“ಜಮ್ಮುವಿನ ಹಿಂದೂಗಳಿಗೆ ಎಷ್ಟು ಹಣ ನೀಡಿದ್ದೀರಿ?”: ‘ದಿ ಕಾಶ್ಮೀರ್ ಫೈಲ್ಸ್’ ನಿರ್ಮಾಪಕರಿಗೆ ಹಿರಿಯ ನಟಿ ಪ್ರಶ್ನೆ

ಆಶಾ ಪರೇಖ್ (PTI)
ಮುಂಬೈ: ಕಾಶ್ಮೀರಿ ಹಿಂದೂಗಳ ಕುರಿತ ಕಥೆಯನ್ನು ಇಟ್ಟುಕೊಂಡು ಸಿನೆಮಾ ಮಾಡಿರುವ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ 400 ಕೋಟಿ ರೂ. ಗಳಿಸಿದೆ. ಆದರೆ, ಅದರಲ್ಲಿ ಎಷ್ಟು ಹಣ ಕಾಶ್ಮೀರದ ಹಿಂದೂಗಳಿಗೆ ನೀಡಿದ್ದಾರೆ ಎಂದು ಹಿರಿಯ ನಟಿ ಆಶಾ ಪಾರೇಖ್ ಅವರು ಪ್ರಶ್ನಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 'ನೀರು ಮತ್ತು ವಿದ್ಯುತ್ ಇಲ್ಲದೆ' ವಾಸಿಸುವ ಹಿಂದೂಗಳಿಗೆ ಸಹಾಯ ಮಾಡಲು ತಮ್ಮ ಗಳಿಕೆಯ ಒಂದು ಭಾಗವನ್ನು ದಾನ ಮಾಡದಿದ್ದಕ್ಕಾಗಿ ಚಿತ್ರದ ನಿರ್ಮಾಪಕರನ್ನು ಅವರು ದೂರಿದ್ದಾರೆ.
‘ಸಿಎನ್ಬಿಸಿ ಆವಾಜ್’ನೊಂದಿಗಿನ ಸಂದರ್ಶನದಲ್ಲಿ, ʼದಿ ಕಾಶ್ಮೀರ್ ಫೈಲ್ಸ್ ಮತ್ತು ದಿ ಕೇರಳ ಸ್ಟೋರಿ (2023) ಯಂತಹ ವಿವಾದಾತ್ಮಕ ಚಲನಚಿತ್ರಗಳನ್ನು ವೀಕ್ಷಿಸಿದ್ದೀರಾ?ʼ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ʼಅಂತಹ ಚಿತ್ರಗಳಿಂದ ಜನರು ಏನು ಗಳಿಸಿದರು?ʼ ಎಂದು ಮರು ಪ್ರಶ್ನೆ ಹಾಕಿದರು.
ನಾನು ಈ ಚಲನಚಿತ್ರಗಳನ್ನು ನೋಡಿಲ್ಲ, ಹಾಗಾಗಿ ಅವುಗಳ ಸುತ್ತಲಿನ ವಿವಾದಗಳ ಬಗ್ಗೆ ನಾನು ಪ್ರತಿಕ್ರಿಯಿಸಲಾರೆ. ಆದರೆ ಜನರು ಈ ಚಲನಚಿತ್ರಗಳನ್ನು ವೀಕ್ಷಿಸಲು ಇಷ್ಟಪಟ್ಟರೆ, ಅವರು ನೋಡಲಿ ಎಂದಿದ್ದಾರೆ.
‘ದಿ ಕಾಶ್ಮೀರ್ ಫೈಲ್ಸ್’ ಮತ್ತು ಅದರ ಬೃಹತ್ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಮಾತನಾಡುತ್ತಾ, “ಜನರು ಕಾಶ್ಮೀರ ಫೈಲ್ಸ್ ವೀಕ್ಷಿಸಿದ್ದಾರೆ. ನಾನು ಈಗ ವಿವಾದಾತ್ಮಕವಾದದ್ದನ್ನು ಹೇಳುತ್ತೇನೆ. ಚಿತ್ರದ ನಿರ್ಮಾಪಕರು ₹ 400 ಕೋಟಿ ಗಳಿಸಿದ್ದಾರೆ. ಜಮ್ಮುವಿನಲ್ಲಿ ನೀರು, ವಿದ್ಯುತ್ ಇಲ್ಲದೆ ವಾಸಿಸುತ್ತಿರುವ ಹಿಂದೂಗಳ ಕಲ್ಯಾಣಕ್ಕಾಗಿ ಚಿತ್ರ ನಿರ್ಮಾಪಕರು ಎಷ್ಟು ಹಣ ನೀಡಿದ್ದಾರೆ. ಚಿತ್ರದ ರೂ. 400 ಕೋಟಿ ಕಲೆಕ್ಷನ್ನಲ್ಲಿ ರೂ. 200 ಕೋಟಿ ನಿರ್ಮಾಪಕರು ಗಳಿಸಿದ್ದಾರೆ ಎಂದು ಭಾವಿಸೋಣ. ಅವರು ಕಾಶ್ಮೀರಿ ಹಿಂದೂಗಳಿಗೆ ಸಹಾಯ ಮಾಡಲು ರೂ. 50 ಕೋಟಿ ದೇಣಿಗೆ ನೀಡಬಹುದಿತ್ತು, ಅಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.







