ಮಾತೃಭೂಮಿ ಟ್ರೇಲರ್: ಭಾರತ–ಚೀನಾ ಸಂಘರ್ಷದ ನಡುವೆ ಶಾಂತಿಯ ಸಂದೇಶ ಸಾರುವ ಸಿನಿಮಾ

Photo Credit : X
ಸಲ್ಮಾನ್ ಖಾನ್ ನಟನೆಯ ‘ಮಾತೃಭೂಮಿ’ ಸಿನಿಮಾದ ಟ್ರೇಲರ್ ಗಡಿ ಸಂಘರ್ಷದ ಉದ್ವಿಗ್ನತೆ, ರೋಚಕ ಕಾದಾಟ ಮತ್ತು ಸೈನಿಕರ ಭಾವನಾತ್ಮಕ ಬಲಿದಾನಗಳ ಝಲಕ್ ನೀಡುತ್ತದೆ.
ಸಲ್ಮಾನ್ ಖಾನ್ ಅಭಿನಯದ ‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್’ ಸಿನಿಮಾ 2020ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ನಡೆದ ಭಾರತ–ಚೀನಾ ಘರ್ಷಣೆಯಿಂದ ಪ್ರೇರಿತವಾಗಿ ನಿರ್ಮಿಸಲಾಗಿದೆ. ಸಿನಿಮಾದ ಟ್ರೇಲರ್ ಮಂಗಳವಾರ ಬಿಡುಗಡೆಯಾಗಿದೆ. ಅಪೂರ್ವ ಲಖಿಯಾ ನಿರ್ದೇಶನದ ಈ ಸಿನಿಮಾದಲ್ಲಿ ಸಲ್ಮಾನ್ ಕರ್ತವ್ಯಕ್ಕೆ ಬದ್ಧನಾಗಿರುವ ಸೈನಿಕನ ಪಾತ್ರ ನಿರ್ವಹಿಸಿದ್ದಾರೆ. ಜೊತೆಗೆ ಅವರು ಪ್ರೀತಿಯ ಪತಿ ಮತ್ತು ತಂದೆಯೂ ಆಗಿದ್ದಾರೆ.
‘ಮಾತೃಭೂಮಿ’ ಸಿನಿಮಾ ಸೈನಿಕರು ಮತ್ತು ರಾಷ್ಟ್ರದ ಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳುವವರು ಮಾಡುವ ತ್ಯಾಗಗಳನ್ನು ಚಿತ್ರಿಸುತ್ತದೆ. ಯುದ್ಧದಿಂದ ಅವರ ಕುಟುಂಬಗಳ ಮೇಲೆ ಉಂಟಾಗುವ ಭಾವನಾತ್ಮಕ ಪರಿಣಾಮಗಳನ್ನೂ ಎತ್ತಿ ತೋರಿಸುತ್ತದೆ.
ಈ ಸಿನಿಮಾ 2020ರ ಜೂನ್ 15ರಂದು ವಾಸ್ತವಿಕ ನಿಯಂತ್ರಣ ರೇಖೆಯ (LAC) ಉದ್ದಕ್ಕೂ ಇರುವ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೈನಿಕರು ಚೀನಾದ ಸೈನಿಕರೊಂದಿಗೆ ನಡೆಸಿದ ನೈಜ ಸಂಘರ್ಷವನ್ನು ಆಧರಿಸಿದೆ. ಈ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಮೃತಪಟ್ಟಿದ್ದರು. ದಶಕಗಳಲ್ಲೇ ಭಾರತ ಮತ್ತು ಚೀನಾ ನಡುವಿನ ಅತ್ಯಂತ ಗಂಭೀರ ಸೇನಾ ಮುಖಾಮುಖಿಗಳಲ್ಲಿ ಇದೂ ಒಂದಾಗಿದೆ.
ಸಿನಿಮಾದಲ್ಲಿ ಸಲ್ಮಾನ್ ಖಾನ್ ಅವರು 16 ಬಿಹಾರ ರೆಜಿಮೆಂಟ್ ನ ಕಮಾಂಡಿಂಗ್ ಆಫೀಸರ್ ಕರ್ನಲ್ ಸಂತೋಷ್ ಬಾಬು ಪಾತ್ರ ನಿರ್ವಹಿಸಿದ್ದಾರೆ. ಗಡಿಯಲ್ಲಿ ಒಪ್ಪಂದವನ್ನು ಜಾರಿಗೊಳಿಸುವ ಸಂದರ್ಭದಲ್ಲಿ ನಡೆದ ಘರ್ಷಣೆಯಲ್ಲಿ ಅವರು ಭಾರತೀಯ ಸೇನೆಯನ್ನು ಮುನ್ನಡೆಸಿದ್ದರು.
*ಮಾತೃಭೂಮಿ ಟ್ರೇಲರ್ನಲ್ಲಿ ಏನಿದೆ?
4 ನಿಮಿಷ 35 ಸೆಕೆಂಡುಗಳ ಟ್ರೇಲರ್ ಪೂರ್ವ ಲಡಾಖ್ನ ಹಿಮದಿಂದ ಆವೃತವಾದ ಭೂಪ್ರದೇಶದ ದೃಶ್ಯಗಳೊಂದಿಗೆ ಆರಂಭವಾಗುತ್ತದೆ. ಸಲ್ಮಾನ್ ಖಾನ್ ಅವರನ್ನು 16 ಬಿಹಾರ ರೆಜಿಮೆಂಟ್ ನ ಅಧಿಕಾರಿಯಾಗಿ ಪರಿಚಯಿಸಲಾಗಿದೆ. ಕುಟುಂಬದ ಕಾಳಜಿಗಳಿದ್ದರೂ ಅವರು ಕರ್ತವ್ಯ ನಿರ್ವಹಿಸಲು ಸ್ವಯಂಪ್ರೇರಣೆಯಿಂದ ಮುಂದೆ ಬರುತ್ತಾರೆ.
ಅವರ ಪತ್ನಿಯ ಪಾತ್ರದಲ್ಲಿ ನಟಿಸಿರುವ ಚಿತ್ರಾಂಗದಾ ಸಿಂಗ್ ಹಾಸ್ಯಭರಿತ ಮಾತುಗಳ ಮೂಲಕ ಅವರಿಗೆ ಧೈರ್ಯ ತುಂಬುತ್ತಾರೆ. ತಮ್ಮ ಪುಟ್ಟ ಮಗನಿಗೆ ಭಾವನಾತ್ಮಕವಾಗಿ ವಿದಾಯ ಹೇಳುವ ಸಂದರ್ಭದಲ್ಲಿ, 'ಸೈನಿಕರು ವಿದಾಯ ಹೇಳುವುದಿಲ್ಲ, ಸೆಲ್ಯೂಟ್ ಮಾಡುತ್ತಾರೆ' ಎಂದು ಅವರು ನೆನಪಿಸುತ್ತಾರೆ. 'ತಮ್ಮ ಮಗನ ರಕ್ಷಣೆಗೆ ತಾಯಿ ಇದ್ದರೆ, ತಾಯ್ನಾಡಿನ ರಕ್ಷಣೆಗೆ ಮಕ್ಕಳು ಇದ್ದಾರೆ' ಎಂದು ಕುಟುಂಬಕ್ಕೆ ಹೇಳುತ್ತಾರೆ.
ಟ್ರೇಲರ್ ನಲ್ಲಿ ಸಾಹಸ ದೃಶ್ಯಗಳೂ ಇವೆ. ಸಲ್ಮಾನ್ ಖಾನ್ ಚೀನೀ ಸೈನಿಕರ ವಿರುದ್ಧ ಹೋರಾಡುವ ದೃಶ್ಯಗಳನ್ನು ತೋರಿಸಲಾಗಿದೆ. ಬಂದೂಕುಗಳನ್ನು ಬಳಸದೆ ಕೈಕೈ ಮಿಲಾಯಿಸಿ ನಡೆಯುವ ಕಾದಾಟ ಹಾಗೂ ಭೀಕರ ಸಂಘರ್ಷದ ನಡುವೆಯೂ ಅವರು ದೃಢವಾಗಿ ನಿಂತಿರುವ ದೃಶ್ಯಗಳಿವೆ.
ಗಡಿಯುದ್ದಕ್ಕೂ ಚೀನೀ ಪಡೆಗಳು ಡೇರೆಗಳನ್ನು ಹಾಕಿರುವುದನ್ನು ಭಾರತೀಯ ಪಡೆಗಳು ಗಮನಿಸಿದಾಗ, ಸಲ್ಮಾನ್ ಖಾನ್ ಸಂಭಾಷಣೆಯ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸುತ್ತಾರೆ. ಆದರೆ ಎದುರಾಳಿ ಪಡೆಗಳ ಸಂಖ್ಯೆ ಹೆಚ್ಚಿರುತ್ತದೆ. ಹೀಗಾಗಿ ಅವರು ಹಿಂದೆ ಸರಿಯಲು ನಿರಾಕರಿಸುತ್ತಾರೆ. ಉದ್ವಿಗ್ನತೆ ತೀವ್ರಗೊಂಡು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪುತ್ತದೆ. 'ಒಬ್ಬ ಬಿಹಾರಿ ನೂರು ಜನರ ಮೇಲೆ ಮುಗಿಬೀಳಬಹುದು' ಎಂದು ಹೇಳುವ ಮೂಲಕ 16 ಬಿಹಾರ ರೆಜಿಮೆಂಟ್ನ ಸೈನಿಕರಲ್ಲಿ ಧೈರ್ಯ ತುಂಬುವ ದೃಶ್ಯವೂ ಇದೆ.
ಒಂದು ಸಂಭಾಷಣೆಯಲ್ಲಿ ಸಲ್ಮಾನ್ ಖಾನ್, ತಮ್ಮ ಎದುರು ನಿಂತಿರುವ ಚೀನೀ ಕಮಾಂಡರ್ಗೆ 'ಈ ಸಮಸ್ಯೆಯನ್ನು ಬಗೆಹರಿಸೋಣ ಬ್ರೊ!' ("Let's sort this s-*-*t, bro!") ಎಂದು ಹೇಳುತ್ತಾರೆ. ಈ ಸಂಭಾಷಣೆಯನ್ನು ಸಲ್ಮಾನ್ ಅವರ ವೈರಲ್ ಹೇಳಿಕೆಯಾದ 'ಸೋನಂ ಇಟ್ಸ್ ಡನ್ ಬ್ರೊ' ಎಂಬ ಮಾತಿಗೆ ಹೋಲಿಸಲಾಗುತ್ತಿದೆ. ಈ ಹೇಳಿಕೆ ರಾಜಕೀಯ ವಲಯದಲ್ಲಿ ಮತ್ತು ಪ್ರತಿಭಟನಾಕಾರರ ನಡುವೆ ಕುಖ್ಯಾತಿ ಪಡೆದಿತ್ತು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೋನಂ ವಾಂಗ್ಚುಕ್ ಅವರಿಗೆ ಸಲ್ಮಾನ್ ಈ ಮಾತು ಹೇಳಿದ್ದರು.
'ನೀವು ಮನೆಗೆ ಮರಳುವಾಗ ಕಥೆಗಳೊಂದಿಗೆ ಹಿಂತಿರುಗಿ, ಗಾಯಗಳೊಂದಿಗೆ ಅಲ್ಲ' ಎಂದು ಸಲ್ಮಾನ್ ಖಾನ್ ಅವರ ಪತ್ನಿಯ ಪಾತ್ರ ಹೇಳುವ ದೃಶ್ಯವೂ ಇದೆ. ಈ ಮೂಲಕ ಸೇನೆಯ ಭಾವನಾತ್ಮಕ ಮುಖವನ್ನೂ ಪರಿಚಯಿಸಲಾಗಿದೆ.
ಯುದ್ಧ ಘೋಷಿಸುವವರೇ ಮುಂಚೂಣಿಯಲ್ಲಿ ನಿಂತು ಸೈನಿಕರೊಂದಿಗೆ ಹೋರಾಡುವಂತಾದರೆ ಎಂದಿಗೂ ಯುದ್ಧವೇ ಇರುವುದಿಲ್ಲ ಎಂದು ಸಲ್ಮಾನ್ ವಾದಿಸುತ್ತಾರೆ. 'ಮಾನವೀಯತೆ ಮತ್ತು ದೇಶಭಕ್ತಿ ಎಂದರೆ ಶತ್ರುವನ್ನು ನಾಶಪಡಿಸುವುದಲ್ಲ, ದ್ವೇಷವನ್ನು ಕೊನೆಗೊಳಿಸುವುದು' ಎಂಬ ಸಂದೇಶದೊಂದಿಗೆ ಟ್ರೇಲರ್ ಮುಕ್ತಾಯಗೊಳ್ಳುತ್ತದೆ.
ಟ್ರೇಲರ್ ವಿಳಂಬಕ್ಕೆ ಸೆನ್ಸರ್ ಕಾರಣವಲ್ಲ
ಮಾತೃಭೂಮಿ ಸಿನಿಮಾದ ಟ್ರೇಲರ್ ಅನ್ನು ನವೆಂಬರ್ 6ರಂದು ಮುಂಬೈನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಮಾಧ್ಯಮಗಳಿಗಾಗಿ ಪ್ರದರ್ಶಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಸಲ್ಮಾನ್ ಖಾನ್, ಸಿನಿಮಾದ ವಿಷಯಕ್ಕೆ ಸಂಬಂಧಿಸಿದಂತೆ ವೈರಲ್ ಆಗುತ್ತಿದ್ದ ಊಹಾಪೋಹಗಳು ಸುಳ್ಳು ಎಂದು ಹೇಳಿದ್ದಾರೆ. ಸಿನಿಮಾ ಚೀನಾ ವಿರೋಧಿ ಸಂದೇಶವನ್ನು ಹೊಂದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
'ಮಾತೃಭೂಮಿ ಜೀವನಚರಿತ್ರೆಯಂತಹ ಸಿನಿಮಾವಲ್ಲ. ಯುದ್ಧದಲ್ಲಿ ಬುಲೆಟ್ ಗುರಿಯನ್ನು ಹೊಡೆಯುತ್ತದೆ. ಅದು ತಾಯಿಯ ಹೃದಯವನ್ನು ಭೇದಿಸುತ್ತದೆ. ಅಂತಹುದನ್ನು ಮಾಡುವುದು ನನಗೆ ಇಷ್ಟವಿಲ್ಲ. ಸಿನಿಮಾದಲ್ಲಿ ಚೀನೀಯರೂ ಇದ್ದಾರೆ, ನಾವೂ ಇದ್ದೇವೆ. ಈ ಸಿನಿಮಾ ಭಾರತ ಮತ್ತು ಚೀನಾ ನಡುವೆ ಹುಳಿ ಹಿಂಡಲಿದೆ ಎಂದು ಹೇಳಲಾಗಿತ್ತು. ಅದು ಸರಿಯಲ್ಲ' ಎಂದು ಅವರು ಹೇಳಿದ್ದಾರೆ.
ಸಿನಿಮಾದ ನಿರ್ಮಾಪಕರು ಚಿತ್ರಕಥೆಯನ್ನು ಮತ್ತೆ ಬರೆಯುವ ಒತ್ತಡಕ್ಕೆ ಒಳಗಾಗಿದ್ದರು ಎಂಬ ಊಹಾಪೋಹವನ್ನೂ ಅವರು ತಳ್ಳಿಹಾಕಿದ್ದಾರೆ.
'ಇವೆಲ್ಲವೂ ಆಧಾರರಹಿತ ಹೇಳಿಕೆಗಳು. ಇವುಗಳಲ್ಲಿ ಸತ್ಯವಿಲ್ಲ. ಸೈನಿಕರು ಮತ್ತು ಅವರ ಕುಟುಂಬಗಳು ಎರಡೂ ಕಡೆಯಲ್ಲೂ ಇರುತ್ತಾರೆ. ಚಿತ್ರದಲ್ಲಿ ಯಾವುದೇ ನಕಾರಾತ್ಮಕ ಶಕ್ತಿಗಳಿಲ್ಲ. ನಕಾರಾತ್ಮಕವಾಗಿರುವುದು ಕೇವಲ ಸನ್ನಿವೇಶಗಳು' ಎಂದು ಅವರು ಹೇಳಿದ್ದಾರೆ.
ಸಲ್ಮಾನ್ ಖಾನ್ ‘ಮಾತೃಭೂಮಿ’ ಸಿನಿಮಾ ವಿಳಂಬವಾದ ಬಗ್ಗೆಯೂ ಮಾತನಾಡಿದ್ದಾರೆ. ನಟಿ ಚಿತ್ರಾಂಗದಾ ಸಿಂಗ್ ಅವರಿಗೆ ಗಾಯವಾಗಿದ್ದರಿಂದ ಚಿತ್ರೀಕರಣದ ವೇಳಾಪಟ್ಟಿಯ ಮೇಲೆ ಪರಿಣಾಮ ಬೀರಿತ್ತು. ಜೊತೆಗೆ VFX ಕೆಲಸದಿಂದಲೂ ವಿಳಂಬವಾಗಿದೆ ಎಂದು ಅವರು ತಿಳಿಸಿದ್ದಾರೆ.
ಜನವರಿ ಅಥವಾ ಜೂನ್ ನಲ್ಲಿ ಬಿಡುಗಡೆಯಾಗಬೇಕಿದ್ದ ಈ ಸಿನಿಮಾ ಇದೀಗ ಡಿಸೆಂಬರ್ 4ರಂದು ಬಿಡುಗಡೆಯಾಗಲಿದೆ.
‘ಮಾತೃಭೂಮಿ’ ಸಿನಿಮಾವನ್ನು ಸೆನ್ಸರ್ ಮಂಡಳಿಯು ಯಾವುದೇ ಕತ್ತರಿ ಪ್ರಯೋಗವಿಲ್ಲದೆ ಅನುಮೋದಿಸಿದೆ ಎಂದು ಸಲ್ಮಾನ್ ಹೇಳಿದ್ದಾರೆ. 'ಸಿನಿಮಾಗೆ ಯಾವುದೇ ಕಟ್ ಇಲ್ಲದೆ ಅನುಮತಿ ನೀಡಲಾಗಿದೆ. ಅದಕ್ಕಾಗಿ ಸಚಿವಾಲಯ ಮತ್ತು ಸೆನ್ಸರ್ ಮಂಡಳಿಗೆ ಧನ್ಯವಾದಗಳು' ಎಂದು ಅವರು ತಿಳಿಸಿದ್ದಾರೆ.
ಅಪೂರ್ವ ಲಖಿಯಾ ನಿರ್ದೇಶನದ ಈ ಸಿನಿಮಾವನ್ನು ಸಲ್ಮಾನ್ ಖಾನ್ ಫಿಲ್ಮ್ಸ್ ಅಡಿಯಲ್ಲಿ ನಿರ್ಮಿಸಲಾಗಿದೆ.






