‘777 ಚಾರ್ಲಿ’ ನಿರ್ದೇಶಕ ಕಿರಣ್ ಬಾಲಿವುಡ್ ಗೆ ಲಗ್ಗೆ ?

ಕಿರಣ್ ರಾಜ್
ಕಿರಣ್ರಾಜ್ ಅವರು ಬಾಲಿವುಡ್ನಲ್ಲಿ ತಮ್ಮ ಚೊಚ್ಚಲ ನಿರ್ದೇಶನಕ್ಕಾಗಿ ನಟ ಸೈಫ್ ಅಲಿ ಖಾನ್ ಮತ್ತು ಕಾರ್ತಿಕ್ ಆರ್ಯನ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಪ್ಯಾನ್ ಇಂಡಿಯಾ ಯಶಸ್ಸು ಗಳಿಸಿದ ‘777 ಚಾರ್ಲಿ’ (2022) ಸಿನಿಮಾ ನಿರ್ದೇಶಕ ಕಿರಣ್ ರಾಜ್ ಕೆ ತಮ್ಮ ಮುಂದಿನ ಸಿನಿಮಾ ನಿರ್ದೇಶನಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ತಮ್ಮ ಚೊಚ್ಚಲ ಸಿನಿಮಾ ತೆರೆಗೆ ಬಂದ ಮೇಲೆ 5 ವರ್ಷಗಳ ನಂತರ ಬಾಲಿವುಡ್ ಸಿನಿಮಾ ನಿರ್ದೇಶಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಬಾಲಿವುಡ್ನಲ್ಲಿ ತಮ್ಮ ಚೊಚ್ಚಲ ನಿರ್ದೇಶನಕ್ಕಾಗಿ ಅವರು ಮೊದಲಿಗೆ ನಟ ಜಾನ್ ಅಬ್ರಾಹಾಂ ಜೊತೆಗೆ ಚರ್ಚಿಸಿರುವುದು ವರದಿಯಾಗಿತ್ತು. ಇದೀಗ ನಟ ಸೈಫ್ ಅಲಿ ಖಾನ್ ಮತ್ತು ಕಾರ್ತಿಕ್ ಆರ್ಯನ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಕಿರಣ್ ರಾಜ್ ಪ್ರಮುಖ ನಿರ್ಮಾಣ ಸಂಸ್ಥೆಯ ಜೊತೆಗೂ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ವಿವರಗಳು ಅಂತಿಮಗೊಂಡ ನಂತರ ಅಧಿಕೃತ ಘೋಷಣೆ ಮಾಡುವ ನಿರೀಕ್ಷೆಯಿದೆ.
ಕಿರಣ್ ರಾಜ್ ಕನ್ನಡ ನಟ ಧ್ರುವ ಸರ್ಜಾ ಅವರೊಂದಿಗಿನ ಕನ್ನಡ ಸಿನಿಮಾದ ಬಗ್ಗೆಯೂ ಚರ್ಚಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಅವರ ಹಿಂದಿ ಸಿನಿಮಾ ಮೊದಲು ಪ್ರಾರಂಭವಾಗುವುದೇ ಅಥವಾ ಕನ್ನಡ ಸಿನಿಮಾವೇ ಎಂದು ಸ್ಪಷ್ಟವಾಗಿಲ್ಲ. ಧ್ರುವ್ ಸರ್ಜಾ ಜೊತೆಗಿನ ಕಿರಣ್ ರಾಜ್ ಅವರ ಯೋಜನೆಯು ಚಿತ್ರಕತೆ ನಿರ್ಮಾಣದ ಹಂತದಲ್ಲಿದೆ ಎಂದು ವರದಿಯಾಗಿತ್ತು. ಆದರೆ ಇದೀಗ ಅವರು ಹಿಂದಿ ಯೋಜನೆಯತ್ತ ಹೆಚ್ಚು ಗಮನ ಕೊಡುತ್ತಿರುವಂತೆ ತೋರುತ್ತಿದೆ.
ಕಿರಣ್ರಾಜ್ ಅವರ ನಿರ್ದೇಶನದಲ್ಲಿ ಯಶಸ್ವೀ ಸಿನಿಮಾ ‘777 ಚಾರ್ಲಿ’ 2022 ಜೂನ್ನಲ್ಲಿ ಬಿಡುಗಡೆಯಾಗಿತ್ತು. ರಕ್ಷಿತ್ ಶೆಟ್ಟಿ ನಟಿಸಿದ ಸಿನಿಮಾವು ಸಾಹಸ, ಹಾಸ್ಯ ಮತ್ತು ಭಾವನೆಗಳನ್ನು ಸಂಯೋಜಿಸುವ ಒಂಟಿತನ ಮತ್ತು ಬೀದಿ ನಾಯಿಯ ನಡುವಿನ ಬಾಂಧವ್ಯವನ್ನು ಕೇಂದ್ರೀಕರಿಸಿತ್ತು. ಈ ಸಿನಿಮಾ ವಿವಿಧ ಭಾಷೆಗಳಲ್ಲಿ ಯಶಸ್ವಿಯಾಗಿರುವುದು ಕಿರಣ್ ರಾಜ್ ಅವರನ್ನು ಕನ್ನಡ ಸಿನಿಮಾವನ್ನು ಮೀರಿದ ನಿರ್ದೇಶಕರನ್ನಾಗಿಸಿತ್ತು.
ಮಾಹಿತಿ ಕೃಪೆ: ಸಿನಿಮಾ ಎಕ್ಸ್ಪ್ರೆಸ್






