Dileep ಚಿತ್ರದ ಪೋಸ್ಟರ್ ಹಂಚಿಕೊಂಡ ಮೋಹನ್ ಲಾಲ್ ಗೆ ಡಬ್ಬಿಂಗ್ ಕಲಾವಿದೆ ಭಾಗ್ಯಲಕ್ಷ್ಮಿ ತರಾಟೆ

credit: newindianexpress
ತಿರುವನಂತಪುರ,ಡಿ.15: ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ತೀರ್ಪು ಹೊರಬಿದ್ದ ಬಳಿಕ ‘ಭಾ ಭಾ ಬಾ’ ಚಿತ್ರದ ಪೋಸ್ಟರ್ ಹಂಚಿಕೊಂಡಿದ್ದಕ್ಕಾಗಿ ಮಲಯಾಳಂ ನಟ ಮೋಹನಲಾಲ್ ವಿರುದ್ಧ ಕಿಡಿ ಕಾರಿರುವ ಖ್ಯಾತ ಡಬ್ಬಿಂಗ್ ಕಲಾವಿದೆ ಭಾಗ್ಯಲಕ್ಷ್ಮಿ ಅವರು, ಅದನ್ನು ಭಾವನೆಗಳನ್ನು ಪರಿಗಣಿಸದ ಅವಿವೇಕಿ ಕೃತ್ಯವಾಗಿದೆ ಎಂದು ಬಣ್ಣಿಸಿದ್ದಾರೆ.
ಸೋಮವಾರ ಕೇರಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಭಾಗ್ಯಲಕ್ಷ್ಮಿ,ಚಿತ್ರದ ಪೋಸ್ಟರ್ ನ್ನು ಹಂಚಿಕೊಳ್ಳುವ ಮುನ್ನ ಮೋಹನಲಾಲ್ ಒಂದು ಕ್ಷಣವಾದರೂ ಯೋಚಿಸಿದ್ದರೇ ಎಂದು ಪ್ರಶ್ನಿಸಿದರು. ಪ್ರಕರಣದಲ್ಲಿ ಎಂಟನೇ ಆರೋಪಿಯಾಗಿದ್ದ ದಿಲೀಪ್ ನಾಯಕ ನಟನಾಗಿದ್ದ ಚಿತ್ರದಲ್ಲಿ ಮೋಹನಲಾಲ್ ಅತಿಥಿ ನಟನಾಗಿ ಕಾಣಿಸಿಕೊಂಡಿದ್ದರು.
‘ತೀರ್ಪು ಬಂದ ದಿನವೇ ಆ ಪೋಸ್ಟರ್ ಬಿಡುಗಡೆ ಮಾಡಿದವರು ನಾವೆಲ್ಲರೂ ಪ್ರೀತಿಸುವ ಅದೇ ಮೋಹನ್ ಲಾಲ್ ಅಲ್ಲವೇ? ಆ ಕ್ಷಣದಲ್ಲಿ ತಾನೇನು ಮಾಡುತ್ತಿದ್ದೇನೆ ಎನ್ನುವುದನ್ನು ಅವರು ಯೋಚಿಸಬೇಕಿತ್ತಲ್ಲವೇ?’ ಎಂದು ಭಾಗ್ಯಲಕ್ಷ್ಮಿ ಪ್ರಶ್ನಿಸಿದರು.
ದೂರು ದಾಖಲಿಸುವ ಸಂತ್ರಸ್ತೆಯ ನಿರ್ಧಾರದಿಂದ ಚಿತ್ರರಂಗದಲ್ಲಿಯ ಇತರ ಹಲವಾರು ಮಹಿಳೆಯರು ಬದುಕುಳಿದಿದ್ದಾರೆ. ಸಂತ್ರಸ್ತೆ ದೂರು ಸಲ್ಲಿಸಲು ಮುಂದೆ ಬಂದಿರದಿದ್ದರೆ ಮುಂದಿನ ಬಲಿಪಶು ಮಂಜು ವಾರಿಯರ್ ಆಗುತ್ತಿದ್ದರು ಎಂದ ಅವರು, ಸಂತ್ರಸ್ತೆಗೆ ಉದ್ಯಮದ ಬೆಂಬಲದ ಕೊರತೆಗೆ ದಿಲೀಪ್ ರ ಆರ್ಥಿಕ ಪ್ರಭಾವ ಪ್ರಮುಖ ಕಾರಣವಾಗಿತ್ತು ಎಂದರು.







