ʼಕರಾವಳಿʼ ಸಿನಿಮಾ ಟ್ರೈಲರ್ ಬಿಡುಗಡೆ: ಕಾರ್ಯಕ್ರಮದಲ್ಲಿ ಭಾಗವಹಿಸದ ನಟ ಪ್ರಜ್ವಲ್ ದೇವರಾಜ್; ಕಾರಣವೇನು?

Photo Credit ; Karavali (2026)-IMDb
ಮೂರು ನಿಮಿಷ ಮತ್ತು ಹದಿನೆಂಟು ಸೆಕೆಂಡುಗಳ ಟ್ರೇಲರ್ ವಾರ್ಷಿಕ ಕೋಣದ ಓಟದ ಸ್ಪರ್ಧೆಯಾದ ಕಂಬಳದ ಸುತ್ತ ಸಿನಿಮಾವನ್ನು ಹೆಣೆಯಲಾಗಿದೆ ಎಂದು ತೋರಿಸುತ್ತದೆ.
ರಾಜ್ ಬಿ ಶೆಟ್ಟಿ ಮತ್ತು ಪ್ರಜ್ವಲ್ ದೇವರಾಜ್ ಅಭಿನಯದ ‘ಕರಾವಳಿ’ ಸಿನಿಮಾದ ಟ್ರೇಲರ್ ಮಂಗಳವಾರ ಬಿಡುಗಡೆಯಾಗಿದೆ. ನಿರ್ದೇಶಕ ಗುರುದತ್ ಗಾಣಿಗ ಸಿನಿಮಾಗೆ ಸಾಹಿತ್ಯ ಬರೆದು ನಿರ್ದೇಶಿಸಿದ್ದಾರೆ. ಮೂರು ನಿಮಿಷ ಮತ್ತು ಹದಿನೆಂಟು ಸೆಕೆಂಡುಗಳ ಟ್ರೇಲರ್ ವಾರ್ಷಿಕ ಕೋಣದ ಓಟದ ಸ್ಪರ್ಧೆಯಾದ ‘ಕಂಬಳ’ದ ಸುತ್ತ ಹೆಣೆಯಲಾಗಿದೆ ಎಂದು ತೋರಿಸುತ್ತದೆ.
ಕಥೆ ಭವಿಷ್ಯದಲ್ಲಿ 30 ವರ್ಷಗಳ ಮುಂದಕ್ಕೆ ಸಾಗುತ್ತಿದ್ದಂತೆ ಪ್ರಜ್ವಲ್ ದೇವರಾಜ್ ಕೋಣದ ಓಟದಲ್ಲಿ ಶ್ರೇಷ್ಠತೆ ತೋರುತ್ತಿದ್ದಾರೆ. ಅಲ್ಲಿ ರಾಜ್ ಬಿ ಶೆಟ್ಟಿ ಅದೇ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ.
ಆದರೆ ಟ್ರೇಲರ್ ಗಿಂತ ಟ್ರೇಲರ್ ಬಿಡುಗಡೆಗೆ ಬಾರದ ನಾಯಕ ನಟ ಪ್ರಜ್ವಲ್ ದೇವರಾಜ್ ಸುದ್ದಿ ಮಾಡಿದ್ದಾರೆ. ಸಂಭಾವನೆ ಬಾಕಿ ಉಳಿದ ಕಾರಣದಿಂದ ಡಬ್ಬಿಂಗ್ ಮಾಡಿರಲಿಲ್ಲ ಎಂದು ಅವರು ಹೇಳಿದ್ದಾರೆ. ಟ್ರೇಲರ್ ನಲ್ಲಿ ಪ್ರಜ್ವಲ್ ದೇವರಾಜ್ ಧ್ವನಿಯೇ ಇಲ್ಲದೆ ಬೇರೆಯುವರಿಂದ ಡಬ್ಬಿಂಗ್ ಮಾಡಿ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಪ್ರಜ್ವಲ್ ಬೇಸರ ವ್ಯಕ್ತಪಡಿಸಿದ್ದಾರೆ ಮತ್ತು ಅದೇ ಕಾರಣದಿಂದ ಸಿನಿಮಾ ಟ್ರೇಲರ್ ಬಿಡುಗಡೆಗೆ ಬರಲಿಲ್ಲ ಎಂದು ತಿಳಿಸಿದ್ದಾರೆ. ಆದರೆ ನಿರ್ದೇಶಕ ಗುರುದತ್ ಗಾಣಿಗ ಅವರು ಬೇರೆಯೇ ವಿಚಾರ ಹೇಳುತ್ತಿದ್ದಾರೆ.
“ಸೋಮವಾರ ರಾತ್ರಿವರೆಗೆ ಪ್ರಜ್ವಲ್ ಅವರು ಕಾರ್ಯಕ್ರಮಕ್ಕೆ ಬರುತ್ತೇನೆ ಎಂದಿದ್ದರು. ನೂರು ಮಂದಿ ಅಭಿಮಾನಿಗಳೂ ಬರುತ್ತಾರೆ ಎಂದು ತಿಳಿಸಿದ್ದರು. ಪ್ರಜ್ವಲ್ ಅವರಿಗೆ ಈ ಸಿನಿಮಾಗಾಗಿ 1.25 ಕೋಟಿ ರೂ. ಸಂಭಾವನೆ ನಿಗದಿಪಡಿಸಿದ್ದೆವು. ಅದರಲ್ಲಿ 1 ಕೋಟಿ ರೂ. ಈಗಾಗಲೇ ನೀಡಿದ್ದೇವೆ. ಉಳಿದ ಹಣವನ್ನೂ ಕೊಡುತ್ತೇವೆ ಎಂದು ಹೇಳಿದ್ದೇವೆ. ಅದಕ್ಕೂ ಅವರು ಒಪ್ಪಿದ್ದರು. ಈ ವಿಚಾರದಲ್ಲಿ ಏನಾದರೂ ಸಮಸ್ಯೆ ಇದ್ದರೆ ನೇರವಾಗಿ ನಮಗೆ ಹೇಳಬಹುದಿತ್ತು. ಸುಮಾರು ಎರಡು ತಿಂಗಳಿಂದ ಅವರೊಂದಿಗೆ ನೇರವಾಗಿ ಮಾತನಾಡಲು ಸಾಧ್ಯವಾಗಿಲ್ಲ. ಸಂದೇಶಗಳಿಗೂ ಪ್ರತಿಕ್ರಿಯೆ ದೊರೆತಿಲ್ಲ. ಡಬ್ಬಿಂಗ್ ಮೊದಲು ಸಿನಿಮಾ ನೋಡಿ ತಮ್ಮ ಸಿನಿಜೀವನದ ಅತ್ಯುತ್ತಮ ಸಿನಿಮಾ ಎಂದು ಮೆಚ್ಚಿಕೊಂಡಿದ್ದರು” ಎಂದು ಗುರುದತ್ ಹೇಳಿದ್ದಾರೆ.
ಜುಲೈ24ರಂದು ಸಿನಿಮಾ ಬಿಡುಗಡೆಯಾಗಲಿದ್ದು, ಇನ್ನೂ ಅವರಿಂದಲೇ ಡಬ್ಬಿಂಗ್ ಮಾಡಿಸಬೇಕು. ಚೆನ್ನಾಗಿ ಬಂದರೆ ಅದನ್ನೇ ಬಳಸಬೇಕು ಎಂಬ ಉದ್ದೇಶ ನಮ್ಮದು. ಇದು ಪ್ರಜ್ವಲ್ ಅವರದ್ದೇ ಸಿನಿಮಾ. ಪೋಸ್ಟರ್ನಲ್ಲೂ ಅವರ ಹೆಸರೇ ಇದೆ ಎಂದು ಗುರುದತ್ ಹೇಳಿದ್ದಾರೆ.
ಈ ಬಗ್ಗೆ ಪ್ರಜ್ವಲ್ ಪ್ರತಿಕ್ರಿಯೆ ನೀಡಿ, “ಘಟನೆಯಿಂದ ನನಗೆ ಬೇಸರವಾಗಿದೆ. ನನಗೆ ನಿರ್ಮಾಪಕರು ಸಂಭಾವನೆ ನೀಡುವುದು ಬಾಕಿ ಇದೆ. ಟ್ರೇಲರ್ ಗೆ ಡಬ್ಬಿಂಗ್ ಮಾಡಲು ಸಿದ್ಧವಿದ್ದೆ. ಮ್ಯಾನೇಜರ್ ನಿರಂತರವಾಗಿ ಸಂಪರ್ಕದಲ್ಲಿರಲು ಹೇಳಿದ್ದೆ. ನಾನು ಕಾರ್ಯಕ್ರಮಕ್ಕೆ ಹೋಗಲೂ ಸಿದ್ಧವಿದ್ದೆ. ಬಹುಶಃ ಬಿಜಿಎಂ ಇಟ್ಟುಕೊಂಡು ಟ್ರೇಲರ್ ಮಾಡಿರಬಹುದು ಎಂದುಕೊಂಡಿದ್ದೆ. ಆದರೆ ಸೋಮವಾರ ತಡರಾತ್ರಿ ಟ್ರೇಲರ್ ಸಿಕ್ಕಾಗ ನನ್ನ ಧ್ವನಿಯೇ ಇಲ್ಲದೆ ಇರುವುದು ನೊಡಿ ಬೇಸರವಾಗಿದೆ” ಎಂದಿದ್ದಾರೆ.
“ಅವರು ಸಂಭಾವನೆ ಬಾಕಿ ಉಳಿಸಿಕೊಂಡಿರುವ ಜೊತೆಗೆ ನೀಡಿರುವ ಹಣಕ್ಕೆ 10-11 ಲಕ್ಷ ರೂ. ಜಿಎಸ್ಟಿಯನ್ನೂ ಕೊಟ್ಟಿಲ್ಲ. ಜಾಸ್ತಿನೇ ಸಂಭಾವನೆ ಬಾಕಿ ಇದೆ. ಜಿಎಸ್ಟಿ ಪೇಮೆಂಟ್ ಬಾಕಿ ಇದೆ. ಅದು ಕೊಟ್ಟ ಮೇಲೆ ಡಬ್ಬಿಂಗ್ ಮಾಡುವುದಾಗಿ ಹೇಳಿದ್ದೆ. ಕಳೆದ ವರ್ಷ ಇದೇ ರೀತಿ ಬಹುತೇಕ ಒಂದೂವರೆ ಕೋಟಿ ಸಂಭಾವನೆ ನಿರ್ಮಾಪಕರಿಗಾಗಿ ಬಿಟ್ಟಿದ್ದೀನಿ. ಆದರೆ, ಸಹಾಯ ಮಾಡುವ ಪರಿಸ್ಥಿತಿಯಲ್ಲಿ ನಾವು ಇದ್ದರೆ ಸಹಾಯ ಮಾಡಬಹುದು. ಸದ್ಯಕ್ಕೆ ನಾನು ಆ ಪರಿಸ್ಥಿತಿಯಲ್ಲಿ ಇಲ್ಲ. ಅಷ್ಟು ಕಾದಿದ್ದೇನೆ. ನನ್ನ ಎರಡು ಸಿನಿಮಾಗಳಿಗೆ 3 ವರ್ಷ ಆಗಿದೆ.” ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.
ಸಿನಿಮಾದಲ್ಲಿ ಸಂಪದ, ಮಿತ್ರ, ರಮೇಶ್ ಇಂದಿರಾ, ಸುಸ್ಮಿತಾ ಭಟ್, ಶ್ರೀಧರ್ ಕೆಎಸ್, ಗೋವಿಂದೇ ಗೌಡ ಮತ್ತು ನಿರಂಜನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಜ್ ಬಿ ಶೆಟ್ಟಿ ಮಂಗಳವಾರ ತಮ್ಮ ಇನ್ಸ್ಟಾಗ್ರಾಂ ಹ್ಯಾಂಡಲ್ನಲ್ಲಿ ಟ್ರೇಲರ್ ಹಂಚಿಕೊಂಡಿದ್ದಾರೆ. ಸಿನಿಮಾ ಜುಲೈ 24ರಂದು ಬಿಡುಗಡೆಯಾಗಲಿದೆ.






