ವಿಜಯ್ ಅಭಿನಯದ ಕೊನೆಯ ಚಿತ್ರ ʼಜನನಾಯಗನ್ʼ ಗೆ ದಾಖಲೆ ಬುಕಿಂಗ್

ತಮಿಳು ನಟ ವಿಜಯ್ ಅಭಿನಯದ ಕೊನೆಯ ಚಿತ್ರ ‘ಜನ ನಾಯಗನ್’ ಸಿನಿಮಾ ಜನವರಿ 9ರಂದು ಬಿಡುಗಡೆಯಾಗಲಿದ್ದು, ಇಂದು ಬುಕಿಂಗ್ ತೆರದದ್ದೇ ದೇಶಾದ್ಯಂತ ಪ್ರಿಬುಕಿಂಗ್ನಲ್ಲಿ ದಾಖಲೆ ಬರೆದಿದೆ. ‘ಎಕ್ಸ್’ ಸಾಮಾಜಿಕ ಜಾಲತಾಣದ ವಿವರಗಳ ಪ್ರಕಾರ ವಿದೇಶಗಳಲ್ಲೂ ದಾಖಲೆ ಬುಕಿಂಗ್ ಆಗಿದೆ. ಮಲೇಷ್ಯಾದಲ್ಲಿ ಮೊದಲೇ ಬುಕಿಂಗ್ ಆಗಿರುವ 98,000 ಟಿಕೆಟ್ಗಳು ಮಾರಾಟವಾಗಿವೆ. ಉತ್ತರ ಅಮೆರಿಕದಲ್ಲಿ ಪ್ರೀಮಿಯರ್ ಟಿಕೆಟ್ ಮಾರಾಟದಲ್ಲಿ 750,000 ಡಾಲರ್ ಸಂಗ್ರಹಿಸಿದೆ. ಜಾಗತಿಕವಾಗಿ ಪ್ರಿ-ಬುಕಿಂಗ್ ಮಾರಾಟ 33 ಕೋಟಿ ರೂ. ದಾಟಿದ್ದು, ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ಮತ್ತು ಆಸ್ಟ್ರೇಲಿಯದಲ್ಲಿ ಬೇಡಿಕೆ ಕಂಡುಬಂದಿದೆ.
ರಿಟ್ಸಿ ಸಿನಿಮಾಸ್ ‘ಎಕ್ಸ್’ ಜಾಲತಾಣದಲ್ಲಿ ವಿವರ ಬರೆದಿದ್ದು, ಬುಕಿಂಗ್ ತೆರದ ನಂತರ ದಾಖಲೆ 12,000ಕ್ಕೂ ಹೆಚ್ಚು ಆಡಿಗಳಲ್ಲಿ ಟಿಕೆಟ್ ಐತಿಹಾಸಿಕ ಬುಕಿಂಗ್ ಆಗಿದೆ. ಇನ್ನೂ ಬುಕಿಂಗ್ ಆಗುತ್ತಲೇ ಇದೆ ಎಂದು ಬರೆದುಕೊಂಡಿದೆ.
ಬೆಂಗಳೂರಿನಲ್ಲಿ ಪ್ರತಿ ಟಿಕೆಟ್ಗೆ 2000 ರೂ.
ಮಾಧ್ಯಮ ವರದಿಗಳ ಪ್ರಕಾರ ಬೆಂಗಳೂರಿನಲ್ಲಿ ಸಿನಿಮಾ ಟಿಕೆಟ್ ದರ 2000 ರೂ. ತಲುಪಿದೆ. ಸಿನಿಮಾದ ಮೊದಲ ಪ್ರದರ್ಶನ ಜನವರಿ 9ರಂದು ಬೆಳಗ್ಗೆ 6.30ರಿಂದಲೇ ಆರಂಭವಾಗುತ್ತಿದ್ದು, ಮಲ್ಟಿಪ್ಲೆಕ್ಸ್ಗಳಲ್ಲಿ ಟಿಕೆಟ್ ದರ 1000-1500 ರೂವರೆಗೆ ಏರಿದೆ. ಬೆಂಗಳೂರು ಪೂರ್ವದಲ್ಲಿರುವ ‘ಮುಕುಂದ’ ಏಕಪರದೆ ಥಿಯೇಟರ್ನಲ್ಲಿ ಬೆಳಗ್ಗೆ 6.30ರ ಪ್ರದರ್ಶನದ ಟಿಕೆಟ್ 2000 ರೂ.ಗೆ ಸೋಲ್ಡ್ ಔಟ್ ಆಗಿದೆ. ಬೆಂಗಳೂರಿನ ವೈಷ್ಣವಿ ಮತ್ತು ವೈಭವ್ ಚಿತ್ರಮಂದಿರಗಳಲ್ಲಿ ಮೊದಲ ಪ್ರದರ್ಶನದ ಎಲ್ಲಾ ಮಾದರಿಯ ಟಿಕೆಟ್ಗಳಿಗೆ 1000 ರೂ. ನಿಗದಿಪಡಿಸಲಾಗಿದೆ. ಗೋವರ್ಧನ, ವೀರೇಶ್, ನವರಂಗ್ನಲ್ಲೂ ಮೊದಲ ಪ್ರದರ್ಶನದ ಟಿಕೆಟ್ 1000 ರೂ ಇದೆ. ಚೆನ್ನೈನಲ್ಲಿ ಇದೇ ಸಿನಿಮಾದ ಟಿಕೆಟ್ ದರ ರೂ 190 ಇದೆ.
ತಂದೆ- ಮಗಳ ಬಾಂಧವ್ಯದ ಕತೆ
'ಜನ ನಾಯಗನ್' ಚಿತ್ರದಲ್ಲಿ ತಂದೆ-ಮಗಳ ಬಾಂಧವ್ಯದ ಕತೆಯಿದೆ. ಈ ಚಿತ್ರದಲ್ಲಿ ವಿಜಯ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ನಟ ವಿಜಯ್ ಅವರ ಜೊತೆಗೆ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್, ಪ್ರಿಯಾಮಣಿ ಮತ್ತು ನರೇನ್ ಸೇರಿದಂತೆ ಘಟಾನುಘಟಿ ಕಲಾವಿದರು ಪಾತ್ರವರ್ಗದಲ್ಲಿದ್ದಾರೆ.
ಎಚ್ ವಿನೋದ್ ನಿರ್ದೇಶನದ ಸಿನಿಮಾಗೆ ವೆಂಕಟ್ ಕೆ ನಾರಾಯಣ ಬಂಡವಾಳ ಹೂಡಿದ್ದಾರೆ. ಸತ್ಯನ್ ಸೂರ್ಯನ್ ಅವರ ಛಾಯಾಗ್ರಹಣ ಹಾಗೂ ಪ್ರದೀಪ್ ಇ ರಾಘವ್ ಅವರ ಸಂಕಲನ ಈ ಚಿತ್ರಕ್ಕಿದೆ.







