ಮರಳಿಗೆ ಕೊರಳ್..!

ಕೊತ್ತಲವಾಡಿ ಎನ್ನುವ ಹೆಸರೇ ಹೇಳುವಂತೆ ಇದು ಒಂದು ಊರಿನ ಕಥೆ. ಸ್ವಾರ್ಥಕ್ಕಾಗಿ ತಮ್ಮ ಊರನ್ನೇ ಸ್ವತಃ ಕೊಳ್ಳೆ ಹೊಡೆಯುವ ಮಂದಿಯ ಮಧ್ಯೆ ಬದುಕಿಗಾಗಿ ಬಡಿದಾಡಿ ಬಾಳುವವರ ಕಥೆ.
ದುರಂತ ಘಟನೆಯೊಂದರಲ್ಲಿ ಕೊತ್ತಲವಾಡಿಯ ಮಂದಿ ಪ್ರಾಣ ಕಳೆದುಕೊಳ್ಳುತ್ತಾರೆ. ಇದರಿಂದ ನೊಂದ ಉಳಿದವರು ಆ ಊರನ್ನೇ ತೊರೆಯಲು ತೀರ್ಮಾನಿಸುತ್ತಾರೆ. ಆದರೆ ಗುಜರಿ ಬಾಬು ಎನ್ನುವಾತ ಜನರ ಈ ನಿರ್ಧಾರ ಬದಲಿಸುತ್ತಾನೆ. ಊರಿನ ನದಿಯಿಂದ ಮರಳು ಸಾಗಿಸುವ ಅಕ್ರಮ ದಂಧೆಗೆ ನೇತೃತ್ವ ವಹಿಸುತ್ತಾನೆ. ಇದೇ ದಂಧೆಯಿಂದ ಶ್ರೀಮಂತನಾಗಿ ಬಳಿಕ ಶಾಸಕನೂ ಆಗುತ್ತಾನೆ. ಆದರೆ ಒಂದು ಹಂತದಲ್ಲಿ ರಮೇಶ್ ಬಾಬುವಿನ ರಹಸ್ಯದ ಕರಾಳ ಮುಖ ಸ್ಥಳೀಯರ ಮುಂದೆ ಅನಾವರಣಗೊಳ್ಳುತ್ತದೆ. ಅದು ಹೇಗೆ? ಆತನ ಮರಳು ದಂಧೆಯ ವಿರುದ್ಧ ಕೊರಳೆತ್ತಿ ಕೂಗುವವರು ಯಾರೆಲ್ಲ? ಶಾಶ್ವತವಾಗಿ ಧ್ವನಿ ಕಳೆದುಕೊಳ್ಳುವವರು ಯಾರು?
ಇಷ್ಟಕ್ಕೂ ರಮೇಶ್ ಬಾಬುವಿನ ಮತ್ತೊಂದು ಮುಖ ಏನಾಗಿತ್ತು ಎನ್ನುವುದನ್ನು ತಿಳಿಯಬೇಕಾದರೆ ಚಿತ್ರಮಂದಿರಕ್ಕೆ ಹೋಗಬಹುದು.
ಇಡೀ ಚಿತ್ರ ರಮೇಶ್ ಬಾಬುವನ್ನೇ ಕೇಂದ್ರವಾಗಿಸಿದೆ. ಗುಜರಿ ಹೆಕ್ಕುತ್ತಿದ್ದ ವ್ಯಕ್ತಿಯೋರ್ವ ಶಾಸಕನಾದರೆ ಹೇಗಿರಬಹುದು ಎನ್ನುವುದನ್ನು ಕಣ್ಣಿಗೆ ಕಟ್ಟುವಂತೆ ತೋರಿಸಿದ್ದಾರೆ ಗೋಪಾಲಕೃಷ್ಣ ದೇಶಪಾಂಡೆ. ಕಣ್ಣ ಬೆಳಕಲ್ಲಿ, ತುಟಿಯ ಅಂಚಲ್ಲಿ ಮಾತ್ರವಲ್ಲ ಸಂಪೂರ್ಣ ಮುಖವನ್ನೇ ಕೆಳಗೆ ಹಾಕಿಯೂ ಭಾವ ವ್ಯಕ್ತಪಡಿಸಬಲ್ಲೆ ಎಂದು ಸಾಬೀತು ಮಾಡಿದ್ದಾರೆ.
ಆದರೆ ಚಿತ್ರದ ಟ್ರೈಲರ್ ಮತ್ತು ಹಾಡುಗಳಲ್ಲಿ ಪೃಥ್ವಿ ಅಂಬರ್‌ಗೆ ಸಿಕ್ಕಂಥ ಪ್ರಾಮುಖ್ಯತೆ ಚಿತ್ರದಲ್ಲಿ ಕಾಣಿಸದು. ಹೊಡೆದಾಟದ ಸನ್ನಿವೇಶದೊಂದಿಗೆ ಪೃಥ್ವಿ ಪಾತ್ರಕ್ಕೊಂದು ಇಂಟ್ರೋ ನೀಡಲಾಗಿದೆ. ಆದರೆ ಪೃಥ್ವಿಯ ಮೇಸ್ತ್ರಿ ಮೋನನ ಪಾತ್ರಕ್ಕೆ ಪೂರ್ತಿ ಚಿತ್ರದಲ್ಲಿ ಎಲ್ಲಿಯೂ ಮನಮುಟ್ಟುವಂಥ ಸನ್ನಿವೇಶಗಳಿಲ್ಲ. ಒಂದು ಚಾಕಲೆಟ್ ಲವ್ ಸ್ಟೋರಿ ಇದ್ದರೂ ಹೃದಯಕ್ಕೆ ನಾಟುವುದಿಲ್ಲ. ಮತ್ತೊಂದೆಡೆ ಪಾತ್ರವಾಗಿಯೂ, ಕಲಾವಿದನಾಗಿಯೂ ಗೋಪಾಲಕೃಷ್ಣ ದೇಶಪಾಂಡೆ ಪೃಥ್ವಿಯನ್ನು ಆಳುತ್ತಾ ಹೋಗುತ್ತಾರೆ. ಕ್ಲೈಮ್ಯಾಕ್ಸ್‌ನಲ್ಲಿ ಇನ್ನೇನು ಮೇಸ್ತ್ರಿ ಮೋನ ಹೊಸ ದಾರಿ ಕಂಡುಕೊಂಡ ಎನ್ನುವಷ್ಟರಲ್ಲಿ ಚಿತ್ರವೇ ಮುಕ್ತಾಯಗೊಳ್ಳುತ್ತದೆ.
ಹಾಡು, ಹೊಡೆದಾಟ, ನಟನೆಯಲ್ಲಿ ಪೃಥ್ವಿ ಎಷ್ಟು ಬೇಕೋ ಅಷ್ಟು ನೀಡಿದ್ದಾರೆ. ವೇದಿಕೆ ಕಾರ್ಯಕ್ರಮವೊಂದರಲ್ಲಿ ಒಳಗಿನ ನಿರೂಪಕ ಹೊರಗೆ ಬಂದಿರುವುದು ಬಿಟ್ಟರೆ ಉಳಿದಂತೆ ಎಲ್ಲೆಡೆ ಗ್ರಾಮೀಣ ಮಾತುಗಳಿಗೆ ಜೀವಂತಿಕೆ ನೀಡಿದ್ದಾರೆ. ಇಬ್ಬರು ನಾಯಕರ ನಡುವೆ ಇನ್ನಿಬ್ಬರು ನಾಯಕರಂತಿರುವುದು ಸಂಭಾಷಣೆಕಾರ ರಘು ನಿಡುವಳ್ಳಿ ಮತ್ತು ಛಾಯಾಗ್ರಾಹಕ ಕಾರ್ತಿಕ್. ಇವರಿಬ್ಬರು ಸೇರಿ ಸುಂದರವಾದ ಕೊತ್ತಲವಾಡಿಯಲ್ಲಿ ಆಕರ್ಷಕವಾದ ಮಾತುಗಳನ್ನು ಮೂಡಿಸಿದ್ದಾರೆ. ವಿಕಾಸ್ ವಸಿಷ್ಠ ಸಂಗೀತದಲ್ಲಿನ ಪ್ರೇಮಗೀತೆ ‘ಮುಂಗಾರು ಮಳೆಯಲ್ಲಿ’ ಈಗಾಗಲೇ ಜನಪ್ರಿಯವಾಗಿದೆ.
ಮೇಸ್ತ್ರಿ ಮೋನನ ಪ್ರೇಯಸಿ ಮಂಜಿಯಾಗಿ ಕಾವ್ಯ ಶೈವ ಭರವಸೆಯ ನಟನೆ ತೋರಿಸಿದ್ದಾರೆ. ಉಳಿದಂತೆ ಪೊಲೀಸ್ ಅಧಿಕಾರಿಗಳ ಪಾತ್ರ ನಟರಂಗ ರಾಜೇಶ್ ಮತ್ತು ಅವಿನಾಶ್‌ಗೆ ಹೊಸದೇನೂ ಅಲ್ಲ. ಆದರೆ ಶಾಸಕಿಯಾಗಿ ಮಾನಸಿ ಸುಧೀರ್ ನಿರ್ವಹಿಸಿದ ಪಾತ್ರದಲ್ಲಿ ಹೊಸತನವಿದೆ. ಗೋಪಾಲಕೃಷ್ಣ ದೇಶಪಾಂಡೆ ಪಾತ್ರಕ್ಕೆ ಒಂದು ಹಂತದಲ್ಲಿ ನೇರವಾಗಿ ಪೈಪೋಟಿ ನೀಡುವ ಪಾತ್ರ ಅಂದರೆ ಅದು ಮಾನಸಿ ನಟಿಸಿದಂಥ ಮಾಲಿನಿ ತಮ್ಮಣ್ಣ ಪಾತ್ರ. ಶಾಸಕಿಯ ಗತ್ತು, ತಂತ್ರಗಾರಿಕೆ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿದ್ದಾರೆ. ಕಾಂತಾರದಿಂದ ಜನಪ್ರೀತಿ ಪಡೆದ ಇವರ ಮಂಗಳೂರು ಕನ್ನಡವನ್ನು ನಿರ್ದೇಶಕರು ಇಲ್ಲಿಯೂ ಹಾಗೆಯೇ ಉಳಿಸಿಕೊಂಡಿದ್ದಾರೆ. ದೇಶಪಾಂಡೆಯ ಪಿಎ ಪಾತ್ರದಲ್ಲಿ ಸಿಕ್ಕ ಅವಕಾಶದಲ್ಲಿ ನಗು ಮೂಡಿಸುವಲ್ಲಿ ರಘು ರಾಮನಕೊಪ್ಪ ಯಶಸ್ವಿಯಾಗಿದ್ದರೆ.
ಗ್ರಾಮೀಣ ಭಾಗದಲ್ಲಿ ಮುಗ್ಧ ರೈತರು ಸಂಪಾದನೆಯ ಹೆಸರಲ್ಲಿ ಹೇಗೆ ಮೋಸ ಹೋಗುತ್ತಾರೆ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಕಥೆಯೊಳಗಿನ ಮನರಂಜನೆ ತುಸು ಕಡಿಮೆಯಾಗಿ ಕಂಡರೂ ಸಮಾಜಕ್ಕೊಂದು ಸಂದೇಶ ನೀಡುವಲ್ಲಿ ಚಿತ್ರ ಯಶಸ್ವಿಯಾಗಿದೆ.







