ಖ್ಯಾತ ಇರಾನಿ ನಿರ್ದೇಶಕ ದಾರಿಯುಶ್ ಮೆಹ್ರ್ ಜುಯಿ, ಪತ್ನಿಯ ಇರಿದು ಹತ್ಯೆ

Photo credit: X/@maziarbahari
ಟೆಹ್ರಾನ್: ಖ್ಯಾತ ಇರಾನಿ ಚಲನಚಿತ್ರ ನಿರ್ದೇಶಕ ದಾರಿಯುಶ್ ಮೆಹ್ರ್ ಜುಯಿ ಹಾಗೂ ಅವರ ಪತ್ನಿಯನ್ನು ಅವರ ನಿವಾಸದಲ್ಲಿ ಇರಿದು ಹತ್ಯೆಗೈಯ್ಯಲಾಗಿದೆ ಎಂದು ರವಿವಾರ ಸರ್ಕಾರಿ ಮಾಧ್ಯಮವನ್ನು ಉಲ್ಲೇಖಿಸಿ Associated Press ವರದಿ ಮಾಡಿದೆ. ಅಧಿಕೃತ IRNA ಸುದ್ದಿ ಸಂಸ್ಥೆಯ ಪ್ರಕಾರ, ಮೆಹ್ರ್ ಜುಯಿ ಹಾಗೂ ಅವರ ಪತ್ನಿಯು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರ ಕತ್ತಿನ ಸುತ್ತ ಇರಿತದ ಗಾಯಗಳು ಕಂಡು ಬಂದಿವೆ ಎಂದು ನ್ಯಾಯಾಂಗ ಅಧಿಕಾರಿ ಹುಸೇನ್ ಫಝೇಲಿ ಹೇಳಿದ್ದಾರೆ.
ಇರಾನ್ ರಾಜಧಾನಿ ಟೆಹ್ರಾನ್ ನ ಪಶ್ಚಿಮದಿಂದ 30 ಕಿಮೀ (19 ಮೈಲಿ) ದೂರವಿರುವ ಉಪ ಪಟ್ಟಣದಲ್ಲಿರುವ ಮೆಹ್ರ್ ಜುಯಿ ಅವರ ನಿವಾಸಕ್ಕೆ ಶನಿವಾರ ರಾತ್ರಿ ಅವರ ಪುತ್ರಿ ಮೋನಾ ಮೆಹ್ರ್ ಜುಯಿ ಭೇಟಿ ನೀಡಿದಾಗ ತನ್ನ ತಂದೆ-ತಾಯಿಯ ಮೃತದೇಹಗಳನ್ನು ಕಂಡಿದ್ದಾರೆ ಎಂದು ಫಝೇಲಿ ತಿಳಿಸಿದ್ದಾರೆ.
ವರದಿಗಳ ಪ್ರಕಾರ, ತನಿಖಾ ಸಂಸ್ಥೆಗಳು ಘಟನೆಯ ಕುರಿತು ತನಿಖೆಯನ್ನು ಕೈಗೆತ್ತಿಕೊಂಡಿದೆ. ಕೆಲವು ವಾರಗಳ ಹಿಂದಷ್ಟೆ ಮೆಹ್ರ್ ಜುಯಿ ಅವರ ಪತ್ನಿಯು ತನಗೆ ಬೆದರಿಕೆ ಇರುವುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಅಳುಕು ತೋಡಿಕೊಂಡಿದ್ದರು.
ಘಟನೆಯ ಕುರಿತು ಖ್ಯಾತ ಇರಾನಿ ನಟ ಹೌಮನ್ ಸೈಯ್ಯದಿ ಆಘಾತ ವ್ಯಕ್ತಪಡಿಸಿದ್ದಾರೆ.
ಮೆಹ್ರ್ ಜುಯಿ (83) ಅವರು 1970ರ ದಶಕದಲ್ಲಿ ನೈಜ ಕತೆಗಳನ್ನು ಕೇಂದ್ರೀಕರಿಸಿದ ಹೊಸ ಅಲೆಯ ಚಿತ್ರಗಳ ನಿರ್ಮಾಣದ ಸಹ ಸಂಸ್ಥಾಪಕ ಆಗಿದ್ದರು. 1988ರಲ್ಲಿನ ಚಿಕಾಗೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಹಾಗೂ 1993ರಲ್ಲಿನ ಸ್ಯಾನ್ ಸೆಬಾಸ್ಟಿಯನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗೋಲ್ಡನ್ ಸೀಶೆಲ್ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದರು.







