ಅಕಸ್ಮಾತ್ ನೋಡಿದ್ದೇ ಆದರೆ ಮರೆತು ಬಿಡಿ!

ಚಿತ್ರ: ಸೆಪ್ಟಂಬರ್ 21
ನಿರ್ದೇಶನ: ಕರೇನ್ ಕ್ಷಿತಿ ಸುವರ್ಣ
ನಿರ್ಮಾಣ: ಅಭಿಷೇಕ್ ಗೌತಮ್ ಬಾಬುಲಾಲ್
ತಾರಾಗಣ: ಪ್ರವೀಣ್ ಸಿಂಗ್ ಸಿಸೊಡಿಯಾ, ಪ್ರಿಯಾಂಕಾ ಉಪೇಂದ್ರ ಮೊದಲಾದವರು.
ಎದೆಯೆತ್ತರ ಬೆಳೆದ ಮಗನನ್ನೇ ಒಂದು ದಿನ ‘‘ಯಾರು ನೀನು?’’ ಎಂದು ಪ್ರಶ್ನಿಸುತ್ತಾನೆ ತಂದೆ. ಅದಕ್ಕೆ ಕಾರಣ ಕೋಪವಲ್ಲ. ಅದೊಂದು ಮರೆವಿನ ಕಾಯಿಲೆ! ಅದರ ಹೆಸರು ಅಲ್ಝೀಮರ್. ಇಂಥದೊಂದು ಕಾಯಿಲೆಯ ಹಿನ್ನೆಲೆಯಲ್ಲಿ ಈ ಹಿಂದೆ ಬಂದಂಥ ಸಿನೆಮಾ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’. ಅಂಥದೇ ವಿಚಾರವನ್ನೇ ಆಯ್ದುಕೊಂಡಿರುವ ಚಿತ್ರವೇ ಸೆಪ್ಟಂಬರ್ 21.
ಇಲ್ಲಿಯೂ ಮರೆವಿನ ಕಾಯಿಲೆ ಬಾಧಿಸಿರುವಾತ ಗೋಧಿ ಬಣ್ಣ ಸಾಧಾರಣ ಮೈಕಟ್ಟಿನ ವ್ಯಕ್ತಿಯೇ. ಪಾತ್ರದ ಹೆಸರು ರಾಜ್. ಶಿಕ್ಷಕರಾಗಿದ್ದು ನಿವೃತ್ತಿ ಪಡೆದವರು. ತಬಲಾ ವಾದಕರಾಗಿ ಬಹುಮುಖ ಪ್ರತಿಭೆಯಿಂದ ಗುರುತಿಸಿಕೊಂಡಾತ. ಆದರೆ ಇದೆಲ್ಲವೂ ಆತನ ಸ್ನೇಹಿತರ ಮಾತಿನ ನಡುವೆ ಸಿಗುವ ಮಾಹಿತಿಗಳು. ಚಿತ್ರದಲ್ಲಿರುವುದು ರಾಜ್ ಮತ್ತು ಆತನ ಮರೆವಿನ ಕಾಯಿಲೆ ಮಾತ್ರ.
ರಾಜ್ ಪುತ್ರ ಕಿರಣ್ ವಿದೇಶವಾಸಿ. ಆತನಿಗೆ ಅಲ್ಲಿನ ವೃತ್ತಿ ತೊರೆದು ಬಂದು ತಂದೆಯನ್ನು ನೋಡಿಕೊಂಡಿರುವುದು ಕಷ್ಟ. ಹಾಗಾಗಿ ತಂದೆಯನ್ನು ಆತ್ಮೀಯ ವೈದ್ಯರ ಮತ್ತು ಕೆಲಸದಾಕೆಯ ಸುಪರ್ದಿಗೆ ಒಪ್ಪಿಸಿರುತ್ತಾನೆ. ಆದರೆ ತಂದೆಯ ಮರೆವಿನ ದಿನಗಳಲ್ಲಿ ಪುತ್ರನಾಗಿ ತಾನೇ ಹತ್ತಿರವಿರಬೇಕು. ಅದರ ಅಗತ್ಯ ಎಷ್ಟರಮಟ್ಟಿಗೆ ಇದೆ ಎಂದು ಅರಿವಾಗುವಷ್ಟರಲ್ಲಿ ಕಾಲ ಮೀರಿರುತ್ತದೆ.
ರಾಜ್ ಪಾತ್ರವನ್ನು ಪ್ರವೀಣ್ ಸಿಂಗ್ ಸಿಸೊಡಿಯಾ ನಿಭಾಯಿಸಿದ್ದಾರೆ. ಆದರೆ ಅವರಿಗೆ ನೀಡಲಾದ ಕಂಠ ಹೊಂದಿಕೊಳ್ಳದಿರುವುದು ದೊಡ್ಡ ಕಿರಿಕಿರಿಯಾಗಿ ಭಾಸವಾಗುತ್ತದೆ. ಚಿತ್ರವನ್ನು ಇಂಗ್ಲಿಷ್‌ನಲ್ಲಿ ಕೂಡ ತೆಗೆಯಲಾಗಿದೆ. ಬಹುಶಃ ಇದೇ ಕಾರಣದಿಂದಲೇ ಇರಬಹುದು ಹಲವೆಡೆಗಳಲ್ಲಿ ಪಾತ್ರಧಾರಿ ಸರಿಯಾಗಿ ತುಟಿಗಳನ್ನೇ ತೆರೆಯದಿದ್ದರೂ ಸಂಭಾಷಣೆಗಳು ಹೊರಬೀಳುತ್ತವೆ!
ರಾಜ್ ಮನೆಯ ಕೆಲಸದಾಕೆ ಕಮಲಮ್ಮನ ಪಾತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ನಟಿಸಿದ್ದಾರೆ. ರಾಜ್ ಪುತ್ರನನ್ನು ಕಮಲಮ್ಮ ಬಾಲ್ಯದಿಂದಲೇ ನೋಡಿರುತ್ತಾರೆ. ಆ ವಯಸ್ಸು ಮಾತ್ರ ಪ್ರಿಯಾಂಕಾರಲ್ಲಿ ಕಾಣಿಸುವುದಿಲ್ಲ. ಆದರೆ ಕಮಲಾ ಪಾತ್ರಕ್ಕೆ ಎಲ್ಲ ರೀತಿಯಿಂದಲೂ ನ್ಯಾಯ ಒದಗಿಸುವ ಪ್ರಯತ್ನವನ್ನು ಪ್ರಿಯಾಂಕಾ ಮಾಡಿದ್ದಾರೆ. ಉಡುಗೆ ತೊಡುಗೆ ಮಾತ್ರವಲ್ಲ ನಡಿಗೆ ರೀತಿಯಲ್ಲಿಯೂ ಬದಲಾವಣೆ ಮಾಡಿಕೊಂಡಿದ್ದಾರೆ. ಉಳಿದಂತೆ ಡಾಕ್ಟರ್ ದೀಪಕ್, ಸ್ನೇಹಿತ ಸ್ಯಾಮ್ಯುಯಲ್ ಮೊದಲಾದ ಪಾತ್ರಗಳಿಗೂ ಪ್ರಾಮುಖ್ಯತೆ ಇವೆ.
ಚಿತ್ರದಲ್ಲಿ ಮರೆವಿನ ಕಾಯಿಲೆ ಮಾತ್ರವಲ್ಲ, ರೋಗಿಯ ಸಮಸ್ಯೆಯ ನಿರೂಪಣೆಯಲ್ಲಿಯೂ ಹೊಸತನವಿಲ್ಲ. ರಾಜ್ ಪತ್ನಿ ಪಾತ್ರ ಮಾಡಿರುವ ಜರೀನ ವಹಾಬ್ ಫ್ಲ್ಯಾಶ್ ಬ್ಯಾಕ್ ನಲ್ಲಿ ಬರುವ ಒಂದೆರಡು ಮಾಂಟೇಜಸ್ ಮತ್ತು ಒಂದು ಹಾಡಿಗಷ್ಟೇ ಸೀಮಿತವಾಗಿದ್ದಾರೆ. ಸಂಭಾಷಣೆಯಲ್ಲಿ ಸಹಜತೆಗೆ ಪ್ರಯತ್ನಿಸಲಾಗಿದೆ. ವಿದೇಶ ಎಂದು ಒಳಾಂಗಣವನ್ನೇ ತೋರಿಸಿದರೂ ನಂಬಿಕೆ ಮೂಡುವಂತಿಲ್ಲ. ಕೈಯಲ್ಲಿ ಬಾಟಲಿ ಹಿಡಿದು ಇಂಗ್ಲಿಷ್ ಮಾತಾಡಿದ ಕೂಡಲೇ ವಿದೇಶ ಆಗುವುದಿಲ್ಲ. ಹಿನ್ನೆಲೆಯ ಬಗ್ಗೆ ಕಲಾನಿರ್ದೇಶಕರು ಗಮನ ಹರಿಸಬೇಕಾಗಿತ್ತು.
ವಯಸ್ಸಾದವರನ್ನು, ಮರೆವಿನ ಕಾಯಿಲೆಗೆ ಒಳಗಾದ ತಂದೆ ತಾಯಿಯನ್ನು ಅಂತಿಮ ದಿನಗಳಲ್ಲಿ ಹೇಗೆ ನೋಡಿಕೊಳ್ಳಬೇಕು ಎನ್ನುವ ಸಂದೇಶ ಚಿತ್ರದಲ್ಲಿದೆ. ಆದರೆ ಅಂಥದೊಂದು ಸಂದೇಶಕ್ಕಾಗಿ ಕಾಯಿಲೆಯ ಪಾತ್ರವನ್ನು ಪ್ರೇಕ್ಷಕ ಸಹಿಸುವುದು ಸಂದೇಹ. ಇಷ್ಟಕ್ಕೂ ಈ ಚಿತ್ರಕ್ಕೂ ‘ಸೆಪ್ಟಂಬರ್ 21’ಕ್ಕೂ ಸಂಬಂಧವೇನು ಎಂದು ಪ್ರಶ್ನಿಸಬೇಡಿ. ಯಾಕೆಂದರೆ ಅಂದು ‘ವಿಶ್ವ ಅಲ್ಝೀಮರ್ ಕಾಯಿಲೆ’ಯ ದಿನ! ಅಲ್ಲಿಗೆ ಇದೊಂದು ಅಲ್ಝೀಮರ್‌ಗೆ ಸಮರ್ಪಿತವಾದ ಚಿತ್ರ ಎಂದೇ ಪರಿಗಣಿಸಬಹುದು.






