ಇದ್ದರೆ ನಂಬುವ ತರಹ ಇರಬೇಕು..!

ಚಿತ್ರ : ದಿ ಡೆವಿಲ್
ನಿರ್ದೇಶಕರು: ಪ್ರಕಾಶ್ ವೀರ್
ನಿರ್ಮಾಪಕರು: ಜೆ. ಜಯಮ್ಮ, ಸರೆಗಮ
ತಾರಾಗಣ: ದರ್ಶನ್, ರಚನಾ ರೈ, ಅಚ್ಯುತ್ ಕುಮಾರ್ ಮೊದಲಾದವರು.
ಸಿನೆಮಾ ಅಂದರೆ ನಿಜ ಜೀವನವಲ್ಲ ಅಂತ ಎಲ್ಲರಿಗೂ ಗೊತ್ತು. ಆದರೆ ಸಾಮಾಜಿಕ ಕಥೆಯನ್ನು ತೋರಿಸುವಾಗ ಅದರಲ್ಲಿ ನೈಜತೆ ಇದ್ದರಷ್ಟೇ ಹೆಚ್ಚು ಆಪ್ತವಾಗುತ್ತದೆ. ಅಥವಾ ಸುಳ್ಳನ್ನು ನಂಬುವಂತೆ ತೋರಿಸುವ ಜಾಣತನವಾದರೂ ಇರಬೇಕು. ಆದರೆ ‘ದಿ ಡೆವಿಲ್’ ಮೂಲಕ ನಿರ್ದೇಶಕ ಪ್ರಕಾಶ್ ವೀರ್ ಇವೆರಡನ್ನೂ ಮಾಡುವಲ್ಲಿ ಸೋತಿದ್ದಾರೆ.
ರಾಜ್ಯ ರಾಜಧಾನಿಯಲ್ಲೇ ಇರುವ ಹೋಟೆಲ್ ಮಾಲಕ ರಾಜ್ಯದ ಮುಖ್ಯಮಂತ್ರಿಯ ಮಗನನ್ನೇ ಹೋಲುತ್ತಾನೆ. ವಿದೇಶದಲ್ಲಿರುವ ಆ ಮುಖ್ಯಮಂತ್ರಿಯ ಮಗನ ಹೆಸರಲ್ಲಿ ಹೋಟೆಲ್ ಮಾಲಕನನ್ನೇ ಚುನಾವಣಾ ಪ್ರಚಾರಕ್ಕೆ ಬಳಸಲಾಗುತ್ತದೆ. ಆತ ಮನೆಗೆ ಬಂದಾಗ ಖುದ್ದು ತಂದೆಗಾಗಲೀ, ಹೋಟೆಲ್ ಮುಂದೆಯೇ ಪ್ರಚಾರ ನಡೆಸಿದಾಗ ಆತನ ಆಪ್ತರಿಗಾಗಲೀ ಈ ನಾಟಕ ಅರಿವಾಗುವುದೇ ಇಲ್ಲ. ಇಷ್ಟನ್ನು ನಂಬುವ ಧಾರಾಳತನ ನಿಮಗಿದ್ದರೆ ನೀವು ‘ದಿ ಡೆವಿಲ್’ ನೋಡುತ್ತಾ ನೆಮ್ಮದಿಯಾಗಿರಬಹುದು.
ದರ್ಶನ್ ಈ ಚಿತ್ರದಲ್ಲಿ ದ್ವಿಪಾತ್ರ ಮಾಡಿದ್ದಾರೆ ಎನ್ನುವುದು ಆರಂಭದ ಕೆಲವೇ ದೃಶ್ಯಗಳಲ್ಲೇ ಬಯಲಾಗುತ್ತದೆ. ಈ ಇಬ್ಬರಲ್ಲಿ ಒಬ್ಬನಾದ ಹೋಟೆಲ್ ಮಾಲಕ, ಸಪ್ಲೈಯರ್ ಎಲ್ಲವೂ ಆದ ಕೃಷ್ಣನಿಗೆ ಸಿನೆಮಾ ನಟನಾಗುವ ಕನಸು. ಅದೇ ಉಮೇದಿನಲ್ಲಿ ವಿವಿಧ ಕಲಾವಿದರ ಹಾಗೆ ವರ್ತಿಸುವುದು ಆತನ ಹವ್ಯಾಸ. ಈ ಹವ್ಯಾಸವೇ ಆತನನ್ನು ಮುಖ್ಯಮಂತ್ರಿ ಪಟ್ಟದತನಕ ಕೊಂಡೊಯ್ಯುತ್ತದೆ.
ಮತ್ತೋರ್ವನ ಹೆಸರು ಧನುಷ್. ಆತನೇ ರಾಜ್ಯದ ಮುಖ್ಯಮಂತ್ರಿಯ ಮಗ. ಹಣ ಮತ್ತು ಹೆಣ್ಣಿನ ಮೋಹದಲ್ಲಿ ಡೆವಿಲ್ ಅವತಾರ ಎತ್ತಿದವನು. ಹೀಗೆ ಎರಡು ಗುಣಗಳ ಇಬ್ಬರನ್ನು ಸಾಧ್ಯವಾದಷ್ಟು ವಿಭಿನ್ನವಾಗಿಸಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್. ಅದರಲ್ಲೂ ಧನುಷ್ ಪಾತ್ರಕ್ಕಾಗಿ ಕಂಠ ಬದಲಾಯಿಸಿರುವ ರೀತಿ ಮೆಚ್ಚಲೇಬೇಕು.
ನಟನಾಗಿ ದರ್ಶನ್ ಅವರನ್ನು ಸದ್ಗುಣ ಸಂಪನ್ನನಾಗಿ ಸಾಕಷ್ಟು ಚಿತ್ರಗಳಲ್ಲಿ ನೋಡಿದ್ದೇವೆ. ಆದರೆ ಅವರಲ್ಲಿನ ಖಳಛಾಯೆಯನ್ನು ಕಂಡ ಸಂದರ್ಭಗಳು ತೀರ ಕಡಿಮೆ. ಈ ಬಾರಿ ದರ್ಶನ್ ಪರಿಪೂರ್ಣ ವಿಲನ್ ಅವತಾರವನ್ನು ಪ್ರದರ್ಶಿಸಿದ್ದಾರೆ. ಅದರಲ್ಲೂ ಕನ್ನಡ ಚಿತ್ರರಂಗದಲ್ಲಿ ಖಳನಟನಾಗಿ ಛಾಪು ಮೂಡಿಸಿರುವ ತೂಗುದೀಪ ಶ್ರೀನಿವಾಸ್ ಅವರ ಪುತ್ರ ಅಂಥದೇ ಖಳ ಪಾತ್ರವನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವ ಕುತೂಹಲ ಸಹಜ. ನಿರೀಕ್ಷೆಗೆ ಯಾವ ರೀತಿಯಲ್ಲೂ ನಿರಾಸೆ ನೀಡದ ಅಭಿನಯವನ್ನೇ ದರ್ಶನ್ ನೀಡಿದ್ದಾರೆ.
ಕೃಷ್ಣನ ಪಾತ್ರಕ್ಕೆ ಜೋಡಿಯಾಗಿ ರುಕ್ಮಿಣಿ ಇದ್ದಾಳೆ. ರುಕ್ಮಿಣಿ ಎನ್ನುವುದು ಚಿತ್ರದ ನಾಯಕಿ ಪಾತ್ರವಾದರೂ ಈಕೆಯ ಎಂಟ್ರಿ ಪೋಷಕ ಪಾತ್ರಗಳಂತೆ ಸಾಮಾನ್ಯವಾಗಿ ಜರುಗುತ್ತದೆ. ಕೃಷ್ಣ ಮತ್ತು ಧನುಷ್ ಕೈಗಳ ಮಧ್ಯೆ ಆಟದ ಚೆಂಡಾಗಿದ್ದಾಳೆ ರುಕ್ಮಿಣಿ. ಈ ಪಾತ್ರದಲ್ಲಿ ನವನಟಿ ರಚನಾ ರೈ ಕಾಣಿಸಿದ್ದಾರೆ.
ದರ್ಶನ್ ಸಿನೆಮಾಗಳಲ್ಲಿ ಸಾಮಾನ್ಯವಾಗಿ ಒಂದಾದರೂ ಪ್ರೇಮಗೀತೆ ಸೂಪರ್ ಹಿಟ್ ಆಗಿರುತ್ತದೆ. ಆದರೆ ರಚನಾ ರೈಗೆ ಈ ಅವಕಾಶವೂ ದೊರಕಿಲ್ಲ! ಹಾಡುಗಳ ವಿಚಾರಕ್ಕೆ ಬಂದರೆ ನಿಜಕ್ಕೂ ಅಜನೀಶ್ ಲೋಕನಾಥ್ ಸಂಗೀತವೇ ಎಂದು ಸಂದೇಹ ಪಡುವಂತಿದೆ. ದರ್ಶನ್ ಆಡಿರುವ ಮಾತೇ ಪಲ್ಲವಿ ಎನ್ನುವ ಕಾರಣಕ್ಕೆ ಜನಪ್ರಿಯವಾದ ‘‘ಇದ್ರೇ ನೆಮ್ಮದಿಯಾಗಿರಬೇಕ್’’ ಹಾಡಿನ ನೃತ್ಯ ನಿರ್ದೇಶನ ಕೂಡ ನಿರಾಶಾದಾಯಕ.
ಇಲ್ಲಿನ ಮಾಜಿ ಮುಖ್ಯಮಂತ್ರಿಯ ಮನೆ ಮಂದಿಗೆ ಮನುಷ್ಯರನ್ನು ಕೊಲ್ಲುವುದೆಂದರೆ ತಿಗಣೆ ಹೊಸಕಿದಷ್ಟೇ ಸಲೀಸು. ಆದರೂ ಇಬ್ಬರಲ್ಲಿ ನಕಲಿ ಪುತ್ರನನ್ನು ಕೊಲ್ಲಬೇಕು ಎನ್ನುವುದು ಕೊನೆಯ ನಿರ್ಧಾರ. ಇಂಥ ಸಂದರ್ಭದಲ್ಲಿ ಅಸಲಿಯತ್ತು ಪತ್ತೆ ಮಾಡಲು ಅಸಂಖ್ಯ ಅವಕಾಶಗಳಿದ್ದರೂ ಬಳಸುವುದಿಲ್ಲ ಎನ್ನುವುದೇ ತಮಾಷೆ. ಹೀಗಾಗಿಯೇ ಸೋಶಿಯಲ್ ಸಬ್ಜೆಕ್ಟ್‌ನಲ್ಲಿ ಫ್ಯಾಂಟಸಿ ತುಂಬಿದಂತಿದೆ.
ದಿ ಡೆವಿಲ್ ದೊಡ್ಡ ತಾರಾಗಣದಿಂದ ಸಂಪನ್ನವಾಗಿದೆ.
ಧನುಷ್ ತಂದೆಯಾಗಿ ಭ್ರಷ್ಟ ಮುಖ್ಯಮಂತ್ರಿಯ ಪಾತ್ರವನ್ನು ಬಾಲಿವುಡ್ ನಟ ಮಹೇಶ್ ಮಾಂಜ್ರೇಕರ್ ನಿರ್ವಹಿಸಿದ್ದಾರೆ. ಮುಖ್ಯಮಂತ್ರಿಯ ಆಪ್ತ ಸಹಾಯಕ ಅನಂತ ನಂಬಿಯಾರ್ ಪಾತ್ರಕ್ಕೆ ಅಚ್ಯುತ್ ಕುಮಾರ್ ಜೀವ ತುಂಬಿದ್ದಾರೆ. ಉಳಿದಂತೆ ವಿನಯ್ ಗೌಡ, ರೋಜರ್ ನಾರಾಯಣ್, ಶ್ರೀನಿವಾಸ ಪ್ರಭು, ತುಳಸಿ ಶಿವಮಣಿ, ಗಿಲ್ಲಿ ನಟ, ಶೋಭರಾಜ್ ಮೊದಲಾದ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ.
ಪೂರ್ತಿ ಚಿತ್ರ ನೋಡಿ ಹೊರಗೆ ಬರುವಾಗ ದರ್ಶನ್ ದ್ವಿಪಾತ್ರ ಹಾಗೂ ಮಹೇಶ್ ಮಾಂಜ್ರೇಕರ್ ಮುಖ್ಯಮಂತ್ರಿ ಪಾತ್ರವಷ್ಟೇ ತಲೆಯಲ್ಲಿ ಉಳಿಯುತ್ತದೆ. ಅಷ್ಟೇ ಪರಿಣಾಮಕಾರಿಯಾಗಿ ರಾಜಕೀಯ ರಂಗದ ಕ್ರೌರ್ಯವೂ ಕಾಡುತ್ತದೆ. ಇದೇ ಚಿತ್ರದ ಉದ್ದೇಶವಾಗಿದ್ದಲ್ಲಿ ಚಿತ್ರತಂಡ ಗೆದ್ದಿದೆ ಎಂದೇ ಹೇಳಬಹುದು.







