ರಣವೀರ್ ಸಿಂಗ್ ವಿರುದ್ಧ ಅಸಹಕಾರ ಘೋಷಣೆ ಹಿಂತೆಗೆದುಕೊಂಡ FWICE; ಕಾನೂನು ಮಾರ್ಗದಲ್ಲಿ ಉತ್ತರಕ್ಕೆ ನಿರ್ಧಾರ

ರಣವೀರ್ ಸಿಂಗ್ | Photo Credit : PTI
ಜೂನ್ 3ರಂದು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ FWICE, “ರಣವೀರ್ ಸಿಂಗ್ ಅವರ ನ್ಯಾಯಾಲಯದ ನೋಟೀಸ್ಗೆ ಕಾನೂನು ಮಾರ್ಗಗಳ ಮೂಲಕ ಪ್ರತಿಕ್ರಿಯಿಸುತ್ತೇವೆ” ಎಂದು ಹೇಳಿದ್ದಾರೆ.
ರಣವೀರ್ ಸಿಂಗ್ ಮತ್ತು ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ (FWICE) ನಡುವಿನ ವಿವಾದ ಹೊಸ ಘಟ್ಟವನ್ನು ತಲುಪಿದೆ. FWICE ಬುಧವಾರ ರಣವೀರ್ ಸಿಂಗ್ ವಿರುದ್ಧ ಘೋಷಿಸಿದ ಅಸಹಕಾರ ನಿರ್ದೇಶನವನ್ನು ಹಿಂತೆಗೆದುಕೊಂಡಿದೆ. FWICE ಅಸಹಕಾರ ಘೋಷಣೆ ವಿರುದ್ಧ ರಣವೀರ್ ನ್ಯಾಯಾಲಯವನ್ನು ಸಂಪರ್ಕಿಸಿದ ಒಂದು ವಾರದ ನಂತರ ಈ ಬೆಳವಣಿಗೆ ನಡೆದಿದೆ.
ಜೂನ್ 3ರಂದು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ FWICE ಸದಸ್ಯರು, “ರಣವೀರ್ ಸಿಂಗ್ ಅವರ ನ್ಯಾಯಾಲಯದ ನೋಟೀಸ್ಗೆ ಕಾನೂನು ಮಾರ್ಗಗಳ ಮೂಲಕ ಪ್ರತಿಕ್ರಿಯಿಸುತ್ತೇವೆ” ಎಂದು ಹೇಳಿದ್ದಾರೆ.
ಈ ನಡುವೆ FWICE ಅಧ್ಯಕ್ಷ ಬಿ ಎನ್ ತಿವಾರಿ ಅವರು ತಮ್ಮ ನಿರ್ಧಾರಕ್ಕೆ ಕಾರಣವನ್ನೂ ತಿಳಿಸಿದರು. CINTAA (ಸಿನಿ ಮತ್ತು ಟಿವಿ ಕಲಾವಿದರ ಸಂಘಟನೆ) ಮತ್ತು IMPPA (ಇಂಡಿಯನ್ ಮೋಷನ್ ಪಿಕ್ಚರ್ ನಿರ್ಮಾಪಕರ ಸಂಘ) ಸೇರಿದಂತೆ ಉದ್ಯಮ ಸಂಸ್ಥೆಗಳಿಂದ ವಿನಂತಿಗಳನ್ನು ಸ್ವೀಕರಿಸಿದ ನಂತರ ಫೆಡರೇಶನ್ ಅಸಹಕಾರದ ನಿರ್ದೇಶನವನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದೆ ಎಂದು ಅವರು ತಿಳಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿ FWICE ಚಿತ್ರೋದ್ಯಮಕ್ಕೆ ಸಂಬಂಧಿಸಿದ ಹಲವು ಸಂಘಟನೆಗಳ ಜೊತೆಗೆ ಸಂಪರ್ಕದಲ್ಲಿದೆ ಮತ್ತು ಪರಿಹಾರ ಕಂಡುಹಿಡಿಯಲು ವ್ಯಾಪಕ ಬೆಂಬಲವಿದೆ. ಇತ್ತೀಚೆಗೆ ಪ್ರೊಡ್ಯೂಸರ್ ಗಿಲ್ಡ್ ಆಫ್ ಇಂಡಿಯಾವು ಸೌಹಾರ್ದಯುತ ಇತ್ಯರ್ಥಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಅಸಹಕಾರದ ಘೋಷಣೆ ಹಿಂತೆಗೆದುಕೊಂಡಿದ್ದಾಗಿ FWICE ತಿಳಿಸಿದೆ.
ಕಳವಳ ವ್ಯಕ್ತಪಡಿಸಿದ CINTAA:
ರಣವೀರ್ ಸಿಂಗ್ ಮತ್ತು ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ (FWICE) ನಡುವಿನ ವಿವಾದವನ್ನು ನಿಭಾಯಿಸಲಾಗುತ್ತಿರುವ ಬಗ್ಗೆ ಕಲಾವಿದರ ಸಂಘಟನೆ CINTAA (ಸಿನಿ ಮತ್ತು ಟಿವಿ ಕಲಾವಿದರ ಸಂಘಟನೆ) ಕಳವಳ ವ್ಯಕ್ತಪಡಿಸಿದೆ. ಈ ವಿಷಯವನ್ನು ವಿವಾದವಾಗಿ ಉಲ್ಬಣಗೊಳಿಸುವ ಮೊದಲು ತನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿಲ್ಲ ಎಂದು CINTAA ಹೇಳಿದೆ.
ಮಾಧ್ಯಮಗಳಿಗೆ ಅಭಿಪ್ರಾಯ ವ್ಯಕ್ತಪಡಿಸಿದ CINTAA ಸದಸ್ಯರು ಸಂವಹನದ ಮೂಲಕ ಮತ್ತು ರಚನಾತ್ಮಕವಾಗಿ ವಿವಾದವನ್ನು ಪರಿಹರಿಸುವ ಕಾರ್ಯವಿಧಾನದ ಅಗತ್ಯವನ್ನು ಒತ್ತಿ ಹೇಳಿದರು. ಈ ವಿವಾದವು ಚಿತ್ರೋದ್ಯಮದೊಳಗೆ ಸಂಘರ್ಷಗಳನ್ನು ಹೇಗೆ ಪರಿಹರಿಸಲಾಗುತ್ತಿದೆ ಎನ್ನುವುದರಲ್ಲಿರುವ ದೊಡ್ಡ ಅಂತರವನ್ನು ಎತ್ತಿ ತೋರಿಸಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ವಿವಾದವು ಚಿತ್ರೋದ್ಯಮದಲ್ಲಿ ಮಂಡಳಿಗಳ ಅಧಿಕಾರ ಮತ್ತು ನಟ-ನಿರ್ಮಾಪಕ ಮತ್ತು ಚಲನಚಿತ್ರ ಸಂಘಗಳ ನಡುವಿನ ಭಿನ್ನಾಭಿಪ್ರಾಯ ಪರಿಹರಿಸಲು ಅಧಿಕೃತ, ಕಾನೂನುಬದ್ಧವಾಗಿ ಗುರುತಿಸಲಾದ ಚೌಕಟ್ಟಿನ ಕೊರತೆಯ ಬಗ್ಗೆ ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ.
ವಿವಾದದ ನಿರ್ವಹಣೆ ಪ್ರಶ್ನಿಸಿದ CINTAA:
ಒಟ್ಟು ಪ್ರಕರಣವನ್ನು ನಿರ್ವಹಿಸಿರುವ ವಿಧಾನದ ಕುರಿತು CINTAA ಅಧ್ಯಕ್ಷೆ ಫೂನಂ ಧಿಲ್ಲೋನ್ ನಿರಾಶೆ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡಿ ವಿಷಯವನ್ನು ಉಲ್ಬಣಗೊಳಿಸುವ ಮೊದಲು ಕಲಾವಿದರ ಮಂಡಳಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
“ಸಂಘಟನೆಗಳು ಎಲ್ಲರ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲೆಂದೇ ಅಸ್ತಿತ್ವದಲ್ಲಿವೆ. ರಣ್ವೀರ್ ಸಿಂಗ್ ಅವರು CINTAA ವನ್ನು ಸಂಪರ್ಕಿಸುತ್ತಿದ್ದರೆ ವಿವಾದ ಪರಿಹಾರಕ್ಕೆ ಕಾರ್ಯ ವಿಧಾನಗಳ ಮೂಲಕ ಸಹಾಯ ಮಾಡಬಹುದಾಗಿತ್ತು. ಎರಡೂ ಪಕ್ಷಗಳು ತಮ್ಮ ಬಳಿ ಯಾವುದೇ ವಿವರಗಳನ್ನು ಚರ್ಚಿಸದೆ ಇರುವ ಕಾರಣದಿಂದ ಯಾರದೇ ಪರವಾಗಿಯೂ ಮಾತನಾಡುವುದಿಲ್ಲ” ಎಂದು ಅವರು ಹೇಳಿದ್ದಾರೆ.
“ಒಟ್ಟು ಪ್ರಕರಣದ ಬಗ್ಗೆ ನನಗೆ ಮಾಹಿತಿಯಿಲ್ಲ. ರಣವೀರ್ ಅವರ ಅಭಿಪ್ರಾಯ ಏನೆಂದು ತಿಳಿದಿಲ್ಲ. ಮಾಧ್ಯಮದಲ್ಲಿ ಬಂದಿರುವ ವಿವರಗಳನ್ನು ಹೊರತುಪಡಿಸಿ ರಣವೀರ್ ಏನು ಯೋಚಿಸುತ್ತಿದ್ದಾರೆ ಎನ್ನುವುದು ನನಗೆ ತಿಳಿದಿಲ್ಲ. ಯಾವುದೇ ಜವಾಬ್ದಾರಿಯುತ ಹಸ್ತಕ್ಷೇಪ ಮಾಡುವ ಮೊದಲು ಸೂಕ್ತ ವಿಚಾರಣೆಯಾಗಬೇಕು ಮತ್ತು ಮಾಧ್ಯಮ ವರದಿಗಳಿಗಿಂತ ಹೆಚ್ಚಾಗಿ ಸತ್ಯಾಂಶಗಳನ್ನು ಆಧರಿಸಿರಬೇಕು” ಎಂದು ಅವರು ಹೇಳಿದ್ದಾರೆ.
CINTAA ಕಾರ್ಯಕಾರಿ ಸಮಿತಿ ಸದಸ್ಯರಾಗಿರುವ ನಟ ವಿಂದು ದಾರಾ ಸಿಂಗ್, “ಒಂದು ಕುಟುಂಬದಂತೆ ಕೆಲಸ ಮಾಡುತ್ತಿರುವ ಉದ್ಯಮಕ್ಕೆ ಈ ವಿವಾದ ದುರದೃಷ್ಟಕರ. ಮಂಡಳಿ ಸದಾ ಕಲಾವಿದರ ಪರವಾಗಿ ನಿಲ್ಲುತ್ತದೆ. ಆದರೆ ರಣವೀರ್ ಮತ್ತು ಫರ್ಹಾನ್ ಅಖ್ತರ್ ಸಾರ್ವಜನಿಕವಾಗಿ ಸಂಘರ್ಷಕ್ಕೆ ಇಳಿಯುವ ಬದಲಾಗಿ ಪರಸ್ಪರ ಮಾತುಕತೆಯಿಂದ ಸಮಸ್ಯೆ ಪರಿಹರಿಸಿಕೊಳ್ಳಬೇಕು. ರಣವೀರ್ ಅವರು ಬಲವಾದ ಕಾರಣವಿಲ್ಲದೆ ʼಡಾನ್ 3ʼಯಂತಹ ಫ್ರಾಂಚೈಸಿ ತೊರೆಯುತ್ತಾರೆ ಎನ್ನುವುದು ನಂಬಲು ಕಷ್ಟವಾಗುತ್ತದೆ. ಅದೇ ರೀತಿ ಸಿನಿಮಾಗೆ ಯಾವುದೇ ವಿಳಂಬವು ಹಲವಾರು ಜನರ ಮೇಲೆ ಪರಿಣಾಮ ಬೀರುತ್ತದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
FWICE ಮುಂದಿಟ್ಟಿರುವ ಅಸಹಕಾರ ನಿರ್ದೇಶನವೇನು?:
FWICE ಪತ್ರಿಕಾಗೋಷ್ಠಿ ನಡೆಸಿದ ನಂತರ ವಿವಾದ ಉಲ್ಬಣಗೊಂಡಿತ್ತು. ‘ಡಾನ್ 3’ ಸಿನಿಮಾದಿಂದ ರಣವೀರ್ ಸಿಂಗ್ ನಿರ್ಗಮನ ಸಂಬಂಧಿಸಿ FWICE ಅಸಹಕಾರ ನಿರ್ದೇಶನ ಘೋಷಿಸಿದೆ. FWICE ಮಾಡಿದ ಮೂರು ಸಂವಹನ ಪ್ರಯತ್ನಗಳಿಗೆ ನಟ ಪ್ರತಿಕ್ರಿಯಿಸಲಿಲ್ಲ ಮತ್ತು FWICE ಈ ಸಮಸ್ಯೆಯನ್ನು ಸಾರ್ವಜನಿಕವಾಗಿ ಪರಿಹರಿಸಲು ಯೋಜಿಸುತ್ತಿದೆ ಎಂಬುದು ತಿಳಿದ ನಂತರವಷ್ಟೇ ಸಂಪರ್ಕಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ವಿವಾದ ಇನ್ನೂ ಬಗೆಹರಿಯದೆ ಉಳಿದಿದೆ. ಫರ್ಹಾನ್ ಅಖ್ತರ್ ತಮಗಾದ ನಷ್ಟಕ್ಕೆ 45 ಕೋಟಿ ರೂ. ಪರಿಹಾರ ಕೇಳಿದ್ದಾರೆ. ಈ ಬಗ್ಗೆ ರಣ್ವೀರ್ ಅವರು ಒಕ್ಕೂಟದ (FWICE) ಜೊತೆಗೆ ಚರ್ಚೆ ನಡೆಸಲು ತಿಳಿಸಲಾಗಿದೆ. ಅದಾದ ಬಳಿಕ FWICE ಪ್ರೊಡ್ಯುಸರ್ ಗಿಲ್ಡ್ ಆಫ್ ಇಂಡಿಯಾ ಮತ್ತು ಇಂಡಿಯನ್ ಮೋಷನ್ ಪಿಕ್ಚರ್ ಪ್ರೊಡ್ಯೂಸರ್ಸ್ ಅಸೋಸಿಯೇಶನ್ ಗೆ ಪತ್ರ ಬರೆದಿದೆ. ಭವಿಷ್ಯದಲ್ಲಿ ಇಂತಹ ಸಂದರ್ಭಗಳಲ್ಲಿ ನಿರ್ಮಾಪಕರನ್ನು ರಕ್ಷಿಸಲು ಚೌಕಟ್ಟು ರೂಪಿಸುವಂತೆ ಒಕ್ಕೂಟ ಒತ್ತಾಯಿಸಿದೆ.






