ಮಲಯಾಳಂ ನಟ, ಮಿಮಿಕ್ರಿ ಕಲಾವಿದ ಕಲಾಭವನ್ ಹನೀಫ್ ನಿಧನ

ಕಲಾಭವನ್ ಹನೀಫ್ (Photo: Facebook)
ತಿರುವನಂತಪುರಂ: ಹಲವಾರು ಮಲಯಾಳಂ ಚಲನಚಿತ್ರಗಳು ಹಾಗೂ ಟಿವಿ ಧಾರಾವಾಹಿಗಳಲ್ಲಿ ಹಾಸ್ಯ ಪಾತ್ರ ಮತ್ತು ಪೋಷಕ ಪಾತ್ರಗಳಲ್ಲಿ ನಟಿಸಿದ್ದ ಜನಪ್ರಿಯ ನಟ ಹಾಗೂ ಮಿಮಿಕ್ರಿ ಕಲಾವಿದ ಕಲಾಭವನ್ ಹನೀಫ್ ಗುರುವಾರ ನಿಧನರಾಗಿದ್ದಾರೆ. ವರದಿಗಳ ಪ್ರಕಾರ, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು, ಕಳೆದ ಎರಡು ದಿನಗಳಿಂದ ಕೊಚ್ಚಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ. ನಟ ಮನೋಜ್ ಕೆ. ಜಯನ್ ಹಾಗೂ ನಿರ್ದೇಶಕ ವಿಜಿ ಥಂಪಿ ಸೇರಿದಂತೆ ಹಲವಾರು ಚಿತ್ರರಂಗದ ಗಣ್ಯರು ಕಲಾಭವನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ ಎಂದು thenewsminute.com ವರದಿ ಮಾಡಿದೆ.
ಕೊಚ್ಚಿಯ ಮಟ್ಟಣ್ ಚೆರಿಯಲ್ಲಿ ಜನಿಸಿದ್ದ ಕಲಾಭವನ್ ಹನೀಫ್, ರಂಗಭೂಮಿ ಕಲಾವಿದರಾಗುವುದಕ್ಕೂ ಮುನ್ನ ಮಿಮಿಕ್ರಿ ಕಲಾವಿದರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದರು. ನಂತರ ಕಲಾಭವನ್ ಗುಂಪಿಗೆ ಸೇರ್ಪಡೆಯಾಗಿದ್ದ ಅವರು, ನಟನಾಗಿ ಪ್ರಾಮುಖ್ಯತೆ ಪಡೆದಿದ್ದರು. 1991ರಲ್ಲಿ ಅವರು ‘ಚೆಪ್ಪುಕಿಲುಕ್ಕನ ಚಂಗತಿ’ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ್ದರು. ಇದರ ಬೆನ್ನಿಗೇ ಅವರು ಸಂದೇಶಂ (1991), ಗಾಡ್ ಫಾದರ್ (1991), ಮಲಪ್ಪುರಂ ಹಾಜಿ ಮಹಾನಾಯ ಜೋಜಿ (1994) ಹಾಗೂ ತೆಂಕಾಸಿಪಟ್ಟಣಂ (2000) ಚಿತ್ರಗಳಲ್ಲಿ ಸಣ್ಣದಾದರೂ ಗಮನ ಸೆಳೆಯುವ ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಛೋಟಾ ಮುಂಬೈ (2007), ಉಸ್ತಾದ್ ಹೋಟೆಲ್ (2012), ದೃಶ್ಯಂ (2013), ಅಮರ್ ಅಕ್ಬರ್ ಅಂಟೋನಿ (2015) ಹಾಗೂ ಕಟ್ಟಪ್ಪನಯಿಲೆ ರಿತ್ವಿಕ್ ರೋಷನ್ (2016)ನಂತಹ ಜನಪ್ರಿಯ ಚಿತ್ರಗಳಲ್ಲೂ ಅವರು ಪುಟ್ಟ ಪಾತ್ರಗಳನ್ನು ನಿರ್ವಹಿಸಿದ್ದರು. ಆಸ್ಕರ್ಸ್ 2024ಗೆ ಭಾರತದಿಂದ ಅಧಿಕೃತ ಪ್ರವೇಶ ಪಡೆದಿರುವ ಜೂಡ್ ಆ್ಯಂಥನಿ ಜೋಸೆಫ್ (2018) ಚಿತ್ರದಲ್ಲಿ ಅವರು ಅಣೆಕಟ್ಟು ನಿರ್ವಾಹಕರಾಗಿ ಗಮನಾರ್ಹ ಪಾತ್ರದಲ್ಲಿ ನಟಿಸಿದ್ದರು. ಆಶಿಶ್ ಚಿನ್ನಪ್ಪ ನಿರ್ದೇಶನದ ವಿಡಂಬನಾತ್ಮಕ ಹಾಸ್ಯ ನಾಟಕವಾದ ‘ಜಲಾಧರ ಪಂಪ್ ಸೆಟ್ ಸಿನ್ಸ್ 1962’ನಲ್ಲಿ ಅವರು ಊರ್ವಶಿ ಹಾಗೂ ಇಂದ್ರನ್ಸ್ ಪಾತ್ರಗಳಲ್ಲಿ ಕೊನೆಯದಾಗಿ ನಟಿಸಿದ್ದರು.
ಚಲನಚಿತ್ರಗಳಲ್ಲದೆ, ಹಲವಾರು ಅಂತಾರಾಷ್ಟ್ರೀಯ ಮಿಮಿಕ್ರಿ ವೇದಿಕೆ ಕಾರ್ಯಕ್ರಮಗಳಲ್ಲಿ ಹನೀಫ್ ಪ್ರದರ್ಶನ ನೀಡಿದ್ದರು ಹಾಗೂ ಟಿವಿ ಧಾರಾವಾಹಿಗಳಲ್ಲೂ ನಟಿಸಿದ್ದರು.







