"ಯಾವತ್ತೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ": ಮಗಳ ಸಾವಿನ ಬಳಿಕ ನಟ ವಿಜಯ್ ಆ್ಯಂಟನಿ ಹಳೆಯ ವಿಡಿಯೋ ವೈರಲ್!
ವಿಜಯ್ ಆ್ಯಂಟನಿ (Photo: NDTV)
ಚೆನ್ನೈ: ತಮಿಳು ನಟ ಹಾಗೂ ಸಂಗೀತ ನಿರ್ದೇಶಕ ವಿಜಯ್ ಆ್ಯಂಟನಿ ಅವರ ಪುತ್ರಿ ಮೀರಾ ಮಂಗಳವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದು, ಇದೀಗ ವಿಜಯ್ ಆ್ಯಂಟನಿ ಅವರು ಈ ಹಿಂದೆ ಆತ್ಮಹತ್ಯೆ ವಿರುದ್ಧ ನೀಡಿದ್ದ ಹೇಳಿಕೆಯೊಂದು ನೆಟ್ಟಿಗರ ಗಮನ ಸೆಳೆದಿದೆ.
ತಮ್ಮ ಬದುಕಿನ ನೋವಿನ ಅನುಭವವನ್ನೇ ಬಿಚ್ಚಿಟ್ಟಿದ್ದ ವಿಜಯ್, ಅವರ ಚಿಕ್ಕ ವಯಸ್ಸಿನಲ್ಲಿಯೇ ಅವರ ತಂದೆಯನ್ನು ಆತ್ಮಹತ್ಯೆಗೆ ಕಳೆದುಕೊಂಡಿದ್ದು, ಇಂತಹ ವಿಪರೀತದ ತೀರ್ಮಾನಗಳನ್ನು ತೆಗೆದುಕೊಳ್ಳದಂತೆ ಜನರನ್ನು ಮನವಿ ಮಾಡಿರುವ ವಿಡಿಯೋ ಇದಾಗಿದ್ದು, ಎಷ್ಟೇ ಕಷ್ಟ ಬಂದರೂ ಆತ್ಮಹತ್ಯೆ ಮಾತ್ರ ಮಾಡಬೇಡಿ ಎಂದು ಹೇಳಿದ್ದರು.
"ಜೀವನವು ಎಷ್ಟೇ ನೋವಿನಿಂದ ಕೂಡಿದ್ದರೂ, ಅಥವಾ ನೀವು ಅನುಭವಿಸಬೇಕಾದ ತೊಂದರೆಗಳ ಹೊರತಾಗಿಯೂ, ಎಂದಿಗೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಇದು ಮಕ್ಕಳ ಹೃದಯವನ್ನು ಒಡೆಯುತ್ತದೆ. ನನಗೆ 7 ವರ್ಷದವನಾಗಿದ್ದಾಗ ಮತ್ತು ನನ್ನ ಸಹೋದರಿ 5 ವರ್ಷದವಳಿದ್ದಾಗ ನನ್ನ ತಂದೆ ಆತ್ಮಹತ್ಯೆ ಮಾಡಿಕೊಂಡರು. ನಂತರ ನನ್ನ ತಾಯಿ ಎಷ್ಟು ಕಷ್ಟಪಟ್ಟರು ಮತ್ತು ಅವರು ಅನುಭವಿಸಿದ ಕಷ್ಟಗಳನ್ನು ನಾನು ನೋಡಿದ್ದೇನೆ" ಎಂದು ವಿಜಯ್ ಒಮ್ಮೆ ಸಂದರ್ಶನವೊಂದರಲ್ಲಿ ಹೇಳಿದ್ದರು.
ಅಧ್ಯಯನದ ಒತ್ತಡದಿಂದ ಮಕ್ಕಳಲ್ಲಿ ಉಂಟಾಗುತ್ತಿರುವ ಆತ್ಮಹತ್ಯೆಯ ಪ್ರವೃತ್ತಿಯ ಬಗ್ಗೆಯೂ ವಿಜಯ್ ಮಾತನಾಡಿದ್ದರು.
"ಶಾಲೆ ಮುಗಿದ ತಕ್ಷಣ ಅವರನ್ನು ಟ್ಯೂಷನ್ಗೆ ಕಳುಹಿಸಲಾಗುತ್ತದೆ, ನೆನಪಿಡಿ, ನೀವು ಅವರಿಗೆ ಯೋಚಿಸಲು ಸಹ ಸಮಯವನ್ನು ನೀಡುತ್ತಿಲ್ಲ, ದಯವಿಟ್ಟು ಹಾಗೆ ಮಾಡಬೇಡಿ. ಅವರಿಗೆ ಸ್ವಲ್ಪ ಅವಕಾಶ ನೀಡಿ, ಮುಕ್ತವಾಗಿರಲು ಸಮಯ ನೀಡಿ. ವಯಸ್ಕರು ಸಂಪತ್ತು ಮತ್ತು ಯಶಸ್ಸಿನ ಮೇಲೆ ಗೀಳನ್ನು ಹೊಂದುವುದಕ್ಕಿಂತ ಹೆಚ್ಚಾಗಿ ತಮ್ಮನ್ನು ತಾವು ಪ್ರೀತಿಸಬೇಕೆಂದು ನಾನು ಬಯಸುತ್ತೇನೆ" ಎಂದು ವಿಜಯ್ ಹೇಳಿದ್ದರು.