ಸೆ.22ರಂದು ‘ಬನ್-ಟೀ’ ಕನ್ನಡ ಚಲನಚಿತ್ರ ತೆರೆಗೆ

ಮಂಗಳೂರು, ಸೆ.15: ಡಾ.ನಾಗತಿಹಳ್ಳಿ ಚಂದ್ರಶೇಖರ್ ಪ್ರಸ್ತುತಪಡಿಸುವ ರಾಧಾಕೃಷ್ಣ ಪಿಕ್ಚರ್ಸ್ನ ಕೇಶವ್ ಆರ್. ನಿರ್ಮಾಣ ಹಾಗೂ ಉದಯ್ ಕುಮಾರ್ ನಿರ್ದೇಶನದ ‘ಬನ್-ಟೀ’ ಕನ್ನಡ ಚಲನಚಿತ್ರ ಸೆ.22ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ನೈಜ ಘಟನೆಯ ಆಧಾರಿತ, ನಮ್ಮ ಶಿಕ್ಷಣ ಪದ್ಧತಿಯ ಮೇಲೆ ಬೆಳಕು ಚೆಲ್ಲುವ ಚಿತ್ರ ಇದಾಗಿದೆ. ನೈತಿಕ ಶಿಕ್ಷಣಕ್ಕಿಂತ ಮುಖ್ಯವಾಗಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಬೇಕೆಂಬ ಸೂತ್ರದಡಿ ಸಾಗುವ ಶಿಕ್ಷಣ ವ್ಯವಸ್ಥೆಯನ್ನು 'ಬನ್ ಟೀ' ಚಿತ್ರದ ಮೂಲಕ ಪ್ರಸ್ತುತಪಡಿಸಲಾಗುತ್ತಿದೆ. ಮಕ್ಕಳಿಗೆ ಕ್ರಿಯೇಟಿವ್ ಎಜುಕೇಶನ್ ನೀಡುವ ಅಗತ್ಯತೆಯನ್ನು ಈ ಚಿತ್ರದ ಮೂಲಕ ತೋರ್ಪಡಿಸುವ ಪ್ರಯತ್ನ ಮಾಡಲಾಗಿದೆ ಎಂದು ನಿರ್ದೇಶಕ ಉದಯ್ ಕರಮಾರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಾಲನಟ ತನ್ಮಯ್ ಶೆಟ್ಟಿ ಪ್ರಮುಖ ಪಾತ್ರ
ಚಿತ್ರದಲ್ಲಿ ಮಂಗಳೂರಿನ ಬಾಲ ಕಲಾವಿದ ಬಿಜೈಯ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿ ತನ್ಮಯ್ ಆರ್. ಶೆಟ್ಟಿ ಬೆಂಗಳೂರಿನಲ್ಲಿ ಸುಮಾರು ತಿಂಗಳ ಕಾಲ ಸ್ಲಂ ಪ್ರದೇಶದಲ್ಲಿ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದು, ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಟ ಉಮೇಶ್ ಸಕ್ಕರೆನಾಡ್, ನಟಿ ಶ್ರೀದೇವಿ, ಕ್ಯಾಮರಾ ಮೆನ್ ರಾಜರಾವ್ ಅಂಚಲಕರ್, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಮಂಗಳೂರು ಪ್ರೆಸ್ಕ್ಲಬ್ ಅಧ್ಯಕ್ಷ ಹರಿಪ್ರಸಾದ್ ರೈ ಉಪಸ್ಥಿತರಿದ್ದರು.
ಸ್ಲಂ ಭೇಟಿ ಸಾಕಷ್ಟು ಕಲಿಸಿದೆ
‘ಶಾಲೆಯಿಂದ ಒಂದು ತಿಂಗಳ ರಜೆ ಪಡೆದು ಬೆಂಗಳೂರಿನ ಸ್ಲಂನಲ್ಲಿ ಚಿತ್ರೀಕರಣದಲ್ಲಿ ಭಾಗವಹಿಸಿದ್ದೆ. ಅಲ್ಲಿನ ಸಮಸ್ಯೆ, ವ್ಯವಸ್ಥೆ, ಅವರ ಬದುಕು ಸಾಕಷ್ಟು ಅನುಭವದ ಜತೆಗೆ ಕಲಿಯಲು ಅವಕಾಶ ನೀಡಿತ್ತು’’ ಎಂದು ಬಾಲನಟ ತನ್ಮಯ್ ಪ್ರತಿಕ್ರಿಯಿಸಿದರು.