‘‘ಯುದ್ಧದಿಂದ ಯಾರಿಗೂ ಯಾವುದೇ ರೀತಿಯ ಪ್ರಯೋಜನಗಳಿಲ್ಲ’’

ಮೋಹನ್ ಲಾಲ್ ಮತ್ತು ಅಲ್ಲು ಶಿರೀಷ್ ಅಭಿನಯದ, ೧೯೭೧ರ ಭಾರತ-ಪಾಕಿಸ್ತಾನ ಸಮರದ ಹಿನ್ನೆಲೆಯಲ್ಲಿ ಮೂಡಿಬಂದಿರುವ ‘೧೯೭೧: Beyond Borders’(ಮೂಲ: ಮಲಯಾಳಂ) ಸಿನೆಮಾ ನಾಯಕ ತನ್ನ ಮೊಮ್ಮಕ್ಕಳಿಗೆ ಹೇಳುವಂತಹ ಮಾತನ್ನೇ ಈ ಬರಹದ ಶೀರ್ಷಿಕೆಯನ್ನಾಗಿ ಬಳಸಿದ್ದೇನೆ. ಈ ಸಿನೆಮಾದ ಕಥಾಹಂದರವನ್ನು ಗಮನಿಸಿದಾಗ, ಯುದ್ಧವೆಂಬುದು ಕೇವಲ ಎರಡು ರಾಷ್ಟ್ರಗಳ ನಡುವಿನ ಭೌಗೋಳಿಕ ಸಂಘರ್ಷವಾಗಿ ಉಳಿಯದೆ, ಅದೊಂದು ಅತ್ಯಂತ ಸೂಕ್ಷ್ಮ ಹಾಗೂ ಸಂಕೀರ್ಣವಾದ ಮಾನವೀಯ ದುರಂತವಾಗಿ ತೆರೆದುಕೊಳ್ಳುತ್ತದೆ. ಯುದ್ಧದ ಕುರಿತಾದ ಬಹುಪಾಲು ಸಿನೆಮಾಗಳು ಅತಿಯಾದ ರಾಷ್ಟ್ರೀಯತೆಯ ಭಾವುಕತೆಯನ್ನು ಪ್ರಚೋದಿಸುತ್ತಾ, ಶತ್ರುವನ್ನು ಕೇವಲ ದುಷ್ಟನೆಂದು ಬಿಂಬಿಸುವ ಮೂಲಕ ಪ್ರೇಕ್ಷಕರಲ್ಲಿ ಉದ್ವೇಗವನ್ನು ಹುಟ್ಟುಹಾಕುತ್ತವೆ. ಆದರೆ, ಈ ಸಿನೆಮಾ ಯುದ್ಧದ ಹಿಂದಿರುವ ರಾಜಕೀಯ, ಸೈನಿಕರ ನೈತಿಕ ದ್ವಂದ್ವಗಳು ಮತ್ತು ಗಡಿಗಳನ್ನು ಮೀರಿದ ಮಾನವೀಯತೆಯ ಸೂಕ್ಷ್ಮ ನೆಲೆಗಳನ್ನು ಬಹಳ ಆಳವಾಗಿ ಶೋಧಿಸುತ್ತದೆ. ಈ ಸಿನೆಮಾ ಯುದ್ಧವನ್ನು ಕೇವಲ ಶೌರ್ಯದ ಪ್ರದರ್ಶನವನ್ನಾಗಿಯಲ್ಲ, ಬದಲಾಗಿ ಮನುಷ್ಯನ ಅಸಹಾಯಕತೆಯ ಸಂಕೇತವಾಗಿ ಚಿತ್ರಿಸಿದೆ.
ಸಿನೆಮಾದ ಒಳನೋಟವೆಂದರೆ, ‘ಗಡಿಗಳು ಮತ್ತು ಆಜ್ಞೆಗಳ’(Borders and Orders) ನಡುವೆ ಸಿಲುಕಿಕೊಳ್ಳುವ ಸೈನಿಕನ ವಾಸ್ತವಿಕತೆ. ಯುದ್ಧಗಳು ಎಂದಿಗೂ ಸೈನಿಕರ ವೈಯಕ್ತಿಕ ದ್ವೇಷದಿಂದ ಹುಟ್ಟುವುದಿಲ್ಲ; ಅವು ರಾಜಕೀಯ ನಾಯಕರ ಸ್ವಾರ್ಥ, ಸಾಮ್ರಾಜ್ಯಶಾಹಿ ಆಕಾಂಕ್ಷೆಗಳು ಮತ್ತು ಭೌಗೋಳಿಕ ಹಿಡಿತದ ಹಪಾಹಪಿಯಿಂದ ಸೃಷ್ಟಿಯಾಗುತ್ತವೆ ಎಂಬ ಕಟುಸತ್ಯವನ್ನು ಚಿತ್ರ ಬಹಳ ನಿರ್ದಾಕ್ಷಿಣ್ಯವಾಗಿ ಹೇಳುತ್ತದೆ. ಪ್ರಭುತ್ವಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಮತ್ತು ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಚದುರಂಗದಾಟವಾಡುತ್ತವೆ. ಈ ಆಟದಲ್ಲಿ ಗಡಿಯ ಎರಡೂ ಕಡೆ ನಿಂತಿರುವ ಸೈನಿಕರು ಕೇವಲ ದಾಳಗಳಾಗುತ್ತಾರೆ. ಶತ್ರು ಪಾಳೆಯದಲ್ಲಿ ನಿಂತಿರುವ ಸೈನಿಕನಿಗೂ, ಈ ಕಡೆ ಗುಂಡು ಹಾರಿಸುತ್ತಿರುವ ಸೈನಿಕನಿಗೂ ವೈಯಕ್ತಿಕವಾಗಿ ಯಾವುದೇ ಪರಿಚಯವಿರುವುದಿಲ್ಲ, ದ್ವೇಷವೂ ಇರುವುದಿಲ್ಲ. ಆದರೂ ಅವರು ಪರಸ್ಪರರ ಪ್ರಾಣ ತೆಗೆಯಲು ಮುಂದಾಗುವುದು ಕೇವಲ ಆಜ್ಞೆಗಳ ಪಾಲನೆಗಾಗಿ ಮಾತ್ರ ಎಂಬ ಅಮಾನವೀಯ ವಾಸ್ತವವನ್ನು ಚಿತ್ರದ ಸಂಭಾಷಣೆಗಳು ಪದೇ ಪದೇ ನೆನಪಿಸುತ್ತವೆ.
ಇದೇ ಹಿನ್ನೆಲೆಯಲ್ಲಿ ಸಿನೆಮಾ ಭಗವದ್ಗೀತೆಯ ತತ್ವಗಳನ್ನು ಯುದ್ಧರಂಗಕ್ಕೆ ಅನ್ವಯಿಸುವ ಪರಿಯೂ ವಿಶಿಷ್ಟವಾಗಿದೆ. ‘ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ’ ಎಂಬ ಶ್ಲೋಕದ ಉಲ್ಲೇಖದ ಮೂಲಕ, ಸೈನಿಕನು ಶಸ್ತ್ರ ಹಿಡಿಯುವುದು ರಕ್ತದಾಹದಿಂದಲ್ಲ, ಬದಲಾಗಿ ಅದೊಂದು ‘ಕರ್ತವ್ಯ’ ಎಂಬ ತಾತ್ವಿಕ ಸಮರ್ಥನೆಯನ್ನು ನೀಡಲಾಗುತ್ತದೆ. ಭಾರತೀಯ ಸೈನಿಕನಿಗೆ ತನ್ನ ಮಾತೃಭೂಮಿಯ ರಕ್ಷಣೆ ಎನ್ನುವುದು ಧರ್ಮ. ಅದೇ ರೀತಿ ಪಾಕಿಸ್ತಾನದ ಸೈನಿಕನಿಗೂ ಅವನ ದೇಶದ ಆದೇಶವನ್ನು ಪಾಲಿಸುವುದು ಅವನ ಕರ್ತವ್ಯ. ಇಬ್ಬರೂ ತಮ್ಮ ತಮ್ಮ ಧರ್ಮವನ್ನು(ಕರ್ತವ್ಯವನ್ನು) ಪಾಲಿಸುತ್ತಿರುವಾಗ, ಯಾರು ಸರಿ ಯಾರು ತಪ್ಪು ಎಂಬ ನೈತಿಕ ಪ್ರಶ್ನೆ ಯುದ್ಧಭೂಮಿಯಲ್ಲಿ ಅಪ್ರಸ್ತುತವಾಗಿಬಿಡುತ್ತದೆ. ಇಲ್ಲಿ ಕೇವಲ ಬದುಕುಳಿಯುವ ಮತ್ತು ದೇಶವನ್ನು ಉಳಿಸುವ ಅನಿವಾರ್ಯತೆ ಮಾತ್ರ ವಿಜೃಂಭಿಸುತ್ತದೆ. ಈ ಕರ್ತವ್ಯ ಪ್ರಜ್ಞೆಯು ಸೈನಿಕನನ್ನು ಒಬ್ಬ ಯಂತ್ರದಂತೆ ಕಾರ್ಯನಿರ್ವಹಿಸಲು ಪ್ರೇರೇಪಿಸಿದರೂ, ಆತನ ಒಳಗಿರುವ ಮನುಷ್ಯ ಆಗಾಗ ಎಚ್ಚರಗೊಳ್ಳುವ ದೃಶ್ಯಗಳು ಸಿನೆಮಾದ ಜೀವಂತಿಕೆಯನ್ನು ಹೆಚ್ಚಿಸಿವೆ.
ಯುದ್ಧದ ಭೀಕರತೆಯ ನಡುವೆಯೂ ಅರಳಿ ನಿಲ್ಲುವ ಮಾನವೀಯತೆಯ ಚಿತ್ರಣ ಈ ಸಿನೆಮಾದ ಮತ್ತೊಂದು ಪ್ರಮುಖ ಆಯಾಮ. ಯುದ್ಧಭೂಮಿಯಲ್ಲಿ ಶತ್ರುವನ್ನು ಕೊಲ್ಲುವುದು ಅನಿವಾರ್ಯವಾದರೂ, ಸೆರೆಸಿಕ್ಕ ಯುದ್ಧಕೈದಿಗಳನ್ನು ಭಾರತೀಯ ಸೇನೆ ನಡೆಸಿಕೊಳ್ಳುವ ರೀತಿ ಸಾಂಸ್ಕೃತಿಕ ಘನತೆಯನ್ನು ಎತ್ತಿಹಿಡಿಯುತ್ತದೆ. ಜಿನೀವಾ ಒಪ್ಪಂದದ ನಿಯಮಗಳ ಜೊತೆಗೆ ಭಾರತೀಯ ಪರಂಪರೆಯ ‘ಅತಿಥಿ ದೇವೋ ಭವ’ ಎಂಬ ಉದಾತ್ತ ಪರಿಕಲ್ಪನೆಯನ್ನು ಯುದ್ಧಭೂಮಿಯಲ್ಲಿ ಅಳವಡಿಸುವ ದೃಶ್ಯಗಳು, ಶತ್ರುತ್ವವು ಕೇವಲ ರಣರಂಗಕ್ಕೆ ಮಾತ್ರ ಸೀಮಿತ, ಅದರ ಹೊರಗೆ ಎಲ್ಲರೂ ಮನುಷ್ಯರೇ ಎಂಬ ಸಂದೇಶವನ್ನು ಸಾರುತ್ತವೆ. ಶತ್ರು ಸೈನಿಕನ ಮೃತದೇಹಕ್ಕೂ ಅಗೌರವ ತೋರದೆ ಘನತೆಯಿಂದ ನಡೆಸಿಕೊಳ್ಳುವ ನಾಯಕನ ಗುಣ, ಯುದ್ಧವು ಮನುಷ್ಯತ್ವವನ್ನು ಸಂಪೂರ್ಣವಾಗಿ ನಾಶಮಾಡಲು ಸಾಧ್ಯವಿಲ್ಲ ಎಂಬುದರ ದ್ಯೋತಕವಾಗಿದೆ.
ಯುದ್ಧದ ಅತಿ ದೊಡ್ಡ ಬೆಲೆಯನ್ನು ತೆರುವುದು ರಣರಂಗದಲ್ಲಿ ಹೋರಾಡುವ ಸೈನಿಕನಷ್ಟೇ ಅಲ್ಲ, ಆತನ ಬರುವಿಕೆಗಾಗಿ ಕಾಯುವ ಹಿನ್ನೆಲೆಯ ಕುಟುಂಬಗಳು. ಸಿನೆಮಾದಲ್ಲಿ ಬರುವ ಪತ್ರಗಳು, ಪ್ರೀತಿಪಾತ್ರರ ನೆನಪುಗಳು ಮತ್ತು ಊರಿಗೆ ಮರಳುವ ಕನಸುಗಳು ಗಡಿಯ ಎರಡೂ ಕಡೆಯ ಸೈನಿಕರಿಗೆ ಸಮಾನವಾಗಿರುತ್ತವೆ. ತಾಯಿಗೆ ಮಗನ, ಹೆಂಡತಿಗೆ ಗಂಡನ ಮತ್ತು ಮಗುವಿಗೆ ತಂದೆಯ ಪ್ರೀತಿ ಗಡಿಗಳನ್ನು ಮೀರಿ ಒಂದೇ ಆಗಿರುತ್ತದೆ. ಹಾರುವ ಗುಂಡಿಗೆ ಯಾವುದೇ ಧರ್ಮ, ಭಾಷೆ ಅಥವಾ ರಾಷ್ಟ್ರೀಯತೆಯ ಹಂಗಿರುವುದಿಲ್ಲ. ಆ ಗುಂಡು ಒಬ್ಬ ಸೈನಿಕನ ಎದೆ ಸೀಳಿದಾಗ, ಅದರೊಂದಿಗೆ ಅಸಂಖ್ಯಾತ ಕನಸುಗಳು, ಭರವಸೆಗಳು ಮತ್ತು ಒಂದು ಇಡೀ ಕುಟುಂಬದ ಭವಿಷ್ಯವೇ ನುಚ್ಚುನೂರಾಗುತ್ತದೆ. ಸಾವಿನ ಎದುರು ಎಲ್ಲ ಮನುಷ್ಯರೂ ಅಸಹಾಯಕರೇ ಎಂಬ ದಾರ್ಶನಿಕ ಸತ್ಯವನ್ನು ಚಿತ್ರದ ಭಾವನಾತ್ಮಕ ದೃಶ್ಯಗಳು ಪ್ರೇಕ್ಷಕನ ಮನಸ್ಸಿಗೆ ನಾಟುವಂತೆ ಮಾಡುತ್ತವೆ.
ಈ ಕಥಾನಕವು ಕೇವಲ ಶಸ್ತ್ರಾಸ್ತ್ರಗಳ ಅಬ್ಬರ ಮತ್ತು ವಿಜಯೋತ್ಸವದ ಕೇಕೆಗಳಿಗೆ ಸೀಮಿತವಾಗದೆ, ಯುದ್ಧದ ಆಚೆಗಿರುವ ಶೂನ್ಯತೆಯನ್ನು ಪ್ರಶ್ನಿಸುತ್ತದೆ. ಪ್ರಭುತ್ವಗಳ ಹಠಮಾರಿ ಧೋರಣೆಗಳಿಗೆ ಸಾಮಾನ್ಯ ಯುವಕರು ತಮ್ಮ ಯೌವನವನ್ನು ಮತ್ತು ಪ್ರಾಣವನ್ನು ಬಲಿದಾನ ಮಾಡುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇದೆ. ರಾಷ್ಟ್ರೀಯತೆಯ ಹೆಸರಿನಲ್ಲಿ ಯುದ್ಧವನ್ನು ವೈಭವೀಕರಿಸುವ ಇಂದಿನ ಅಪಾಯಕಾರಿ ಟ್ರೆಂಡ್ ನಡುವೆ, ಯುದ್ಧವು ಅಂತಿಮವಾಗಿ ತಂದುಕೊಡುವುದು ಕೇವಲ ನೋವು, ಸಾವು ಮತ್ತು ಅಳಿಸಲಾಗದ ಕಲೆಗಳನ್ನು ಮಾತ್ರ ಎಂಬ ಎಚ್ಚರಿಕೆಯ ಗಂಟೆಯನ್ನು ಈ ಚಿತ್ರ ಮೊಳಗಿಸುತ್ತದೆ. ಗಡಿಗಳಾಚೆಗೂ ಇರುವುದು ನಮ್ಮಂತೆಯೇ ಉಸಿರಾಡುವ, ಪ್ರೀತಿಸುವ ಮತ್ತು ಕಣ್ಣೀರು ಸುರಿಸುವ ಮನುಷ್ಯರೇ ಎಂಬ ಅರಿವು ಮೂಡಿದಾಗ ಮಾತ್ರ ಯುದ್ಧೋನ್ಮಾದ ಕಡಿಮೆಯಾಗಿ ಶಾಂತಿಯತ್ತ ಹೆಜ್ಜೆ ಇಡಲು ಸಾಧ್ಯ. ಈ ನಿಟ್ಟಿನಲ್ಲಿ, ಈ ಸಿನೆಮಾ ಕೇವಲ ಗತಕಾಲದ ಯುದ್ಧದ ಕಥೆಯಾಗದೆ, ಭವಿಷ್ಯದ ಶಾಂತಿಗಾಗಿನ ಒಂದು ಆರ್ದ್ರವಾದ ಪ್ರಾರ್ಥನೆಯಾಗಿ ಪ್ರೇಕ್ಷಕನ ಅಂತರಂಗವನ್ನು ಕಲಕುತ್ತದೆ. ಯೂಟ್ಯೂಬ್‌ನಲ್ಲಿ ಲಭ್ಯವಿರುವ ಈ ಸಿನೆಮಾವನ್ನು ಎಲ್ಲರೂ ನೋಡಲೇಬೇಕು.






