ಕೊನೆಕ್ಷಣದಲ್ಲಿ ʼಆಲ್ಫಾʼದಲ್ಲಿ ಹೃತಿಕ್ ರೋಶನ್ ಎಂಟ್ರಿ; ಆ್ಯಕ್ಷನ್ ಸಿನಿಮಾ ಮೇಲೆ ಆಸಕ್ತಿ ಮೂಡಿಸುವ ತಂತ್ರವೆ?

Photo Credit : yashrajfilms.com
ಬುಧವಾರ ಬಿಡುಗಡೆಯಾದ ‘ಆಲ್ಫಾ’ ಟ್ರೇಲರ್ನ ಮತ್ತೊಂದು ವಿಶೇಷವೆಂದರೆ ಹೃತಿಕ್ ರೋಷನ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದು. ಹೃತಿಕ್ ರೋಷನ್ ಪಾತ್ರ ಬಹಿರಂಗಪಡಿಸಿರುರುವುದು ಟ್ರೇಲರ್ಗೆ ಹೆಚ್ಚಿನ ಸಂಚಲನೆ ನೀಡಿದೆ.
ಆಲಿಯಾ ಭಟ್ ನಟನೆಯ ಆಲ್ಫಾ’ ಸಿನಿಮಾದ ಟ್ರೇಲರ್ ಬುಧವಾರ ಬಿಡುಗಡೆಯಾಗಿದೆ. ಅದಕ್ಕೆ ಮೊದಲು, ಜೂನ್ 10ಕ್ಕೆ ಟೀಸರ್ ಬಿಡುಗಡೆಯಾದಾಗ ಬಹಳ ನೆಗೆಟಿವ್ ಆಗಿ ಸದ್ದು ಮಾಡಿದ್ದ ಯಶ್ ರಾಜ್ ಫಿಲ್ಮ್ಸ್ ಅವರ ಆಲಿಯಾ ಭಟ್ ಮತ್ತು ಶಾರ್ವರಿ ನಟನೆಯ ‘ಆಲ್ಫಾ’ ಸಿನಿಮಾ, ಇದೀಗ ಮೊದಲ ಟ್ರೇಲರ್ ಬಿಡುಗಡೆಯಾದ ಮೇಲೆ ಸಾಮಾಜಿಕ ಮಾಧ್ಯಮಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೆಲವರು ಟೀಸರ್ ಅನ್ನು ಮೆಚ್ಚಿಕೊಂಡರೆ, ಇನ್ನೂ ಕೆಲವರು ಆಲಿಯಾ ಆಯ್ಕೆಯ ಬಗ್ಗೆ ಟೀಕೆ ಮಾಡಿದ್ದರು. ಇಂತಹ ರಗಡ್ ಲುಕ್ ಆಕೆಗೆ ಸರಿಹೊಂದಲ್ಲ ಎನ್ನುವ ಅಭಿಪ್ರಾಯ ಹೆಚ್ಚು ವ್ಯಕ್ತವಾಗಿತ್ತು. ಹಾಗಿದ್ದರೂ ಮಹಿಳಾ ಪಾತ್ರಗಳನ್ನು ಪ್ರಧಾನವಾಗಿಟ್ಟುಕೊಂಡು ನಿರ್ಮಾಣವಾಗಿರುವ ‘ಆಲ್ಫಾ’ ಬಹಳ ಕುತೂಹಲ ಮೂಡಿಸಿತ್ತು.
ಬುಧವಾರ ಬಿಡುಗಡೆಯಾದ ‘ಆಲ್ಫಾ’ ಟ್ರೇಲರ್ನ ಮತ್ತೊಂದು ವಿಶೇಷವೆಂದರೆ ಹೃತಿಕ್ ರೋಷನ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದು. ಹೃತಿಕ್ ರೋಷನ್ ಪಾತ್ರ ಬಹಿರಂಗಪಡಿಸಿರುರುವುದು ಟ್ರೇಲರ್ಗೆ ಹೆಚ್ಚಿನ ಸಂಚಲನೆ ನೀಡಿದೆ. ಚಿತ್ರತಂಡದ ಉದ್ದೇಶವೂ ಅದೇ ಆಗಿತ್ತು ಎಂದು ಕಾಣಿಸುತ್ತಿದೆ.
ಆದಿತ್ಯ ಧಾರ್ ಅವರ ಗೂಢಾಚಾರಿಕೆ ಸಂಬಂಧಿಸಿದ ಸಿನಿಮಾ ‘ಧುರಂಧರ್’ ಅಭೂತಪೂರ್ವ ಯಶಸ್ಸು ಸಾಧಿಸಿದ ನಂತರ ಪ್ರೇಕ್ಷಕರು ಆ ಪ್ರಕಾರದ ಸಿನಿಮಾಗಳಲ್ಲಿ ಏನು ಬಯಸುತ್ತಾರೆ ಮತ್ತು ಸಂಭಾಷಣೆ ಹೇಗಿರಬೇಕು ಮೊದಲಾದ ಅತ್ಯುತ್ತಮ ಮಾನದಂಡ ಹಾಕಿಕೊಟ್ಟಿದ್ದಾರೆ. ಹೀಗಾಗಿ ಯಶ್ ರಾಜ್ ಫಿಲ್ಮ್ಸ್ ಇದೀಗ ನಿಲುವು ಬದಲಿಸಿದಂತಿದೆ.
ವರ್ಷಗಳಿಂದ ಯಶ್ ರಾಜ್ ಫಿಲ್ಮ್ಸ್ ಅವರ ಗೂಢಾಚಾರಿಕೆಗೆ ಸಂಬಂಧಿಸಿದ ಚಲನಚಿತ್ರಗಳು ಶೈಲಿ, ವೈಶಾಲ್ಯ, ಗ್ಲಾಮರ್ ಮತ್ತು ಇತರ ಹಲವು ರೀತಿಯಿಂದ ಪ್ರಭಾವ ಬೀರುತ್ತವೆ. ಭೌಗೋಳಿಕ ರಾಜಕೀಯ ಅಥವಾ ರಾಷ್ಟ್ರೀಯ ಭದ್ರತಾ ಸಂಘರ್ಷಗಳಿಗಿಂತ ಹೆಚ್ಚಾಗಿ ಆಕ್ಷನ್ ಮತ್ತು ಪ್ರಣಯ ಸದೃಶವಾದ ಮನರಂಜನಾ ಚಿತ್ರಗಳಾಗಿವೆ. ಆದರೆ ‘ಧುರಂದರ್’ ಇದೀಗ ಪ್ರೇಕ್ಷಕರ ನಿರೀಕ್ಷೆಯನ್ನು ಬದಲಿಸಿದೆ. ಇಂಥ ಸಂದರ್ಭದಲ್ಲಿ ‘ಅಲ್ಫಾ’ ಬರುತ್ತಿದೆ.
ಹೀಗಾಗಿ ಆಲಿಯಾ ಭಟ್ ಅವರನ್ನು ಆ್ಯಕ್ಷನ್ ತಾರೆಯಾಗಿ ಪ್ರೇಕ್ಷಕರ ಮನವೊಲಿಸುವ ಹೊಣೆಯೂ ಸೇರಿದೆ. ಬಾಲಿವುಡ್ನಲ್ಲಿ ಸ್ವಜನಪಕ್ಷಪಾತದ ಫಲಾನುಭವಿ ಎಂದು ಆಲಿಯಾ ಭಟ್ ಟೀಕೆಗೆ ಗುರಿಯಾಗಿದ್ದಾರೆ. ಅವರು ದೊಡ್ಡ ಆ್ಯಕ್ಷನ್ ಪಾತ್ರಕ್ಕೆ ಹೊಂದಿಕೊಳ್ಳುತ್ತಾರೆಯೇ ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳಾಗುತ್ತಿವೆ. ತಿಂಗಳ ಆರಂಭದಲ್ಲಿ ಬಿಡುಗಡೆಯಾದ ಟೀಸರ್ ನಂತರ ಅವರು ಆ್ಯಕ್ಷನ್ ಪಾತ್ರಕ್ಕೆ ಸೂಕ್ತವಾಗುವುದಿಲ್ಲ ಎನ್ನುವ ಚರ್ಚೆಯೇ ಮುನ್ನೆಲೆಯಲ್ಲಿತ್ತು. ಹೀಗಾಗಿ ಹೃತಿಕ್ ಅವರ ಅತಿಥಿ ಪಾತ್ರದ ಬಹಿರಂಗ ‘ಆಲ್ಫಾ’ ಕುರಿತಂತೆ ಬೆಳೆದ ಲೆಕ್ಕಾಚಾರವನ್ನು ಬುಡಮೇಲು ಮಾಡುವ ಉದ್ದೇಶವಿರುವಂತೆ ಭಾಸವಾಗುತ್ತಿದೆ.
ಹೃತಿಕ್ ರೋಶನ್ ಪಾತ್ರ ಬಹಿರಂಗವಾಗುತ್ತಿದ್ದಂತೆ ಚರ್ಚೆ ಬದಲಾಗಿದೆ. ಹೀಗಾಗಿ ಹತಾಶೆಯಲ್ಲಿ ಯಶ್ ರಾಜ್ ಫಿಲ್ಮ್ಸ್ ತಮ್ಮದೇ ನಿಯಮವನ್ನು ಮುರಿದಂತಿದೆ. ಆದರೆ ಚಿತ್ರದ ನಿರೂಪಣೆಯೇ ಇದೀಗ ಬದಲಾಗಿದೆ. ಸಂದೇಹ ವ್ಯಕ್ತಪಡಿಸಿದವರು ಸಿನಿಮಾದ ತಿರುವುಗಳ ಬಗ್ಗೆ ಚರ್ಚೆ ಮಾಡುವಂತಾಯಿತು. ಚಿತ್ರದ ಬಗ್ಗೆ ಜನರಲ್ಲಿ ಆಸಕ್ತಿ ಕೆರಳಿಸುವ ಜಾಣ ನಡೆಯನ್ನು ಚಿತ್ರತಂಡ ತೆಗೆದುಕೊಂಡಂತಿದೆ.
‘ಆಲ್ಫಾ’ದಲ್ಲಿ ಆಲಿಯಾ ಭಟ್ ಮತ್ತು ಶಾರ್ವರಿ ಯಶ್ ರಾಜ್ ಫಿಲ್ಮ್ ನಿರ್ಮಾಣದ ಮೊದಲ ಮಹಿಳಾ ಗೂಢಾಚಾರ ಪಾತ್ರದಾರಿಗಳಾಗಿದ್ದಾರೆ. ಚಿತ್ರದ ಹೆಚ್ಚಿನ ಕತೆಯನ್ನು ಟ್ರೇಲರ್ ತಿಳಿಸದೆ ಇದ್ದರೂ ಆ್ಯಕ್ಷನ್ ದೃಶ್ಯಗಳು ಮತ್ತು ರೋಮಾಂಚಕ ತಿರುವುಗಳನ್ನು ಹೊಂದಿರುವುದು ಖಚಿತವಾಗಿದೆ.
ಗಾಜಿನ ಗುರಾಣಿಯಲ್ಲಿರುವ ಮಗುವನ್ನು ಸೀತಾ ಎಂದು ನಾಮಕರಣ ಮಾಡುವ ಮೂಲಕ ಟ್ರೇಲರ್ ಪ್ರಾರಂಭವಾಗುತ್ತದೆ. ನಂತರ ಆಕೆ ಬೆಳೆದು ದೊಡ್ಡವಳಾಗಿ ಶತ್ರು ಸಂಹಾರ ಮಾಡುವುದನ್ನು ತೋರಿಸಲಾಗಿದೆ. ಜುಲೈ 3ರಂದು ಸಿನಿಮಾ ಬಿಡುಗಡೆಯಾಗಲಿದೆ. ಪ್ರಮುಖ ಪಾತ್ರದಲ್ಲಿ ಆಲಿಯಾ ಬಟ್, ಶಾರ್ವರಿ, ಬಾಬಿ ಡಿಯೋಲ್, ಹೃತಿಕ್ ರೋಶನ್ ಮತ್ತು ಅನಿಲ್ ಕಪೂರ್ ಕಾಣಿಸಿಕೊಂಡಿದ್ದಾರೆ.






