ರಣವೀರ್ ಸಿಂಗ್ ‘ಧುರಂಧರ್’ಗೆ ಹೃತಿಕ್ ರೋಷನ್ ಶ್ಲಾಘನೆ; ರಾಜಕೀಯ ದೃಷ್ಟಿಕೋನ ಕುರಿತು ಪ್ರಶ್ನಿಸಿದ ನಟ

Photo credit: X, PTI
ಮುಂಬೈ: ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಚಿತ್ರಕ್ಕೆ ಬಾಲಿವುಡ್ ನಟ ಹೃತಿಕ್ ರೋಷನ್ ಮೆಚ್ಚುಗೆ ಸೂಚಿಸಿದ್ದಾರೆ. ಆದರೆ ಚಿತ್ರದ ರಾಜಕೀಯ ದೃಷ್ಟಿಕೋನದ ಬಗ್ಗೆ ನನಗೆ ಒಪ್ಪಿಗೆ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆದಿತ್ಯ ಧರ್ ನಿರ್ದೇಶನದ ಈ ಚಿತ್ರ ಡಿಸೆಂಬರ್ 5ರಂದು ಬಿಡುಗಡೆಯಾಗಿದ್ದು, 2000ರ ದಶಕದ ಉತ್ತರಾರ್ಧದ ಭಯೋತ್ಪಾದನಾ ಹಿನ್ನೆಲೆಯ ಕಥಾಹಂದರವನ್ನು ಕಲ್ಪನಾತ್ಮಕ ರೂಪದಲ್ಲಿ ತೆರೆಮೇಲೆ ತಂದಿದ್ದಾರೆ.
ಚಿತ್ರದಲ್ಲಿ ರಣವೀರ್ ಸಿಂಗ್ ಹಂಝಾ ಎಂಬ ಭಾರತೀಯ ಗುಪ್ತಚರನಾಗಿ ನಟಿಸಿದ್ದು, ಪಾಕಿಸ್ತಾನ ಮೂಲದ ರೆಹಮಾನ್ ಡಕಾಯತ್ ಗ್ಯಾಂಗ್ಗೆ ನುಸುಳುವ ಕಾರ್ಯಾಚರಣೆಯ ಸುತ್ತ ಕಥೆ ಸಾಗುತ್ತದೆ. ಬೇಹುಗಾರಿಕೆ, ಅಪರಾಧ ಜಾಲ ಮತ್ತು ಗುಪ್ತಚರ ಕಾರ್ಯಗಳ ಸಂಕೀರ್ಣತೆಯನ್ನು ಚಿತ್ರವು ಆಳವಾಗಿ ಬಿಚ್ಚಿಡುತ್ತದೆ.
ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿರುವ ಹೃತಿಕ್, “ಸದಾ ಯೋಚನೆಗಳಲ್ಲಿ ಸಿಲುಕುವ ಪಾತ್ರಗಳನ್ನು ನಾನು ಪ್ರೀತಿಸುತ್ತೇನೆ. ಕಥೆಯನ್ನು ಹಿಡಿದು ಗಿರಕಿ ಹೊಡೆಸುವವ ನಿರ್ದೇಶಕರ ಕೈಚಳಕ ‘ಧುರಂಧರ್’ನಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಸಿನಿಮಾ ಹೇಳುವ ವಿಧಾನ ಅದ್ಭುತ” ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಆದರೆ ಮುಂದುವರಿದು, “ಅದರಲ್ಲಿರುವ ರಾಜಕೀಯ ಒಳನೋಟಗಳನ್ನು ನಾನು ಒಪ್ಪದೆ ಇರಬಹುದು ಮತ್ತು ನಾವು ಜಾಗತಿಕ ಪ್ರಜೆಗಳಾಗಿ ಸಿನಿಮಾ ನಿರ್ದೇಶಕರಾಗಿ ಹೊರಬೇಕಾದ ಜವಾಬ್ದಾರಿಯ ಬಗ್ಗೆ ಚರ್ಚಿಸಲು ಬಯಸುತ್ತೇನೆ. ಆದರೆ ಸಿನಿಮಾದ ವಿದ್ಯಾರ್ಥಿಯಾಗಿ ಇದನ್ನು ನಾನು ಎಷ್ಟು ಇಷ್ಟಪಟ್ಟೆ ಮತ್ತು ಏನು ಕಲಿತಿದ್ದೇನೆ ಎನ್ನುವುದನ್ನು ಅಲಕ್ಷಿಸಲು ಸಾಧ್ಯವಿಲ್ಲ. ಅತ್ಯದ್ಭುತ” ಎಂದು ಬರೆದಿದ್ದಾರೆ.
ಇದಕ್ಕೂ ಮೊದಲು ಅಕ್ಷಯ್ ಕುಮಾರ್ ಕೂಡ ಚಿತ್ರದ ಕಥಾಹಂದರವನ್ನು ಹೊಗಳುತ್ತಾ, “ಎಂತಹ ಆಕರ್ಷಕ ಕಥೆ! ಅದನ್ನು ಆದಿತ್ಯ ಧರ್ ಅದ್ಭುತವಾಗಿ ಹೇಳಿಕೊಂಡಿದ್ದಾರೆ” ಎಂದು ಪೋಸ್ಟ್ ಮಾಡಿದ್ದರು. ನಟಿ, ರಾಜಕಾರಣಿಯಾಗಿರುವ ಸ್ಮೃತಿ ಇರಾನಿ ಅವರು ಸಿನಿಮಾ ನಿಜ ಜೀವನದ ಅನುಭವಗಳನ್ನು ಪ್ರತಿಬಿಂಬಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಣವೀರ್ ಜೊತೆಗೆ ಆರ್. ಮಾಧವನ್, ಅರ್ಜುನ್ ರಾಂಪಾಲ್, ಸಂಜಯ್ ದತ್ ಸೇರಿದಂತೆ ಹಲವು ನಟರು ಪಾತ್ರವಹಿಸಿರುವ ಈ ಚಿತ್ರದ ಮುಂದುವರಿದ ಭಾಗ ಮುಂದಿನ ವರ್ಷದ ಮಾರ್ಚ್ 19ರಂದು ಬಿಡುಗಡೆಯಾಗಲಿದೆ.







