ಮಲಯಾಳಂನ ಖ್ಯಾತ ನಿರ್ದೇಶಕ ಶಾಫಿ ನಿಧನ

ಮಲಯಾಳಂ ಚಲನಚಿತ್ರ ನಿರ್ಮಾಪಕ ಶಾಫಿ (Photo: Facebook)
ಕೊಚ್ಚಿ : ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಮಲಯಾಳಂ ಚಲನಚಿತ್ರ ನಿರ್ಮಾಪಕ ಶಾಫಿ ಕೇರಳದ ಕೊಚ್ಚಿಯ ಆಸ್ಪತ್ರೆಯಲ್ಲಿ ಶನಿವಾರ ತಡರಾತ್ರಿ ನಿಧನರಾಗಿದ್ದಾರೆ.
ಶಾಫಿ ಎಂದೇ ಜನರು ಪ್ರೀತಿಯಿಂದ ಕರೆಯುತ್ತಿದ್ದ ರಶೀದ್ ಎಂ ಹೆಚ್ ಜನವರಿ 16ರಂದು ಪಾರ್ಶ್ವವಾಯುವಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಮಧ್ಯರಾತ್ರಿ 12.25ಕ್ಕೆ ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿದೆ.
ಶಾಫಿ ಅವರ ಅಂತಿಮ ಸಂಸ್ಕಾರ ರವಿವಾರ ಸಂಜೆ 4 ಗಂಟೆಗೆ ಕಾಲೂರು ಮುಸ್ಲಿಂ ಜುಮಾ ಮಸೀದಿಯಲ್ಲಿ ನಡೆಯಲಿದೆ ಎಂದು ಅವರ ಕುಟುಂಬದ ಸದಸ್ಯರು ಹೇಳಿರುವ ಬಗ್ಗೆ ಪಿಟಿಐ ವರದಿ ಮಾಡಿದೆ.
ಹೆಸರಾಂತ ಚಲನಚಿತ್ರ ನಿರ್ಮಾಪಕ ರಾಜಸೇನನ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಶಾಫಿ ತಮ್ಮ ಚೊಚ್ಚಲ ಚಿತ್ರ 'ಒನ್ ಮ್ಯಾನ್ ಶೋ' ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪನೆ ಮಾಡಿದ್ದರು.
ನಟ ದಿಲೀಪ್ ಅವರೊಂದಿಗಿನ ಅವರ ಸಹಯೋಗವು 'ಕಲ್ಯಾಣರಾಮನ್', 'ಮರಿಕ್ಕುಂಡೋರು ಕುಂಞಾಡ್' ಸೇರಿದಂತೆ ಹಲವಾರು ಬ್ಲಾಕ್ ಬಸ್ಟರ್ ಚಲನ ಚಿತ್ರ ನಿರ್ಮಾಣಕ್ಕೆ ಕಾರಣವಾಗಿದೆ. 'ಪುಲಿವಾಲ್ ಕಲ್ಯಾಣಂ', 'ತೊಮ್ಮನುಮ್ ಮಕ್ಕಳುಂ', 'ಮಾಯಾವಿ' ಮತ್ತು 'ಚಟ್ಟಂಬಿನಾಡು' ಚಿತ್ರದ ನಿರ್ದೇಶನ ಮಲಯಾಳಂ ಚಿತ್ರರಂಗದಲ್ಲಿ ಅವರ ಖ್ಯಾತಿಯನ್ನು ಹೆಚ್ಚಿಸಿತ್ತು.