‘ಜವಾನ್’ ಚಿತ್ರಕ್ಕಾಗಿ ಶಾರೂಖ್, ಅಟ್ಲೀಗೆ ಧನ್ಯವಾದ ಹೇಳಿದ ಡಾ. ಕಫೀಲ್ ಖಾನ್: ಕಾರಣವೇನು ಗೊತ್ತೇ?

ಡಾ. ಕಫೀಲ್ ಖಾನ್ , ಜವಾನ್ ಚಿತ್ರ | Photo: PTI
ಮುಂಬೈ: ಶಾರೂಖ್ ಅಭಿನಯದ ‘ಜವಾನ್’ ಚಿತ್ರ ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದ್ದು, ಚಿತ್ರದಲ್ಲಿ ಕೆಲವು ರಾಜಕೀಯ ಹಾಗೂ ಸಾಮಾಜಿಕ ಸಮಸ್ಯೆಗಳ ಬಗ್ಗೆಯೂ ಬೆಳಕು ಚೆಲ್ಲಲಾಗಿದೆ, ಅದರಲ್ಲೂ ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯ ಬಗೆಗಿನ ದೃಶ್ಯ ನೆಟ್ಟಿಗರ ನಡುವೆ ಚರ್ಚೆಯನ್ನು ಸೃಷ್ಟಿಸಿದೆ.
ಉತ್ತರಪ್ರದೇಶದ ಗೋರಖ್ಪುರದಲ್ಲಿ 2017 ರಲ್ಲಿ ನಡೆದ ಆಕ್ಸಿಜನ್ ದುರಂತದ ಕೇಂದ್ರ ಬಿಂದುವಾಗಿದ್ದ ಡಾ. ಕಫೀಲ್ ಖಾನ್ ಅವರ ಬದುಕಿನಿಂದ ಸ್ಪೂರ್ತಿ ಪಡೆದು ಈ ದೃಶ್ಯವನ್ನು ಹೆಣೆಯಲಾಗಿದೆ ಎಂದು ಹೇಳಲಾಗಿದೆ.
ಆಕ್ಸಿಜನ್ ಕೊರತೆಯಿಂದ 63 ಮಕ್ಕಳ ಸಾವಿಗೆ ಕರ್ತವ್ಯ ಲೋಪಕ್ಕಾಗಿ ಸರ್ಕಾರವು ವೈದ್ಯರನ್ನು ಬಂಧಿಸುವ ದೃಶ್ಯಕ್ಕಾಗಿ ಡಾ. ಕಫೀಲ್ ನಿರ್ದೇಶಕ ಮತ್ತು ನಿರ್ಮಾಪಕ-ನಟ ಶಾರುಖ್ ಖಾನ್ ಅವರಿಗೆ ಧನ್ಯವಾದ ಹೇಳಿದ್ದಾರೆ.
ಡಾ. ಕಫೀಲ್ ಖಾನ್ ಅವರು ಶನಿವಾರ X (ಹಿಂದಿನ ಟ್ವಿಟರ್) ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಜವಾನ್ ಚಿತ್ರ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.
ನಾನು ಇನ್ನೂ ಚಿತ್ರವನ್ನು ನೋಡಿಲ್ಲ, ಆದರೆ ಬಿಡುಗಡೆಯಾದಾಗಿನಿಂದ ಸಂದೇಶಗಳು ಮತ್ತು ಶುಭಾಶಯಗಳನ್ನು ಪಡೆಯುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.
“ನಾನು ಜವಾನ್ ಚಿತ್ರವನ್ನು ನೋಡಿಲ್ಲ ಆದರೆ ಜನರು ನನಗೆ ಸಂದೇಶ ಕಳುಹಿಸುತ್ತಿದ್ದಾರೆ. ಚಲನಚಿತ್ರದ ಜಗತ್ತು ಮತ್ತು ನಿಜ ಜೀವನದ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಸೇನೆಯಲ್ಲಿನ ತಪ್ಪಿತಸ್ಥರು, ಆರೋಗ್ಯ ಸಚಿವರು ಮುಂತಾದವರಿಗೆ ಶಿಕ್ಷೆಯಾಗುತ್ತದೆ ಆದರೆ ಇಲ್ಲಿ ನಾನು ಮತ್ತು ಆ 81 ಕುಟುಂಬಗಳು ಇನ್ನೂ ನ್ಯಾಯಕ್ಕಾಗಿ ಅಲೆದಾಡುತ್ತಿದ್ದೇವೆ. ಸಾಮಾಜಿಕ ಸಮಸ್ಯೆಯನ್ನು ಎತ್ತಿದ್ದಕ್ಕಾಗಿ ಶಾರೂಖ್ ಖಾನ್ ಸರ್ ಮತ್ತು ನಿರ್ದೇಶಕ ಅಟ್ಲೀ ಕುಮಾರ್ ಸರ್ ಅವರಿಗೆ ಧನ್ಯವಾದಗಳು. ” ಎಂದು ಕಫೀಲ್ ಖಾನ್ ಟ್ವೀಟ್ ಮಾಡಿದ್ದಾರೆ.
ಗೋರಖ್ಪುರದ ಬಾಬಾ ರಾಘವ್ ದಾಸ್ (BRD) ವೈದ್ಯಕೀಯ ಕಾಲೇಜಿನಲ್ಲಿ ಉಪನ್ಯಾಸಕ ಮತ್ತು ವೈದ್ಯರಾಗಿದ್ದ ಕಫೀಲ್ ಖಾನ್ ಅವರು, ಬಾಕಿ ಪಾವತಿಸದ ಕಾರಣ ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆ ಸ್ಥಗಿತಗೊಂಡಿರುವುದನ್ನು ಕಂಡು ಅಧಿಕಾರಿಗಳ ಗಮನಕ್ಕೆ ತರಲು ಪ್ರಯತ್ನಿಸಿದ್ದರು. ಅದಾಗ್ಯೂ, ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ಸಿಗದಿದ್ದಾಗ ಸ್ವತಃ ಅವರೇ ತಮ್ಮ ಸ್ವಂತ ಖರ್ಚಿನಲ್ಲಿ ಆಮ್ಲಜನಕ ಪೂರೈಕೆ ಮಾಡಿದ್ದರು. ಅದಾಗ್ಯೂ, ಈ ಮಧ್ಯೆ, 63 ಮಕ್ಕಳು ತೀವ್ರವಾದ ಎನ್ಸೆಫಾಲಿಟಿಸ್ ಸಿಂಡ್ರೋಮ್ನಿಂದ ಮೃತಪಟ್ಟಿದ್ದರು. ನಂತರ, ಉತ್ತರ ಪ್ರದೇಶ ಸರ್ಕಾರವು ಆಮ್ಲಜನಕದ ಕೊರತೆಯ ಕಾರಣವನ್ನು ನಿರಾಕರಿಸಿದ್ದು, ಬದಲಿಗೆ ಕರ್ತವ್ಯ ಲೋಪಕ್ಕಾಗಿ ಕಫೀಲ್ ಅವರನ್ನು ಜೈಲಿಗೆ ಹಾಕಿತ್ತು. ಇದು ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿತ್ತು.