ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಗೆದ್ದ ಭಾರತ ಮೂಲದ ಸಂಗೀತಗಾರ್ತಿ ಚಂದ್ರಿಕಾ ಟಂಡನ್

ಚಂದ್ರಿಕಾ ಟಂಡನ್ (Photo: ANI)
ಹೊಸದಿಲ್ಲಿ: ಭಾರತೀಯ ಸಂಜಾತ ಅಮೆರಿಕ ಗಾಯಕಿ ಹಾಗೂ ಉದ್ಯಮಿ ಚಂದ್ರಿಕಾ ಟಂಡನ್ ಅವರು ತಮ್ಮ ‘ತ್ರಿವೇಣಿ’ ಆಲ್ಬಂಗೆ ಗ್ರ್ಯಾಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಈ ಪ್ರತಿಷ್ಠಿತ ಸಂಗೀತ ಪ್ರಶಸ್ತಿಯ 67ನೇ ಸಂಚಿಕೆಯನ್ನು ಲಾಸ್ ಏಂಜಲೀಸ್ ನ ಅರೇನಾದಲ್ಲಿನ Crypto.comನಲ್ಲಿ ರವಿವಾರ ರೆಕಾರ್ಡಿಂಗ್ ಅಕಾಡೆಮಿ ಅದ್ದೂರಿಯಾಗಿ ಆಯೋಜಿಸಿತ್ತು.
ಉದ್ಯಮಿ ಹಾಗೂ ಪೆಪ್ಸಿಕೊ ಇಂಡಿಯಾದ ಮಾಜಿ ಸಿಇಒ ಇಂದ್ರಾ ನೂಯಿ ಅವರ ಹಿರಿಯ ಸಹೋದರಿಯಾದ ಚಂದ್ರಿಕಾ ಟಂಡನ್, ತಮ್ಮ ಸಹೋದ್ಯೋಗಿಯಾದ ದಕ್ಷಿಣ ಆಫ್ರಿಕಾದ ಕೊಳಲು ವಾದಕ ವೂಟರ್ ಕೆಲ್ಲರ್ ಮನ್ ಹಾಗೂ ಜಪಾನಿನ ಸೆಲ್ಲಿಸ್ಟ್ ಎರು ಮತ್ಸುಮೊಟೊ ಅವರೊಂದಿಗೆ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಚಂದ್ರಿಕಾ ಟಂಡನ್, “ಸಂಗೀತವೆಂದರೆ ಪ್ರೀತಿ, ಸಂಗೀತವೆಂದರೆ ಬೆಳಕು ಹಾಗೂ ಸಂಗೀತವೆಂದರೆ ನಗು. ನಾವೆಲ್ಲರೂ ಪ್ರೀತಿ, ಬೆಳಕು ಹಾಗೂ ನಗುವಿನೊಂದಿಗೆ ಸುತ್ತುವರಿದಿರೋಣ. ಸಂಗೀತಕ್ಕೆ ಧನ್ಯವಾದ ಹಾಗೂ ಸಂಗೀತ ಸೃಷ್ಟಿಸುವ ಎಲ್ಲರಿಗೂ ಧನ್ಯವಾದ” ಎಂದು ಕೃತಜ್ಞತೆ ಸಲ್ಲಿಸಿದರು.