ಸ್ವಾರ್ಥ ರೂಪದ ಜನರ ಎದುರಿಗೆ..

ಚಿತ್ರ: ತೀರ್ಥರೂಪ ತಂದೆಯವರಿಗೆ
ನಿರ್ದೇಶನ: ರಾಮೇನಹಳ್ಳಿ ಜಗನ್ನಾಥ
ನಿರ್ಮಾಣ: ಜೈ ಚಾಮುಂಡೇಶ್ವರಿ ಸಂಸ್ಥೆ
ತಾರಾಗಣ: ನಿಹಾರ್ ಮುಕೇಶ್, ರಚನಾ ಇಂದರ್, ರವೀಂದ್ರ ವಿಜಯ್ ಮೊದಲಾದವರು.
ಚಿತ್ರದ ಹೆಸರೇ ಸೂಚಿಸುವಂತೆ ಇದು ತಂದೆಯ ಕುರಿತಾದ ಕಥೆ. ತಂದೆ ಯಾರು ಎನ್ನುವ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದ ಪುತ್ರನ ವ್ಯಥೆ, ಚಿಂತೆಯಿಂದ ಚಿತ್ರ ಶುರು. ತಂದೆಯ ಬಗ್ಗೆ ಹೆಚ್ಚು ಮಾಹಿತಿ ನೀಡದ ತಾಯಿಯ ಬಗ್ಗೆಯೂ ಈ ಪುತ್ರನಿಗೆ ಅಸಹನೆ. ಮಾತ್ರವಲ್ಲ, ಈ ತಾಯಿಗೆ ಒಬ್ಬ ಆತ್ಮೀಯ ಸ್ನೇಹಿತನಿದ್ದಾನೆ. ಅವರಿಬ್ಬರ ಸ್ನೇಹ ಸಂಬಂಧ ಊರವರ ಪಾಲಿಗೆ ಅಪಹಾಸ್ಯದ ವಸ್ತು. ಇವನ್ನೆಲ್ಲ ಎದುರಿಸಿದ ಪುತ್ರ ಸುಸ್ತು. ಮನೆಯೊಳಗೆ ಸಂಬಂಧ ಚೆನ್ನಾಗಿರದಿದ್ದರೆ ಏನಂತೆ? ಊರಿನೊಂದಿಗೆ ಈತನಿಗೆ ಆಪ್ತ ಅನುಬಂಧ. ಅದಕ್ಕೆ ಕಾರಣ ವ್ಲಾಗಿಂಗ್ ಮೂಲಕ ಜನಸೇವೆ ಮಾಡುವ ಈತನ ಹವ್ಯಾಸ. ಈ ಹವ್ಯಾಸವೇ ಈತನ ಬದುಕಿಗೆ ಹೊಸ ತಿರುವು ಕೊಡುತ್ತದೆ. ನಾಪತ್ತೆಯಾಗಿದ್ದ ತಂದೆಯ ಬದುಕಿನ ವಾಸ್ತವವನ್ನು ತಿಳಿಸುತ್ತದೆ. ಸುಪ್ತವಾಗಿದ್ದ ಆ ಸತ್ಯವೇನು ಎಂದು ನೋಡಲು ನೀವು ಚಿತ್ರಮಂದಿರಕ್ಕೆ ಹೋಗಿ ಈ ಸಿನೆಮಾ ವೀಕ್ಷಿಸಬೇಕು.
ಯಾರದೋ ತಂದೆಯ ಹುಡುಕಾಟದ ಕಥೆಯನ್ನು ನಾವೇಕೆ ನೋಡಬೇಕು ಎನ್ನುವ ಪ್ರಶ್ನೆ ಸಹಜ. ಆದರೆ ಚಿತ್ರ ನೋಡುತ್ತಿದ್ದಂತೆ ಈ ತಂದೆ ಹೇಗೆ ದೇಶಕ್ಕೂ ಆದರ್ಶ ಎಂದು ಅರ್ಥವಾಗುತ್ತಾ ಹೋಗುತ್ತಾನೆ. ಸ್ವಾರ್ಥ ರೂಪದ ಜಗತ್ತಿನಲ್ಲಿ ನಿಸ್ವಾರ್ಥ ಪಾತ್ರಗಳ ಅನಾವರಣವಾಗುತ್ತಾ ಹೋಗುತ್ತದೆ. ಒಂದು ಹಂತದಲ್ಲಿ ಮನೆ ತೊರೆದು ಹೋದ ತಂದೆಯನ್ನು ಬುದ್ಧನೊಡನೆ ಹೋಲಿಸಲಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ತಂದೆಯಾಗಿ ನಟಿಸಿದ ಕಲಾವಿದ ಈ ಚಿತ್ರದ ಜೀವಾಳವಾಗಿದ್ದಾರೆ. ನಟ ರವೀಂದ್ರ ವಿಜಯ್ ಚಿತ್ರದ ಪ್ರಕಾರ ನಾಯಕನ ತಂದೆ. ಆದರೆ ಸಿನೆಮಾ ನೋಡುತ್ತಿದ್ದಂತೆ ಅವರೇ ನಾಯಕನ ಸ್ಥಾನಕ್ಕೆ ಏರುತ್ತಾರೆ. ಮೂಲತಃ ಕನ್ನಡಿಗರೇ ಆಗಿರುವ ಈ ಕಲಾವಿದನನ್ನು ಇಂಥದೊಂದು ಪಾತ್ರದ ಮೂಲಕ ಪರಿಚಯಿಸಿದ ನಿರ್ದೇಶಕರಿಗೆ ಅಭಿನಂದನೆ ಹೇಳಲೇಬೇಕು.
ತಂದೆಯನ್ನು ಹುಡುಕುವ ಹತಾಶ ಪುತ್ರ ಮತ್ತು ಆಗಷ್ಟೇ ಪ್ರೇಮದೊಳಗೆ ಬಿದ್ದ ಯುವ ಪ್ರೇಮಿಯ ಪಾತ್ರದಲ್ಲಿ ನಿಹಾರ್ ಮುಕೇಶ್ ನಟಿಸಿದ್ದಾರೆ. ಇವರಿಗೆ ಜೋಡಿಯಾಗಿ ರಚನಾ ಇಂದರ್ ಕಾಣಿಸಿಕೊಂಡಿದ್ದಾರೆ. ದೂರಾದ ಪತಿ ಮತ್ತು ದೂರಾಗುತ್ತಿರುವ ಪುತ್ರನ ಮಧ್ಯೆ ಆತ್ಮೀಯತೆಗೆ ಸ್ನೇಹಿತನ ಮೊರೆಹೋದ ಜಾನಕಿಯಾಗಿ ಸಿತಾರ ನಟಿಸಿದ್ದಾರೆ. ಸ್ನೇಹಿತೆಯ ಕುಟುಂಬಕ್ಕೆ ಜೀವನ ಮುಡಿಪಾಗಿಟ್ಟಂತೆ ಕಾಣುವ ಆಜನ್ಮ ಬ್ರಹ್ಮಚಾರಿಯಂತೆ ರಾಜೇಶ್ ನಟರಂಗ ಅಭಿನಯಿಸಿದ್ದಾರೆ.
ಇನ್ನೊಂದಷ್ಟು ಪಾತ್ರಗಳು ನಮ್ಮ ಸುತ್ತ ಬದುಕಿ ಹೋದವರನ್ನು ನೆನಪಿಸುತ್ತದೆ. ಪತ್ರಕರ್ತ ರವಿ ರಾಮಾನಾಥಪುರ ಮತ್ತು ನಾಯಕನ ಸಹೋದರಿಯ ಹಿನ್ನೆಲೆಯಲ್ಲಿ ಬರುವ ಕಥೆಗಳು ಇವುಗಳಿಗೆ ಉದಾಹರಣೆ. ಅಜಿತ್ ಹಂಡೆ ಮತ್ತು ಅಶ್ವಿತಾ ಆರ್. ಹೆಗ್ಡೆ ಆ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇಷ್ಟೆಲ್ಲ ಇದ್ದರೂ ವಾಸ್ತವದ ಹಿನ್ನೆಲೆ ತುಂಬಿರುವ ಕಥೆಗೆ ಸಿನಿಮೀಯ ಲಾಜಿಕ್ ಟಚ್ ನೀಡುವಲ್ಲಿ ನಿರ್ದೇಶಕರು ಎಡವಿದಂತೆ ಕಾಣಿಸುತ್ತಾರೆ. ಚಿತ್ರದ ಆರಂಭದ ಸಾಕಷ್ಟು ಸಮಯವನ್ನು ವಾಕ್ ಮ್ಯಾನ್ ಎನ್ನುವ ಪಾತ್ರ ಹಾಗೂ ಮತ್ತೊಂದಷ್ಟು ಅನಗತ್ಯವೆನಿಸುವ ದೃಶ್ಯಗಳು ತಿಂದು ಹಾಕಿವೆ. ಗಿರೀಶ್ ಶಿವಣ್ಣನ ಪಾತ್ರ ಹಾಸ್ಯದಲ್ಲಿ ಸೋತಿದೆ.
ಜೋ ಕೋಸ್ಟಾ ಸಂಗೀತದಲ್ಲಿ ಮೂಡಿರುವ ‘‘ನನದೇ ಜಗದಲ್ಲೀ..’’ ಎನ್ನುವ ನಿರ್ದೇಶಕರ ರಚನೆ ಭಾವಗೀತೆಯಂತೆ ಮನ ತುಂಬುತ್ತದೆ. ದೀಪಕ್ ಯರಗೇರ ಛಾಯಾಗ್ರಹಣದಲ್ಲಿ ಮೂಡಿಗೆರೆ, ಕೊಚ್ಚಿ, ಮೇಘಾಲಯದ ಪ್ರಕೃತಿ ಸೊಬಗು ಮೈತುಂಬಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇತ್ತೀಚೆಗೆ ಅಪರೂಪವಾಗಿರುವ ಸದಭಿರುಚಿಯ ಚಿತ್ರಗಳ ಸಾಲಿಗೆ ಈ ಸಿನೆಮಾ ಕೂಡ ಸೇರಿಕೊಳ್ಳುತ್ತದೆ.







