ಮೋಹನ್ ಲಾಲ್ ಅಭಿಮಾನಿಗಳಿಗೆ ಸಿಹಿಸುದ್ದಿ: 'ದೃಶ್ಯಂ 4' ನಿರ್ಮಾಣದ ಅಧಿಕೃತ ಘೋಷಣೆ!

Photo Credit : X
ಕೊಚ್ಚಿ: ಮಲಯಾಳಂ ಚಿತ್ರರಂಗದಲ್ಲಿ ಯಶಸ್ಸು ಗಳಿಸಿರುವ 'ದೃಶ್ಯಂ' ಸರಣಿಯ ನಾಲ್ಕನೇ ಭಾಗ ನಿರ್ಮಾಣವಾಗುವುದು ಖಚಿತವಾಗಿದೆ. ಮಳವಿಲ್ ಮನೋರಮಾ ಆಯೋಜಿಸಿದ್ದ 'ಮಳವಿಲ್ ಎಂಟರ್ಟೈನ್ಮೆಂಟ್ ಅವಾರ್ಡ್ಸ್ 2026' ವೇದಿಕೆಯಲ್ಲಿ ನಿರ್ಮಾಪಕ ಆಂಟನಿ ಪೆರುಂಬಾವೂರ್ ಈ ಘೋಷಣೆ ಮಾಡಿದ್ದಾರೆ. ನಟ ಮೋಹನ್ ಲಾಲ್ ಮತ್ತು ನಿರ್ದೇಶಕ ಜೀತು ಜೋಸೆಫ್ ಅವರ ಸಮ್ಮುಖದಲ್ಲೇ 'ದೃಶ್ಯಂ 4' ನಿರ್ಮಾಣವಾಗಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಮಾರಂಭದಲ್ಲಿ 'ದೃಶ್ಯಂ 3' ಚಿತ್ರಕ್ಕೆ 'ಎಂಟರ್ಟೈನರ್ ಆಫ್ ದಿ ಇಯರ್ - ಸೀಕ್ವೆಲ್' ಪ್ರಶಸ್ತಿಯನ್ನು ಹಿರಿಯ ನಟ ಮುಖೇಶ್ ಅವರಿಂದ ಸ್ವೀಕರಿಸಿದ ಬಳಿಕ ಆಂಟನಿ ಈ ಘೋಷಣೆ ಮಾಡಿದರು. 2022ರ ಆಗಸ್ಟ್ ನಲ್ಲಿ ಇದೇ ವೇದಿಕೆಯಲ್ಲಿ ನಿರ್ದೇಶಕ ಜೀತು ಜೋಸೆಫ್ ಅವರ ಅನುಮತಿಯಿಲ್ಲದೆಯೇ 'ದೃಶ್ಯಂ 3' ನಿರ್ಮಾಣದ ಬಗ್ಗೆ ಘೋಷಿಸಿದ್ದನ್ನು ಅವರು ನೆನಪಿಸಿಕೊಂಡರು. ಇದೀಗ ಅದೇ ವೇದಿಕೆಯಲ್ಲಿ ಜೀತು ಜೋಸೆಫ್ ಅವರ ಪಕ್ಕದಲ್ಲೇ ನಿಂತು ನಾಲ್ಕನೇ ಭಾಗದ ಬಗ್ಗೆ ಘೋಷಿಸುತ್ತಿರುವುದಾಗಿ ತಿಳಿಸಿದರು. 'ದೃಶ್ಯಂ 4' ಸಿನಿಮಾ ನಿರ್ಮಾಣವಾಗಬೇಕು ಎಂಬುದು ತಮ್ಮ ಆಶಯ ಎಂದು ಹೇಳಿದರು.
ಈ ವೇಳೆ ಮಾತನಾಡಿದ ನಿರ್ದೇಶಕ ಜೀತು ಜೋಸೆಫ್, 'ದೃಶ್ಯಂ' ಮೊದಲ ಭಾಗದ ಯಶಸ್ಸಿನ ಶ್ರೇಯಸ್ಸು ಮಾತ್ರ ತಮಗೆ ಸಲ್ಲುತ್ತದೆ ಎಂದರು. ಎರಡನೇ ಮತ್ತು ಮೂರನೇ ಭಾಗಗಳ ನಿರ್ಮಾಣಕ್ಕೆ ಆಂಟನಿ ಪೆರುಂಬಾವೂರ್ ಅವರ ನಿರಂತರ ಒತ್ತಡ ಮತ್ತು ಪ್ರೋತ್ಸಾಹವೇ ಕಾರಣ ಎಂದು ಸ್ಮರಿಸಿದರು.
ಆರಂಭದಲ್ಲಿ 'ದೃಶ್ಯಂ 3' ಮೂಲಕ ಸರಣಿಗೆ ಅಂತ್ಯ ಹಾಡಲು ತಾವು ಪ್ರಯತ್ನಿಸಿದ್ದಾಗಿ ಜೀತು ಜೋಸೆಫ್ ಈ ಹಿಂದೆ ಹೇಳಿದ್ದರು. ಆದರೆ, ಮೂರನೇ ಭಾಗದ ಕ್ಲೈಮ್ಯಾಕ್ಸ್ ಬಳಿಕವೂ ಜಾರ್ಜ್ ಕುಟ್ಟಿ ಪಾತ್ರದ ಮುಂದಿನ ಹಂತದ ಬಗ್ಗೆ ಚಿಂತಿಸುತ್ತಿರುವುದಾಗಿ ಸುಳಿವು ನೀಡಿದ್ದರು. ಪಾತ್ರಗಳ ಬೆಳವಣಿಗೆ ಮತ್ತು ಮುಂದಿನ ಕಥಾಹಂದರ ರೂಪಿಸಲು ಸ್ವಲ್ಪ ಸಮಯದ ಅಗತ್ಯವಿದೆ ಎಂದಿದ್ದರು.
2013ರ ಡಿ. 19ರಂದು ಬಿಡುಗಡೆಯಾದ 'ದೃಶ್ಯಂ' ಮಲಯಾಳಂ ಚಿತ್ರರಂಗದಲ್ಲಿ 50 ಕೋಟಿ ರೂ. ಗಳಿಕೆಯ ಗಡಿ ದಾಟಿದ ಮೊದಲ ಸಿನಿಮಾವಾಗಿ ಇತಿಹಾಸ ನಿರ್ಮಿಸಿತ್ತು. ಜಾರ್ಜ್ ಕುಟ್ಟಿ ಎಂಬ ಕೇಬಲ್ ಟಿವಿ ಆಪರೇಟರ್ ತನ್ನ ಕುಟುಂಬವನ್ನು ಕಾನೂನಿನ ಕುಣಿಕೆಯಿಂದ ರಕ್ಷಿಸಲು ರೂಪಿಸುವ ತಂತ್ರಗಾರಿಕೆಯ ಕಥೆ ಪ್ರೇಕ್ಷಕರ ಮನಗೆದ್ದಿತ್ತು. ಈ ಚಿತ್ರ ಕನ್ನಡ, ಹಿಂದಿ, ತಮಿಳು, ತೆಲುಗು ಸೇರಿದಂತೆ ಚೈನೀಸ್ ಮತ್ತು ಕೊರಿಯನ್ ಭಾಷೆಗಳಿಗೂ ರಿಮೇಕ್ ಆಗಿ ಜಾಗತಿಕ ಮನ್ನಣೆ ಗಳಿಸಿತ್ತು.
ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ 2021ರ ಫೆ. 19ರಂದು OTTಯಲ್ಲಿ ನೇರವಾಗಿ ಬಿಡುಗಡೆಯಾದ 'ದೃಶ್ಯಂ 2' ಕೂಡ ಭರ್ಜರಿ ಯಶಸ್ಸು ಕಂಡಿತ್ತು.
2026ರ ಮೇ 21ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 'ದೃಶ್ಯಂ 3' ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ನಿರ್ಮಿಸಿತು. ಬಿಡುಗಡೆಯಾದ ಕೇವಲ 58 ಗಂಟೆಗಳಲ್ಲಿ 100 ಕೋಟಿ ರೂ. ಗಳಿಕೆಯ ಗಡಿ ದಾಟಿದ ಈ ಚಿತ್ರ, ಮಿಶ್ರ ವಿಮರ್ಶೆಗಳ ನಡುವೆಯೂ ಜಾಗತಿಕ ಬಾಕ್ಸ್ ಆಫೀಸ್ನಲ್ಲಿ 239.83 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿತು. ಭಾರತದಲ್ಲಿ 128.13 ಕೋಟಿ ರೂ. ಹಾಗೂ ಸಾಗರೋತ್ತರ ಮಾರುಕಟ್ಟೆಯಲ್ಲಿ 111.70 ಕೋಟಿ ರೂ. ಗಳಿಸುವ ಮೂಲಕ ಮಲಯಾಳಂ ಚಿತ್ರರಂಗದ ಅತಿ ಹೆಚ್ಚು ಗಳಿಕೆ ಕಂಡ ಚಿತ್ರಗಳ ಸಾಲಿನಲ್ಲಿ ಸ್ಥಾನ ಪಡೆಯಿತು. ಪೆನ್ ಸ್ಟುಡಿಯೋಸ್ ಮತ್ತು ಪನೋರಮಾ ಸ್ಟುಡಿಯೋಸ್ ಸಂಸ್ಥೆಗಳು ಚಿತ್ರಕ್ಕೆ ಬಂಡವಾಳ ಹೂಡಿದ್ದವು.
ಆಶೀರ್ವಾದ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡ ಈ ಮೂರೂ ಚಿತ್ರಗಳಲ್ಲಿ ಮೋಹನ್ ಲಾಲ್, ಮೀನಾ, ಅನ್ಸಿಬಾ ಹಸನ್ ಮತ್ತು ಎಸ್ತರ್ ಅನಿಲ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.






