‘ಹೇರಾ ಫೇರಿ 3’ ಚಿತ್ರದಿಂದ ನಿರ್ಗಮಿಸಿದ್ದಕ್ಕೆ ಮೊಕದ್ದಮೆ; ನನ್ನ ವಕೀಲರು ಸೂಕ್ತ ಪ್ರತಿಕ್ರಿಯೆ ನೀಡಿದ್ದಾರೆ ಎಂದ ನಟ ಪರೇಶ್ ರಾವಲ್

Credit: Prime Video
ಮುಂಬೈ: 2000ರ ಬ್ಲಾಕ್ ಬಸ್ಟರ್ ಹಿಟ್ ಚಲನಚಿತ್ರವಾದ ‘ಹೇರಾ ಫೇರಿ’ಯ ಮೂರನೆ ಭಾಗವಾದ ‘ಹೇರಾ ಫೇರಿ 3’ ಚಿತ್ರದಿಂದ ದಿಢೀರನೆ ನಿರ್ಗಮಿಸಿದ್ದಕ್ಕಾಗಿ ತಮ್ಮ ಸಹ ನಟ ಹಾಗೂ ಚಿತ್ರದ ಸಹ ನಿರ್ಮಾಪಕರಾದ ಅಕ್ಷಯ್ ಕುಮಾರ್ ರಿಂದ ಕಾನೂನು ಮೊಕದ್ದಮೆ ಎದುರಿಸುತ್ತಿರುವ ನಟ ಪರೇಶ್ ರಾವಲ್, ಕೊನೆಗೂ ಈ ವಿಷಯದ ಕುರಿತು ತಮ್ಮ ಮೌನ ಮುರಿದಿದ್ದಾರೆ.
ಈ ಕುರಿತು ರವಿವಾರ ಬೆಳಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪರೇಶ್ ರಾವಲ್, “ಕರಾರನ್ನು ರದ್ದುಗೊಳಿಸುವ ನನ್ನ ಕಾನೂನುಬದ್ಧ ಹಕ್ಕು ಹಾಗೂ ನಿರ್ಗಮನಕ್ಕೆ ಸಂಬಂಧಿಸಿದಂತೆ ನನ್ನ ವಕೀಲರಾದ ಅಮೀತ್ ನಾಯಕ್ ಸೂಕ್ತ ಪ್ರತಿಕ್ರಿಯೆಯನ್ನು ರವಾನಿಸಿದ್ದಾರೆ. ಒಮ್ಮೆ ಅವರು ನನ್ನ ಪ್ರತಿಕ್ರಿಯೆಯನ್ನು ಓದಿದ ನಂತರ, ಎಲ್ಲ ಸಮಸ್ಯೆಗಳೂ ತಣ್ಣಗಾಗಲಿವೆ” ಎಂದು ಬರೆದುಕೊಂಡಿದ್ದಾರೆ.
ಇದಕ್ಕೂ ಮುನ್ನ, ಶುಕ್ರವಾರದಂದು ಅಕ್ಷಯ್ ಕುಮಾರ್ ಪರ ವಕೀಲರು ಪರೇಶ್ ರಾವಲ್ ವಿರುದ್ಧ ಕಾನೂನು ಪ್ರಕ್ರಿಯೆಗೆ ಚಾಲನೆ ನೀಡಿದ್ದರು. ಈ ಕುರಿತು PTI ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ್ದ ಪರಿಣಾಮ್ ಲಾ ಅಸೋಸಿಯೇಟ್ ಸಂಸ್ಥೆಯ ಜಂಟಿ ವ್ಯವಸ್ಥಾಪಕ ಪಾಲುದಾರೆ ಪೂಜಾ ಟಿಡ್ಕೆ, “ಬಹುಶಃ ಗಂಭೀರ ಕಾನೂನಾತ್ಮಕ ಪರಿಣಾಮಗಳು ಎದುರಾಗಬಹುದು ಎಂದು ನನಗನ್ನಿಸುತ್ತಿದೆ. ಇದರಿಂದ ಖಂಡಿತ ನಿರ್ಮಾಣ ಸಂಸ್ಥೆಗೆ ಹಾನಿಯಾಗಲಿದೆ. ಈ ವಿಚಾರವು ಸಾಕಷ್ಟು ಕಾನೂನು ಪರಿಣಾಮಗಳನ್ನು ಒಳಗೊಂಡಿದೆ ಎಂಬುದನ್ನು ನಾವು ಅವರಿಗೆ ನಮ್ಮ ನೋಟಿಸ್ ನಲ್ಲಿ ಮನವರಿಕೆ ಮಾಡಿದ್ದೇವೆ. ತಾರಾಗಣ, ಚಿತ್ರ ನಿರ್ಮಾಣದ ಸಿಬ್ಬಂದಿಗಳು, ಪ್ರಮುಖ ಹಿರಿಯ ಕಲಾವಿದರು, ಸರಕು ಸಾಗಣೆ ಸಾಧನಗಳು ಹಾಗೂ ಟ್ರೇಲರ್ ಚಿತ್ರೀಕರಣಕ್ಕಾಗಿ ಮಾಡಿರುವ ವೆಚ್ಚವು ಈ ವಿಚಾರದಲ್ಲಿ ಅಡಗಿದೆ” ಎಂದು ಹೇಳಿದ್ದಾರೆ.
“ಜನವರಿಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟೊಂದನ್ನು ಮಾಡುವ ಮೂಲಕ, ನಾನು ಈ ಚಿತ್ರದ ಯೋಜನೆಯ ಭಾಗವಾಗಿದ್ದೇನೆ ಎಂದು ನಟ ಪರೇಶ್ ರಾವಲ್ ಸ್ಪಷ್ಟವಾಗಿ ಹೇಳಿಕೊಂಡಿದ್ದರು. ಇದಾದ ನಂತರ, ಚಿತ್ರದ ಟ್ರೇಲರ್ ಚಿತ್ರೀಕರಣಕ್ಕಾಗಿ ಅವರೊಂದಿಗೆ ಕರಾರನ್ನೂ ಮಾಡಿಕೊಳ್ಳಲಾಗಿತ್ತು. ಈ ವೇಳೆ ಚಲನಚಿತ್ರದ ಸುಮಾರು ಮೂರೂವರೆ ನಿಮಿಷಗಳಷ್ಟು ದೃಶ್ಯವವನ್ನೇ ಟ್ರೇಲರ್ ಗಾಗಿ ಚಿತ್ರೀಕರಿಸಿಕೊಳ್ಳಲಾಗಿತ್ತು. ಆದರೆ, ಕೆಲ ದಿನಗಳ ಹಿಂದೆ ದಿಢೀರನೆ ನಮಗೆ ನೋಟಿಸ್ ರವಾನಿಸಿದ್ದ ಪರೇಶ್ ರಾವಲ್, ನಾನು ಇನ್ನು ಮುಂದೆ ನಾನು ಈ ಚಿತ್ರದ ಭಾಗವಾಗಿಲ್ಲ ಹಾಗೂ ಭಾಗವಾಗಲೂ ಬಯಸುವುದಿಲ್ಲ ಎಂದು ತಿಳಿಸಿದ್ದರು. ಹೀಗಾಗಿ, ಖಂಡಿತವಾಗಿಯೂ ಇದರಿಂದ ಎಲ್ಲರಿಗೂ ಆಘಾತ ಮತ್ತು ಅಚ್ಚರಿಯುಂಟಾಗಿದೆ” ಎಂದು ಅವರು ತಿಳಿಸಿದ್ದಾರೆ.