‘ಕಪ್ಪೆ ರಾಗʼ ಚಿತ್ರಕ್ಕೆ ಅಂತಾರಾಷ್ಟ್ರೀಯ ಮನ್ನಣೆ: ಕನ್ನಡದ ಸಾಕ್ಷ್ಯಚಿತ್ರಕ್ಕೆ ಜಾಕ್ಸನ್ ವೈಲ್ಡ್ ಅವಾರ್ಡ್

ಬೆಂಗಳೂರು: ಕನ್ನಡದ ಮೊದಲ ವೈಲ್ಡ್ ಲೈಫ್ ಮ್ಯೂಸಿಕಲ್ ಡಾಕ್ಯುಮೆಂಟರಿ ಚಿತ್ರವಾದ ʼಕಪ್ಪೆ ರಾಗʼಕ್ಕೆ ಗ್ರೀನ್ ಆಸ್ಕರ್ ಎಂದೇ ಖ್ಯಾತಿ ಪಡೆದಿರುವ ಅಂತಾರಾಷ್ಟ್ರೀಯ ಜಾಕ್ಸನ್ ವೈಲ್ಡ್ ಅವಾರ್ಡ್ ದೊರೆತಿದೆ.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ಗಣ್ಯರು ಸಂತಸ ವ್ಯಕ್ತಪಡಿಸಿದ್ದು, ಪ್ರತಿಷ್ಠಿತ ಜಾಕ್ಸನ್ ವೈಲ್ಡ್ ಅವಾರ್ಡ್ ಗೆ ಭಾಜನವಾಗಿರುವ ಕನ್ನಡದ ಮೊದಲ ‘ವೈಲ್ಡ್ ಲೈಫ್ ಮ್ಯೂಸಿಕಲ್ ಡಾಕ್ಯು ಫಿಲಂ’ ಕಪ್ಪೆರಾಗ ಚಿತ್ರತಂಡಕ್ಕೆ ಅಭಿನಂದನೆಗಳು ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
“ಕರುನಾಡಿನ ಪ್ರತಿಭೆಗಳ ಪರಿಶ್ರಮದ ಚಿತ್ರಕ್ಕೆ ಗ್ರೀನ್ ಆಸ್ಕರ್ ಎಂದೇ ಹೆಸರುವಾಸಿಯಾಗಿರುವ ಜಾಕ್ಸನ್ ವೈಲ್ಡ್ ಅವಾರ್ಡ್ ನಂತ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ದೊರೆತದ್ದು ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆಯ ಸಂಗತಿ. ಚಿತ್ರದ ನಿರ್ದೇಶಕ ಪ್ರಶಾಂತ್ ಎಸ್. ನಾಯ್ಕ ಮತ್ತವರ ತಂಡದ ಸಾಧನೆ ನಾಡಿನ ಯುವ ನಿರ್ದೇಶಕರಿಗೆ ಪ್ರೇರಣೆಯಾಗಲಿ, ಇಂಥ ಇನ್ನಷ್ಟು ಚಿತ್ರಗಳು ನಮ್ಮಲ್ಲಿ ಮೂಡಿಬಂದು, ಕನ್ನಡದ ಕಲರವ ಜಗದಗಲ ಮೊಳಗಲಿ ಎಂದು ಹಾರೈಸುತ್ತೇನೆ.” ಎಂದು ಅವರು ತಿಳಿಸಿದ್ದಾರೆ.
“ಪಶ್ಚಿಮ ಘಟ್ಟದಲ್ಲಿ ಕಂಡುಬರುವ 'ಕುಂಬಾರ ಕಪ್ಪೆ' ಎಂಬ ನಿಶಾಚರಿ ಕಪ್ಪೆಯ ಕುರಿತು ಕನ್ನಡಿಗರು ನಿರ್ಮಿಸಿರುವ 'ಕಪ್ಪೆರಾಗ-ಕುಂಬಾರನ ಹಾಡು' ಸಾಕ್ಷ್ಯಚಿತ್ರ, ಗ್ರೀನ್ ಆಸ್ಕರ್ ಎಂದೇ ಹೆಸರಾದ ಪ್ರತಿಷ್ಟಿತ 'ಜ್ಯಾಕ್ಸನ್ ವೈಲ್ಡ್ ಮೀಡಿಯಾ' ಪ್ರಶಸ್ತಿಗೆ ಭಾಜನಾವಾಗಿದೆ. ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ ಚಿತ್ರ ನಿರ್ಮಿಸಿದ ತಂಡಕ್ಕೆ ಅಭಿನಂದನೆಗಳು.” ಎಂದು ಸಚಿವ ದಿನೇಶ್ ಗುಂಡೂರಾವ್ ಅವರು ಟ್ವೀಟ್ ಮಾಡಿದ್ದಾರೆ.
ಕಪ್ಪೆ ರಾಗ ಹಾಡು ಅಮೆರಿಕದ ಪ್ರತಿಷ್ಠಿತ ಲಾಸ್ ಏಂಜಲೀಸ್‌ನ ಇಂಡಿಪೆಂಡೆಂಟ್ ಶಾರ್ಟ್ಸ್ ಅವಾರ್ಡ್‌ನಲ್ಲಿ ಅತ್ಯುತ್ತಮ ಸಂಗೀತ ವೀಡಿಯೋಗಾಗಿ ಚಿನ್ನದ ಪ್ರಶಸ್ತಿಯನ್ನು ಗೆದ್ದಿದೆ. ಅಲ್ಲದೆ, 13 ನೇ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವ 2023 ರಲ್ಲಿ ಅತ್ಯುತ್ತಮ ಸಂಗೀತ ವೀಡಿಯೊ ತೀರ್ಪುಗಾರರ ಆಯ್ಕೆ ಪ್ರಶಸ್ತಿಯನ್ನು ಗೆದ್ದಿದೆ.







