‘ಓ ರೋಮಿಯೊ’ ತಂಡಕ್ಕೆ ನೋಟೀಸ್ ನೀಡಿದ ಹುಸೇನ್ ಉಸ್ತರಾ ಪುತ್ರಿ; 2 ಕೋಟಿ ಪರಿಹಾರ ಬೇಡಿಕೆ

Photo Credit : Youtube
ಹುಸೇನ್ ಉಸ್ತರಾ ಅವರ ಪುತ್ರಿ ವಿಶಾಲ್ ಭಾರದ್ವಾಜ್ ನಿರ್ದೇಶನದ ‘ಓ ರೋಮಿಯೊ’ ಸಿನಿಮಾ ತಂಡಕ್ಕೆ ಕಾನೂನು ನೋಟೀಸ್ ನೀಡಿದ್ದಾರೆ. ಚಿತ್ರದಲ್ಲಿ ಶಾಹಿದ್ ಕಪೂರ್ ಪಾತ್ರ ತನ್ನ ತಂದೆಯನ್ನು ಹೋಲುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ವಿಶಾಲ್ ಭಾರದ್ವಾಜ್ ನಿರ್ದೇಶನದ ಸಾಜಿದ್ ನಾಡಿಯಾಡ್ವಾಲ ನಿರ್ಮಾಣದ ‘ಓ ರೋಮಿಯೊ’ ಸಿನಿಮಾ ವಿವಾದಕ್ಕೆ ಸಿಲುಕಿದೆ. ದಿವಂಗತ ಹುಸೇನ್ ಉಸ್ತರಾ ಅವರ ಪುತ್ರಿ ಸನೋಬರ್ ಶೇಖ್ ಸಿನಿಮಾದ ವಿರುದ್ಧ ಕಾನೂನು ನೋಟಿಸ್ ಕಳುಹಿಸಿದ್ದಾರೆ. ಸಿನಿಮಾದಲ್ಲಿ ಶಾಹಿದ್ ಕಪೂರ್ ನಿರ್ವಹಿಸಿದ ಪಾತ್ರ ತಮ್ಮ ತಂದೆಯನ್ನು ಹೋಲುತ್ತದೆ ಮತ್ತು ಚಿತ್ರತಂಡ ಸಿನಿಮಾ ನಿರ್ಮಿಸುವ ಮೊದಲು ಕುಟುಂಬದ ಒಪ್ಪಿಗೆ ಪಡೆದಿಲ್ಲ ಎಂದು ಅವರು ಹೇಳಿದ್ದಾರೆ.
ಸನೋಬರ್ ಅವರ ವಕೀಲರಾದ ಡಿವಿ ಸರೋಜ್ ಪ್ರಕಾರ, 2025 ಅಕ್ಟೋಬರ್ 30ರಂದು ಮೊದಲ ನೋಟೀಸ್ ಕಳುಹಿಸಲಾಗಿತ್ತು ಮತ್ತು 2025 ಡಿಸೆಂಬರ್ 15ರಂದು ಎರಡನೇ ನೋಟೀಸ್ ಕಳುಹಿಸಲಾಗಿದೆ.
ಆದರೆ ಸಿನಿಮಾ ನಿರ್ಮಾಪಕರು ಸನೋಬರ್ ಹೇಳಿಕೆಯನ್ನು ನಿರಾಕರಿಸಿದ್ದಾರೆ. ‘ಓ ರೋಮಿಯೊ’ ಸಿನಿಮಾದ ಶಾಹಿದ್ ಕಪೂರ್ ಅವರ ಪಾತ್ರವು ಹುಸೇನ್ ಉಸ್ತರಾ ಜೀವನದ ಜೊತೆಗೆ ಯಾವುದೇ ರೀತಿಯಲ್ಲೂ ತಳಕು ಹಾಕಿಕೊಂಡಿಲ್ಲ ಎಂದು ಸಿನಿಮಾ ತಂಡ ಹೇಳಿದೆ. ಇದೀಗ ಸನೋಬರ್ ವಕೀಲರು ಸಿನಿಮಾ ಬಿಡುಗಡೆಯ ವಿರುದ್ಧ ನ್ಯಾಯಾಲಯದಿಂದ ತಡೆಯಾಜ್ಞೆ ತರಲು ಮುಂದಾಗಿದ್ದಾರೆ.
ಹುಸೇನ್ ಕುಟುಂಬದ ಆರೋಪಗಳೇನು?
ಸನೋಬರ್ ಮಾಧ್ಯಮಗಳಿಗೆ ಹೇಳಿರುವ ಪ್ರಕಾರ ಚಿತ್ರತಂಡಕ್ಕೆ ನೋಟೀಸ್ ಕಳುಹಿಸಲಾಗಿದೆ. “ಟೀಸರ್ ಮತ್ತು ವೀಡಿಯೋಗಳಲ್ಲಿ ನನ್ನ ತಂದೆಯ ಸಂಪೂರ್ಣ ಇಮೇಜ್ ತೋರಿಸಲಾಗಿದೆ. ಅವರ ಲುಕ್, ಶೈಲಿಯನ್ನು ವಸ್ತುಶಃ ಅದೇ ರೀತಿಯಲ್ಲಿ ತೋರಿಸಲಾಗಿದೆ. ಅದೇ ಕಾರಣಕ್ಕೆ ನಾವು ನೋಟೀಸ್ ಕಳುಹಿಸಿದ್ದೇವೆ. ಆದರೆ ಸಿನಿಮಾ ತಂಡ ಇದು ಜೀವನ ಚರಿತ್ರೆ ಅಥವಾ ಸಾಕ್ಷ್ಯಚಿತ್ರವಲ್ಲ ಎಂದು ಹೇಳುತ್ತಿದೆ. ಆದರೆ ಚಿತ್ರ ತಂಡ ಬಿಡುಗಡೆ ಮಾಡಿದ ಪ್ರತಿ ಹೊಸ ವೀಡಿಯೋದಲ್ಲಿ ತಂದೆಯ ವರ್ಚಸ್ಸನ್ನು ಕಾಣಬಹುದು. ಶಾಹಿದ್ ಕಪೂರ್ ಪಾತ್ರ ಸಂಪೂರ್ಣವಾಗಿ ತಂದೆಯನ್ನು ಹೋಲುತ್ತಿದೆ. ಕುಟುಂಬದವರಾಗಿ ಮತ್ತು ಮಗಳಾಗಿ ನಮಗೆ ಇದರಿಂದ ಬಹಳ ನೋವಾಗಿದೆ. ಇದರಿಂದಾಗಿ ಕುಟುಂಬದೊಳಗೆ ಸಮಸ್ಯೆಯಾಗುತ್ತಿದೆ” ಎಂದು ಅವರು ಹೇಳಿದ್ದಾರೆ.
ಕುಟುಂಬದ ಮೇಲೆ ಪರಿಣಾಮ
ಜನರು ಪದೇಪದೆ ನಮಗೆ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ನಿನ್ನ ತಂದೆಯ ಜೀವನಚರಿತ್ರೆ ಸಿನಿಮಾವಾಗುತ್ತಿದೆ ಎಂದು ಸಂದೇಶದಲ್ಲಿ ಹೇಳುತ್ತಿದ್ದಾರೆ. ಇಷ್ಟೊಂದು ವೀಡಿಯೋಗಳು ಹೊರ ಬಂದ ಮೇಲೆ ನಮ್ಮ ಜೀವನಕ್ಕೆ ತೊಂದರೆಯಾಗಿದೆ. ನಾನು ಟೀಸರ್ ನೋಡಿದ್ದೇನೆ. ಶಾಹಿದ್ ಕಪೂರ್ ಅವರ ಮುಖ್ಯ ಲುಕ್ ತೋರಿಸಲಾಗಿದೆ. ಟೋಪಿ ಮತ್ತು ಇತರ ವಿವರವನ್ನು ನೋಡಿದರೆ ತಂದೆಯ ಚಿತ್ರಗಳಿಗೆ ಹೋಲುತ್ತದೆ. ಅದೇ ಶೈಲಿಯಲ್ಲಿ ಅವರನ್ನು ಚಿತ್ರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಚಿತ್ರತಂಡದಿಂದ 2 ಕೋಟಿ ರೂ. ಬೇಡಿಕೆ
ಕುಟುಂಬ ಚಿತ್ರತಂಡದಿಂದ 2 ಕೋಟಿ ರೂ. ಪರಿಹಾರದ ಬೇಡಿಕೆ ಇಟ್ಟಿದೆ. ತಮ್ಮ ವಕೀಲರು ಕಾನೂನು ಕ್ರಮದ ಭಾಗವಾಗಿ ಈ ಮೊತ್ತವನ್ನು ಮುಂದಿಟ್ಟಿದ್ದಾರೆ ಎಂದು ಸನೋಬಾರ್ ವಿವರಿಸಿದರು. “ಚಿತ್ರತಂಡ ತಂದೆಯ ಮೇಲೆ ಸಿನಿಮಾ ಮಾಡುತ್ತಿಲ್ಲ ಎಂದು ನಿರಾಕರಿಸುತ್ತಿದೆ. ಅವರು ನಿರಂತರವಾಗಿ ನಮಗೆ ಕಿರುಕುಳ ನೀಡುತ್ತಿದ್ದಾರೆ ಮತ್ತು ನಮ್ಮ ನಿಲುವನ್ನು ಸುಳ್ಳೆಂದು ಹೇಳುತ್ತಿದ್ದಾರೆ. ಹೀಗಾಗಿ ನಾವು ಪರಿಹಾರ ಕೇಳಿದ್ದೇವೆ. ನಾವು ಚಿತ್ರರಂಗಕ್ಕೆ ಬೆದರಿಕೆ ಹಾಕಿಲ್ಲ. ಕಾನೂನು ನೋಟೀಸ್ ಕೊಡುವುದನ್ನು ಬೆದರಿಕೆ ಎಂದು ಹೇಳುವಂತಿಲ್ಲ” ಎಂದು ಸನೋಬರ್ ಹೇಳಿದ್ದಾರೆ.
ಚಿತ್ರತಂಡ ನನ್ನ ತಂದೆಗೆ ಹೋಲುವ ದೃಶ್ಯಗಳನ್ನು ತೋರಿಸುತ್ತಿದ್ದರೆ, ನಮ್ಮ ಅನುಮತಿಯನ್ನು ಪಡೆದುಕೊಳ್ಳಬೇಕು. ಏನು ಸರಿ ಮತ್ತು ತಪ್ಪು ಎನ್ನುವುದನ್ನು ನಾವು ಒಪ್ಪಿದ ನಂತರ ಅವರು ತೋರಿಸಬೇಕು. ಅವರು ಕಾನೂನು ಬಾಹಿರ ಕೆಲಸ ಮಾಡಬಾರದು. ಹೀಗಾಗಿ ನಾನು ಸಂಪೂರ್ಣ ಕಾನೂನು ನೆರವು ಪಡೆದುಕೊಳ್ಳಲು ನಿರ್ಧರಿಸಿದ್ದೇನೆ. ನನ್ನ ತಂದೆ 1998ರಲ್ಲಿ ನಿಧನರಾಗಿದ್ದಾರೆ. 29-30 ವರ್ಷಗಳು ಕಳೆದಿವೆ. ಇಷ್ಟು ವರ್ಷಗಳ ನಂತರ ಹಠಾತ್ ಆಗಿ ಈ ಬೆಳವಣಿಗೆಯಾಗಿದೆ. ಹೀಗಾಗಿ ನಾವು ಯಾವ ಸನ್ನಿವೇಶವನ್ನು ಎದುರಿಸುತ್ತಿದ್ದೇವೆ ಎನ್ನುವುದು ನಿಮಗೆ ಅರ್ಥವಾಗಿರಬಹುದು ಎಂದು ಅವರು ಹೇಳಿದ್ದಾರೆ.







