳಿಕೆಯನ್ನು ಮಾಡಿದೆ.
2016ರಲ್ಲಿ ಬಿಡುಗಡೆಯಾದ ‘ದಂಗಲ್’ 2017ರ ಮೇ ನಲ್ಲಿ ಚೀನೀ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಯಾಗಿ ದಾಖಲೆ ಗಳಿಕೆ ಮಾಡಿ ‘ಬಾಹುಬಲಿ 2’ರ ದಾಖಲೆಯನ್ನು ಮೀರಿಸಿತು. ಅಮೀರ್ ಖಾನ್–ನಿತೀಶ್ ತಿವಾರಿ ಸಿನಿಮಾ 2000 ಕೋಟಿ ರೂ. ಗಳಿಕೆ ಮಾಡಿದ ಏಕೈಕ ಭಾರತೀಯ ಸಿನಿಮಾ ಎನ್ನುವ ದಾಖಲೆ ಉಳಿಸಿಕೊಂಡಿದೆ. ಆ ಸಿನಿಮಾ ಜಾಗತಿಕವಾಗಿ 2070 ಕೋಟಿ ರೂ. ಗಳಿಕೆ ಮಾಡಿದೆ. ಇಂದಿಗೂ ಅತ್ಯಂತ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎನ್ನುವ ದಾಖಲೆ ‘ದಂಗಲ್’ ಬಳಿಯಲ್ಲಿದೆ.
2022ರಲ್ಲಿ ರಾಜಮೌಳಿ ಅವರ ‘ಆರ್ಆರ್ಆರ್’ ಜಾಗತಿಕವಾಗಿ 1,230 ಕೋಟಿ ರೂ. ಗಳಿಕೆ ಮಾಡಿತು. ಅದಾದ ಕೆಲವೇ ತಿಂಗಳಲ್ಲಿ ಬಂದ ಪ್ರಶಾಂತ್ ನೀಲ್ ಅವರ ಕನ್ನಡ ಸಿನಿಮಾ ‘ಕೆಜಿಎಫ್: ಚಾಪ್ಟರ್ 2’ ಕೂಡ 1,215 ಕೋಟಿ ರೂ. ಗಳಿಕೆ ಮಾಡಿ ಸಾವಿರ ಕೋಟಿ ಗಳಿಕೆಯ ಮೈಲಿಗಲ್ಲನ್ನು ಮೀರಿದೆ.
2023ರಲ್ಲಿ ಅಟ್ಲೀ ನಿರ್ದೇಶನದ ‘ಜವಾನ್’ ಮತ್ತು ಸಿದ್ಧಾರ್ಥ್ ಆನಂದ್ ಅವರ ‘ಪಠಾಣ್’ ಸಿನಿಮಾಗಳು 1000 ಕೋಟಿ ರೂ. ಗಳಿಕೆಯನ್ನು ಮೀರಿದವು. ಅವು ಕ್ರಮವಾಗಿ 1,160 ಕೋಟಿ ರೂ. ಮತ್ತು 1,055 ಕೋಟಿ ರೂ. ಗಳಿಕೆ ಮಾಡಿವೆ.
‘ಧುರಂಧರ್’ ಸಿನಿಮಾ ತಂಡ ಪ್ರಚಾರಕ್ಕೆ ಹೆಚ್ಚು ಮಹತ್ವ ನೀಡಿರಲಿಲ್ಲ. ಬಲವಾದ ಬಾಯಿ ಮಾತು, ನಿರಂತರ ಪ್ರೇಕ್ಷಕರ ಆಸಕ್ತಿ ಮತ್ತು ರಜೆಗಳಿದ್ದ ಕಾರಣ ಸಿನಿಮಾದ ಮೇಲಿನ ಕುತೂಹಲ ಇನ್ನೂ ಜೀವಂತವಾಗಿದೆ. ಕಡಿಮೆ ಪ್ರಚಾರ ಮತ್ತು ಹೆಚ್ಚು ಚರ್ಚೆಯ ಕಾರ್ಯತಂತ್ರ ಸಿನಿಮಾಗೆ ಲಾಭ ತಂದುಕೊಟ್ಟಿದೆ.
ರಣ್ ವೀರ್ ಸಿಂಗ್ ಅವರು ಗೂಢಾಚಾರನ ಪಾತ್ರದಲ್ಲಿ ನೀಡಿದ ನಟನೆ ಜನರಿಂದ ಭಾರೀ ಪ್ರಶಂಸೆಗೆ ಪಾತ್ರವಾಗಿದೆ. ವಿಮರ್ಶಕರು ಹಾಗೂ ಪ್ರೇಕ್ಷಕರು ರಣ್ ವೀರ್ ಸಿಂಗ್ ಅವರ ಅಭಿನಯವನ್ನು ಕೊಂಡಾಡಿದ್ದಾರೆ.
ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ವಿಕಿ ಕೌಶಲ್ ಅಭಿನಯದ ಹಿಂದಿ ಸಿನಿಮಾ ‘ಛಾವಾ’ ವಿಶ್ವಾದ್ಯಂತ 807.91 ಕೋಟಿ ರೂ. ಗಳಿಸಿದರೆ, ಕನ್ನಡ ಸಿನಿಮಾ ‘ಕಾಂತಾರ: ಅಧ್ಯಾಯ 1’ ಜಾಗತಿಕವಾಗಿ 852 ಕೋಟಿ ರೂ. ಗಳಿಸಿದೆ. ಆದರೆ ‘ಧುರಂಧರ್’ ಕೇವಲ 21 ದಿನಗಳಲ್ಲಿ ವಿಶ್ವಾದ್ಯಂತ 1000 ಕೋಟಿ ರೂ.ಗಳನ್ನು ದಾಟಿ, ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾವಾಗಿ ಹೊರಹೊಮ್ಮಿದೆ.







