‘ಜೈಲರ್ 2’ ಅಖಾಡಕ್ಕೆ ಹೃತಿಕ್ ಎಂಟ್ರಿ; 40 ವರ್ಷಗಳ ನಂತರ ರಜನೀಕಾಂತ್ ಜೊತೆಗೆ ತೆರೆಮೇಲೆ ಬಾಲಿವುಡ್ ನಟ!

ಹೃತಿಕ್ ರೋಷನ್ | Photo Credit : Hrithik Roshan \ instagram.com
ಅತಿಥಿ ಪಾತ್ರಕ್ಕಾಗಿ ಶಾರುಖ್ ಖಾನ್ ಅವರ ಜೊತೆಯೂ ಚಿತ್ರತಂಡ ಚರ್ಚಿಸಿತ್ತು. ಆದರೆ ವೇಳಾಪಟ್ಟಿಯ ಸಮಸ್ಯೆಯಿಂದಾಗಿ ಇದೀಗ ಪಾತ್ರ ಹೃತಿಕ್ ರೋಷನ್ ಮಡಿಲಿಗೆ ಬಿದ್ದಿದೆ.
ಹೃತಿಕ್ ರೋಷನ್ ಅವರ ಬಹುಚರ್ಚಿತ ಅತಿಥಿ ಪಾತ್ರವು ‘ಜೈಲರ್ 2’ಗೆ ಹೆಚ್ಚಿನ ನಿರೀಕ್ಷೆಯನ್ನು ನೀಡುತ್ತಿದೆ. ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಸಿನಿಮಾದಲ್ಲಿ ಹೃತಿಕ್ ಅವರ ಪಾತ್ರಕ್ಕಾಗಿಯೇ ವಿಶೇಷ ಹಿನ್ನೆಲೆ ಸಂಗೀತ ರಚಿಸುತ್ತಿದ್ದಾರೆ. ನಿರ್ಮಾಪಕರು ಈ ಕ್ಷಣವನ್ನು ಚಿತ್ರಮಂದಿರದಲ್ಲಿ ಸಿಳ್ಳೆ ಹೊಡೆಯುವ ಕ್ಷಣವಾಗಿ ರೂಪಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ಪ್ರೇಕ್ಷಕರನ್ನು ಮೆಚ್ಚಿಸುವ ಥೀಮ್ ಗಳು ಮತ್ತು ಬಾಕ್ಸ್ ಆಫೀಸ್ ಹಿಟ್ ಗಳನ್ನು ನೀಡುವಲ್ಲಿ ಪ್ರಸಿದ್ಧಿ ಪಡೆದ ಅನಿರುದ್ಧ್, ಹೃತಿಕ್ ಅವರ ಪ್ರವೇಶದ ಸಂದರ್ಭ ಸಿನಿಮಾದಲ್ಲಿ ಭರಪೂರ ಆ್ಯಕ್ಷನ್ ದೃಶ್ಯಗಳೊಂದಿಗೆ ಅತಿಥಿ ಪಾತ್ರಕ್ಕಾಗಿಯೇ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಪವರ್-ಪ್ಯಾಕ್ಡ್ ಬಿಜಿಎಂಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಚಿತ್ರತಂಡದ ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ. ಈ ವಿಶೇಷ ಸಂಗೀತದಿಂದ ನಟನ ಪ್ರವೇಶವನ್ನು ಇನ್ನಷ್ಟು ಅದ್ಭುತವಾಗಿ ನಿರೂಪಿಸಲು ಸಾಧ್ಯವಾಗಲಿದೆ.
ಈ ಅತಿಥಿ ಪಾತ್ರವು ಒಂದಕ್ಕಿಂತ ಹೆಚ್ಚು ಕಾರಣಗಳಿಗಾಗಿ ಮಹತ್ವ ಪಡೆದಿದೆ. ಸುಮಾರು 40 ವರ್ಷಗಳ ನಂತರ ಹೃತಿಕ್ ರೋಷನ್ ರಜನೀಕಾಂತ್ ಜೊತೆಗೆ ಮತ್ತೆ ನಟಿಸುತ್ತಿದ್ದಾರೆ. 1986ರ ಆ್ಯಕ್ಷನ್-ಡ್ರಾಮಾ ‘ಭಗವಾನ್ ದಾದಾ’ದಲ್ಲಿ ಇಬ್ಬರೂ ನಟರು ಜೊತೆಯಾಗಿ ಕಾಣಿಸಿಕೊಂಡಿದ್ದರು. ಆ ಸಿನಿಮಾದಲ್ಲಿ ಯುವ ಹೃತಿಕ್ ರೋಷನ್ ರಜನೀಕಾಂತ್ ಅವರ ದತ್ತುಪುತ್ರನಾಗಿ ನಟಿಸಿದ್ದರು. ಬಾಲಿವುಡ್ನಲ್ಲಿ ಜನಪ್ರಿಯತೆ ಸಾಧಿಸುವ ಮೊದಲು ಹೃತಿಕ್ ತೆರೆ ಮೇಲೆ ಕಾಣಿಸಿಕೊಂಡ ಮೊದಲ ಚಿತ್ರಗಳಲ್ಲಿ ಇದೂ ಒಂದಾಗಿದೆ.
ಅನೇಕ ಸುತ್ತಿನ ಮಾತುಕತೆಗಳ ನಂತರ ಹೃತಿಕ್ ರೋಷನ್ ‘ಜೈಲರ್ 2’ನ ಪಾತ್ರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಅವರು ತಮ್ಮ ಪಾಲಿನ ಚಿತ್ರೀಕರಣವನ್ನು ಜೂನ್ 22 ಮತ್ತು 23ರಂದು ಚೆನ್ನೈನಲ್ಲಿ ಪೂರ್ಣಗೊಳಿಸುವ ಸಾಧ್ಯತೆಯಿದೆ.
ಈ ಅತಿಥಿ ಪಾತ್ರಕ್ಕಾಗಿ ಶಾರುಖ್ ಖಾನ್ ಅವರ ಜೊತೆಯೂ ಚಿತ್ರತಂಡ ಚರ್ಚಿಸಿತ್ತು. ಆದರೆ ವೇಳಾಪಟ್ಟಿಯ ಸಮಸ್ಯೆಯಿಂದಾಗಿ ಇದೀಗ ಪಾತ್ರ ಹೃತಿಕ್ ರೋಷನ್ ಮಡಿಲಿಗೆ ಬಿದ್ದಿದೆ.
ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸಿರುವ ‘ಜೈಲರ್ 2’ ಸಿನಿಮಾದಲ್ಲಿ ಈಗಾಗಲೇ ದೊಡ್ಡ ತಾರಾಗಣವೇ ಇದೆ. ಮೋಹನ್ ಲಾಲ್, ಶಿವ ರಾಜ್ಕುಮಾರ್, ವಿಜಯ್ ಸೇತುಪತಿ, ಮಿಥುನ್ ಚಕ್ರವರ್ತಿ, ಎಸ್.ಜೆ. ಸೂರ್ಯ, ರಮ್ಯಾ ಕೃಷ್ಣನ್, ವಿದ್ಯಾ ಬಾಲನ್ ಮತ್ತು ಯೋಗಿ ಬಾಬು ಮೊದಲಾದವರು ನಟಿಸಿದ್ದಾರೆ. ಹೀಗಾಗಿ 2026ರ ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾಗಲಿರುವ ಈ ಸಿನಿಮಾದ ಮೇಲೆ ನಿರೀಕ್ಷೆಯೂ ಬೆಟ್ಟದಷ್ಟಿದೆ.






