"ಗ್ರಾಮೀಣ ಕರ್ನಾಟಕದಲ್ಲಿ ಜಾತಿ ತಾರತಮ್ಯ ಇನ್ನೂ ಜೀವಂತ, ದೇವಾಲಯ ಪ್ರವೇಶಕ್ಕೂ ನಿರ್ಬಂಧ": ʼಪಂಚಾಯತ್ʼ ಖ್ಯಾತಿಯ ನಟ ವಿನೋದ್ ಸೂರ್ಯವಂಶಿ

ವಿನೋದ್ ಸೂರ್ಯವಂಶಿ (Photo source: instagram)
ಬೆಂಗಳೂರು: ಜನಪ್ರಿಯ ವೆಬ್ ಸರಣಿ Panchayat ಮೂಲಕ ಗಮನಸೆಳೆದ ನಟ ವಿನೋದ್ ಸೂರ್ಯವಂಶಿ, ತಮ್ಮ ಹುಟ್ಟೂರು ಕರ್ನಾಟಕದ ಗ್ರಾಮದಲ್ಲಿ ಅನುಭವಿಸಿದ ಜಾತಿ ಆಧಾರಿತ ತಾರತಮ್ಯದ ಘಟನೆಗಳನ್ನು ಬಹಿರಂಗಪಡಿಸಿದ್ದಾರೆ.
ಸಿದ್ಧಾರ್ಥ್ ಕಣ್ಣನ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, “ನಮ್ಮ ಗ್ರಾಮದಲ್ಲಿ ಇಂದಿಗೂ ಜಾತಿಯ ವಿಭಜನೆ ಸ್ಪಷ್ಟವಾಗಿ ಕಂಡುಬರುತ್ತದೆ. ಮೇಲ್ಜಾತಿ ಮತ್ತು ಕೆಳಜಾತಿ ಎಂದು ಪ್ರತ್ಯೇಕ ಪ್ರದೇಶಗಳಿವೆ. ದಲಿತರು ವಾಸಿಸುವ ಪ್ರದೇಶವನ್ನು ಹಳ್ಳಿಯಿಂದ ದೂರವಾಗಿ ಇರಿಸಲಾಗಿದೆ. ನಾನು 12 ವರ್ಷದವನಾಗಿದ್ದಾಗ ತಂದೆಯೊಂದಿಗೆ ಹಳ್ಳಿಗೆ ಹೋದಾಗ, ಹೋಟೆಲ್ ನಲ್ಲಿ ಊಟ ಮಾಡಿದ ಬಳಿಕ ನಮ್ಮ ತಟ್ಟೆಗಳನ್ನು ನಾವೇ ತೊಳೆಯಬೇಕಾಗುತ್ತಿತ್ತು. ಜೊತೆಗೆ ಆಹಾರಕ್ಕೂ ಹಣ ನೀಡಬೇಕಾಗುತ್ತಿತ್ತು. ನಮ್ಮ ಗ್ರಾಮದಲ್ಲಿ ನಮಗೆ ಪ್ರವೇಶವಿಲ್ಲದ ದೇವಾಲಯ ಇಂದಿಗೂ ಇದೆ,” ಎಂದು ಹೇಳಿದರು.
ತಮ್ಮ ಮೈಬಣ್ಣ ಮತ್ತು ರೂಪದ ಕಾರಣದಿಂದ ಎದುರಿಸಿದ ತಿರಸ್ಕಾರಗಳನ್ನೂ ಅವರು ವಿವರಿಸಿದರು. “ಟಿವಿ ಆಡಿಷನ್ಗಳಲ್ಲಿ ‘ಪಾಶ್ ಲುಕ್’ ಇರುವವರನ್ನೇ ಆಯ್ಕೆ ಮಾಡಲಾಗುತ್ತಿತ್ತು. ಭಿಕ್ಷುಕನ ಪಾತ್ರಕ್ಕೂ ಸಹ ಅದೇ ರೀತಿಯ ಲುಕ್ ಬಯಸುತ್ತಿದ್ದರು. ನಾನು ಸೂಕ್ತನಲ್ಲ ಎಂದು ಹೇಳುತ್ತಿದ್ದರು. ಒಂದು ಬಾರಿ ಮನೆ ಸಹಾಯನ ಪಾತ್ರಕ್ಕೆ ಆಯ್ಕೆಯಾಗಿದ್ದೆ. ಚಿತ್ರೀಕರಣಕ್ಕೂ ಹಾಜರಾಗಿ ಸಿದ್ಧನಾಗಿದ್ದೆ. ಆದರೆ ನಿರ್ದೇಶಕಿ ‘ಇವನು ಕಪ್ಪು ಮೈಬಣ್ಣದವನು, ನಮಗೆ ಬೇಡ’ ಎಂದು ಹೇಳಿ ನನ್ನನ್ನು ತಿರಸ್ಕರಿಸಿದರು,” ಎಂದು ಹೇಳಿದರು.
ಬಾಲ್ಯದ ಅನುಭವಗಳನ್ನು ನೆನಪಿಸಿಕೊಂಡ ಅವರು, “ನನ್ನ ತಾಯಿ ಮನೆಗೆಲಸವರಾಗಿ ಕೆಲಸ ಮಾಡುತ್ತಿದ್ದರು, ತಂದೆ ಮೇಸ್ತ್ರಿಯಾಗಿದ್ದರು. ಅವರಿಗೆ ಪ್ರತಿದಿನ ಕೆಲಸ ಸಿಗುತ್ತಿರಲಿಲ್ಲ. ಕೆಲಸ ಸಿಗದಿದ್ದಾಗ ಮದ್ಯಪಾನ ಮಾಡಿ ಮನೆಗೆ ಬರುತ್ತಿದ್ದರು. ಮನೆಯಲ್ಲಿನ ವಾತಾವರಣ ಅಶಾಂತವಾಗಿತ್ತು. ಅವರು ತಾಯಿಯನ್ನು ನಿಂದಿಸಿ ಹೊಡೆಯುತ್ತಿದ್ದರು. ನಾನು ಇದನ್ನೆಲ್ಲಾ ನೋಡುತ್ತಾ ಬೆಳೆದಿದ್ದೇನೆ. ಅದು ಭಯಾನಕ ಅನುಭವ. ಅವರನ್ನು ದ್ವೇಷಿಸಲಿಲ್ಲ, ಆದರೆ ಅವರ ವರ್ತನೆ ನನಗೆ ಇಷ್ಟವಾಗಲಿಲ್ಲ,” ಎಂದು ಆ ನೆನಪುಗಳನ್ನು ಹಂಚಿಕೊಂಡರು.
ಹಬ್ಬಗಳ ಬಗ್ಗೆ ಮಾತನಾಡಿದ ಅವರು, ಹಬ್ಬಗಳ ಬಗ್ಗೆ ಆಚರಿಸಲು ಯಾವುದೇ ವಿಶೇಷ ಕಾರಣಗಳಿರಲಿಲ್ಲದ ಕಾರಣ ಹಬ್ಬಗಳತ್ತ ಆಸಕ್ತಿ ಇರಲಿಲ್ಲ ಎಂದು ಹೇಳಿದರು.
‘Panchayat’ ಸರಣಿಯು ಒಟಿಟಿ ವೇದಿಕೆಗಳಲ್ಲಿ ಜನಪ್ರಿಯತೆ ಗಳಿಸಿದ್ದು, ಜಿತೇಂದ್ರ ಕುಮಾರ್, ನೀನಾ ಗುಪ್ತಾ ಹಾಗೂ ರಘುಬೀರ್ ಯಾದವ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.






