‘ಜನ ನಾಯಗನ್’ ಸಿನಿಮಾ ಬಿಡುಗಡೆ ಮುಂದೂಡಿಕೆ; ಕಾರಣವೇನು?

credit: x/@IndiaToday
ಸೆನ್ಸಾರ್ ಮಂಡಳಿಯ ಪ್ರಮಾಣಪತ್ರ ಸಿಗದೆ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಬಿಡುಗಡೆಯನ್ನು ಅಧಿಕೃತವಾಗಿ ಮುಂದೂಡಲಾಗಿದೆ
ತಮಿಳು ನಟ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಬಿಡುಗಡೆಯನ್ನು ಅಧಿಕೃತವಾಗಿ ಮುಂದೂಡಲಾಗಿದೆ. ಜನವರಿ 9ರಂದು ಅದ್ದೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕಿದ್ದ ಚಿತ್ರ ಇದೀಗ ಸೆನ್ಸಾರ್ ಬೋರ್ಡ್ ಮತ್ತು ಸಿನಿಮಾ ತಂಡದ ನಡುವಿನ ಸಂಘರ್ಷದ ನಡುವೆ ನ್ಯಾಯಾಲಯದ ತೀರ್ಪು ವಿಳಂಬವಾಗಿ ಬಿಡುಗಡೆ ಮುಂದೂಡಿದೆ. ಈ ಕುರಿತು ಕೆವಿಎನ್ ಪ್ರೊಡಕ್ಷನ್ ಅಧಿಕೃತವಾಗಿ ಹೇಳಿಕೆ ನೀಡಿದೆ.
ಜನನಾಯಗನ್ ಬಿಡುಗಡೆಯಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿ ಥಿಯೇಟರ್ ಮಾಲಕರು ಕೋಟಿಗಟ್ಟಲೆ ರೂಪಾಯಿ ಮೌಲ್ಯದ ಟಿಕೆಟ್ ಗಳನ್ನು ಮಾರಿದ್ದರು. ಬಿಡುಗಡೆಯ ಮೊದಲು ಸಮಸ್ಯೆ ಇತ್ಯರ್ಥವಾಗುವ ನಂಬಿಕೆಯಿತ್ತು. ಆದರೆ ಕೆವಿಎನ್ ಸಂಸ್ಥೆ ನ್ಯಾಯಾಲಯದ ಮೆಟ್ಟಿಲೇರಿದ ಕಾರಣ ಬಿಡುಗಡೆ ದಿನವೇ ಜನವರಿ 9ರಂದು ಮದ್ರಾಸ್ ಹೈಕೋರ್ಟ್ ನಲ್ಲಿ ವಿಚಾರಣೆಯಿದೆ. ಹೀಗಾಗಿ ಜನವರಿ 9ರಂದು ಬಿಡುಗಡೆ ಸಾಧ್ಯವಾಗಲಿಲ್ಲ. ಮುಂಗಡವಾಗಿ ಖಾದಿರಿಸಿದ ಟಿಕೆಟುಗಳು ರದ್ದಾಗಿವೆ.
“ನಮ್ಮ ನಿಯಂತ್ರಣವನ್ನು ಮೀರಿದ ಸನ್ನಿವೇಶ ಎದುರಾಗಿರುವ ಕಾರಣ ಭಾರವಾದ ಹೃದಯದಲ್ಲಿ ಸಂಬಂಧಿತರಿಗೆ ಸುದ್ದಿಯನ್ನು ತಿಳಿಸುತ್ತಿದ್ದೇವೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಪೋಸ್ಟ್ನಲ್ಲಿ ಕೆವಿಎನ್ ಪ್ರೊಡಕ್ಷನ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ನಿರ್ಮಾಣ ಸಂಸ್ಥೆ ಪರಿಷ್ಕೃತ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಿಲ್ಲ. ಅಮೆರಿಕ, ಯುರೋಪ್ ಮತ್ತು ಮಲೇಷ್ಯಗಳ ವಿತರಕರು ಬಿಡುಗಡೆ ದಿನಾಂಕವನ್ನು ಮುಂದೂಡಿರುವುದನ್ನು ಸಾಮಾಜಿಕ ಜಾಲತಾಣಗಳ ಪೋಸ್ಟ್ ಗಳ ಮೂಲಕ ಖಚಿತಪಡಿಸಿದ್ದಾರೆ.
ಸೆನ್ಸಾರ್ ಬೋರ್ಡ್ ಪ್ರಮಾಣಪತ್ರವನ್ನು ಪಡೆಯಲು ವಿಫಲ
ಸಿನಿಮಾಗೆ ಸೆನ್ಸರ್ ಬೋರ್ಡ್ ಪ್ರಮಾಣಪತ್ರ ನೀಡಿರಲಿಲ್ಲ. ಹೀಗಾಗಿ ಕೆವಿಎನ್ ಪ್ರೊಡಕ್ಷನ್ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಸಿನಿಮಾಗೆ ‘UA 16+’ ಪ್ರಮಾಣಪತ್ರ ನೀಡಬೇಕು ಎಂದು ಸಿನಿಮಾ ತಂಡ ಕೇಳಿಕೊಂಡಿದೆ. ನ್ಯಾಯಾಲಯದ ವಿಚಾರಣೆಯನ್ನು ಜನವರಿ 9ಕ್ಕೆ ಮುಂದೂಡಿದೆ. ಜಾಗತಿಕವಾಗಿ ಥಿಯೇಟರ್ ಗಳಲ್ಲಿ ಮುಂಗಡ ಬುಕಿಂಗ್ ಕೂಡ ಆಗಿತ್ತು. ಹೀಗಾಗಿ ಸಿನಿಮಾ ಬಿಡುಗಡೆಯ ಅನಿಶ್ಚಿತತೆಯ ನಂತರ ತಮಿಳುನಾಡಿನಾದ್ಯಂತ ಥಿಯೇಟರ್ ಮಾಲೀಕರು ಟಿಕೆಟ್ ದುಡ್ಡು ಮರುಪಾವತಿಸುವುದಾಗಿ ಹೇಳಿದ್ದಾರೆ. ಆದರೆ ಅನೇಕ ಕಡೆ ಸರ್ಕಾರ ಹೇರಿದ ಮಿತಿಯನ್ನು ಮೀರಿ ಖಾಳಸಂತೆಯಲ್ಲಿ ಪ್ರತಿ ಟಿಕೆಟ್ ಗೆ ರೂ 5000ಕ್ಕೂ ಮೀರಿ ಟಿಕೆಟ್ಗಳು ಮಾರಾಟವಾಗಿದ್ದವು.
‘ಜನ ನಾಯಗನ್’ ಅಬ್ಬರದ ರಾಜಕೀಯ- ಆಕ್ಷನ್ ಸಿನಿಮಾ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಸುತ್ತ ಹೆಣೆದ ಕತೆಯಲ್ಲಿ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಶಕ್ತಿಯುತ ರಾಜಕೀಯ ಜಾಲದ ವಿರುದ್ಧ ಹೋರಾಡುವ ಕತೆಯಿದೆ. ಮುಂಗಡ ಟಿಕೆಟುಗಳು ಮಾರಾಟವಾಗಿ ‘ಜನನಾಯಗನ್’ ಸಿನಿಮಾದ ಮೇಲೆ ನಿರೀಕ್ಷೆ ಉತ್ತುಂಗದಲ್ಲಿರುವಾಗಲೇ ಬಿಡುಗಡೆ ಮುಂದೂಡಲಾಗಿರುವುದು ಅಭಿಮಾನಿಗಳಲ್ಲಿ ನಿರಾಶೆ ಮೂಡಿದೆ.
ವಿನೋತ್ ನಿರ್ದೇಶನ ಹಾಗೂ ವೆಂಕಟ್ ಕೆ ನಾರಾಯಣ ಅವರ ನಿರ್ಮಾಣದಲ್ಲಿ ಬರುವ ವಿಜಯ್ ಅಭಿನಯದ ಕೊನೆಯ ಚಿತ್ರವಿದು. ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್, ಪ್ರಿಯಾಮಣಿ ಮತ್ತು ನರೇನ್ ಸೇರಿದಂತೆ ಘಟಾನುಘಟಿ ಕಲಾವಿದರ ಬಳಗವಿದೆ.







