2025 ರಲ್ಲಿ ಕೆಜಿಎಫ್ 3 ಬಿಡುಗಡೆ: ಹೊಂಬಾಳೆ ಫಿಲಂಸ್

ಕೆಜಿಎಫ್ | Photo: X
ಬೆಂಗಳೂರು: ‘ಕೆಜಿಎಫ್’ ಸರಣಿಯ ಮೂರನೇ ಚಿತ್ರವು 2025 ರಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಣ ಸಂಸ್ಥೆ ಹೊಂಬಾಳೆಯ ವಕ್ತಾರರು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಮೂಲಗಳ ಪ್ರಕಾರ, ಡಿಸೆಂಬರ್ 2023 ರ ವೇಳೆಗೆ ಕೆಜಿಎಫ್ ಚಾಪ್ಟರ್ 3 ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿ ಅಧಿಕೃತವಾಗಿ ಹೊರಬೀಳಲಿದೆ.
ಡಿಸೆಂಬರ್ 21 ರಂದು ‘ಕೆಜಿಎಫ್ʼ ಚಿತ್ರ ಬಿಡುಗಡೆಯಾಗಿ ಐದು ವರ್ಷಗಳು ಪೂರ್ತಿಯಾಗಲಿದ್ದು, ಅದೇ ದಿನ ‘ಕೆಜಿಎಫ್ 3’ ಬಿಡುಗಡೆಯ ಯೋಜನೆಯನ್ನು ಪ್ರಕಟಿಸುತ್ತೇವೆ. ‘ಕೆಜಿಎಫ್ 3’ಗಾಗಿ ನಿರ್ದೇಶಕ, ನಿರ್ಮಾಪಕ ಮತ್ತು ನಟರ ನಡುವೆ ಆರಂಭಿಕ ಸುತ್ತಿನ ಚರ್ಚೆ ನಡೆದಿದ್ದು, ಕಥಾಹಂದರವನ್ನು ಚರ್ಚಿಸಲಾಗಿದೆ ಎಂದು ಹೊಂಬಾಳೆ ವಕ್ತಾರರು ತಿಳಿಸಿದ್ದಾರೆ.
ಅಕ್ಟೋಬರ್ 2024 ರಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು, 2025 ರಲ್ಲಿ ಚಿತ್ರ ಬಿಡುಗಡೆಯಾಗಲಿದೆ. 'ಕೆಜಿಎಫ್ 3' ಬಿಡುಗಡೆಯ ಬಗ್ಗೆ ಈ ವರ್ಷ ಡಿಸೆಂಬರ್ನಲ್ಲಿ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಹೊಂಬಾಳೆ ಫಿಲಂಸ್ ನ ನಿರ್ಮಾಣದಲ್ಲಿ ಬಿಡುಗಡೆಯಾಗಲು ಇನ್ನೂ ಮೂರು ಪ್ಯಾನ್ ಇಂಡಿಯಾ ಚಿತ್ರಗಳಿವೆ. ರಿಷಬ್ ಶೆಟ್ಟಿ ಜೊತೆ 'ಕಾಂತಾರ 2', ಪೃಥ್ವಿರಾಜ್ ಸುಕುಮಾರನ್ ಜೊತೆ 'ಟೈಸನ್' ಮತ್ತು ಪ್ರಭಾಸ್ ಅವರ ಸಲಾರ್ ಚಿತ್ರಗಳು ಇನ್ನಷ್ಟೇ ತೆರೆಗೆ ಬರಬೇಕಿದೆ.





