' ಹೇರಾ ಫೇರಿ 3ʼ ಚಲನಚಿತ್ರಕ್ಕೆ ಮರಳುವುದಾಗಿ ಘೋಷಿಸಿದ ಪರೇಶ್ ರಾವಲ್

PC: Instagram
ಹೊಸದಿಲ್ಲಿ: ಹೇರಾ ಫೇರಿ ಚಲನಚಿತ್ರದ ಮೂರನೆ ಭಾಗವಾದ ‘ಹೇರಾ ಫೇರಿ 3’ ಚಿತ್ರಕ್ಕೆ ಮರಳುವುದಾಗಿ ಹಿರಿಯ ನಟ ಪರೇಶ್ ರಾವಲ್ ಹೇಳಿದ್ದಾರೆ.
ಹೇರಾ ಫೇರಿ ಮೂರನೇ ಭಾಗದಿಂದ ಹೊರಗುಳಿಯುವುದಾಗಿ ಕಳೆದ ಮೇ ತಿಂಗಳಲ್ಲಿ ಪರೇಶ್ ರಾವಲ್ ಘೋಷಿಸಿದ್ದರು. ಇದು ಹೇರಾ ಫೇರಿ ಚಲನ ಚಿತ್ರದ ಅಭಿಮಾನಿಗಳಲ್ಲಿ ಆಘಾತವನ್ನುಂಟುಮಾಡಿತ್ತು.
ಹೇರಾ ಫೇರಿ ಚಿತ್ರದಲ್ಲಿ ಬಾಬುರಾವ್ ಗಣಪತ್ರಾವ್ ಅಪ್ಟೆ ಪಾತ್ರದಿಂದಾಗಿ ರಾವಲ್ ಸಾಕಷ್ಟು ಜನಪ್ರಿಯರಾಗಿದ್ದರು. ಇದೀಗ ಎಲ್ಲವೂ ಸರಿಯಾಗಿದೆ. ಮೂವರು ಮತ್ತೆ ಒಂದಾಗುತ್ತಿರುವುದಾಗಿ ಅಭಿಮಾನಿಗಳಿಗೆ ಪರೇಶ್ ರಾವಲ್ ಭರವಸೆ ನೀಡಿದ್ದಾರೆ.
ಹಿಮಾಂಶು ಮೆಹ್ತಾ ಅವರೊಂದಿಗಿನ ಪಾಡ್ಕಾಸ್ಟ್ ಸಂದರ್ಶನದಲ್ಲಿ ಮಾತನಾಡಿದ ಪರೇಶ್ ರಾವಲ್, ʼಈಗ ಯಾವುದೇ ವಿವಾದವಿಲ್ಲ. ಜನರು ಏನನ್ನಾದರೂ ತುಂಬಾ ಪ್ರೀತಿಸಿದಾಗ, ನೀವು ಹೆಚ್ಚು ಜಾಗರೂಕರಾಗಿರಬೇಕು ಎಂದು ನಾನು ನಂಬುತ್ತೇನೆ. ಪ್ರೇಕ್ಷಕರ ವಿಷಯದಲ್ಲಿ ಅದು ನಮ್ಮ ಜವಾಬ್ದಾರಿ. ಪ್ರೇಕ್ಷಕರು ನಿಮಗೆ ತುಂಬಾ ಮೆಚ್ಚುಗೆಯನ್ನು ನೀಡಿದ್ದಾರೆ. ನೀವು ಅವುಗಳನ್ನು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಕಷ್ಟಪಟ್ಟು ಕೆಲಸ ಮಾಡಿ ಮತ್ತು ಅದನ್ನು ಪ್ರೇಕ್ಷಕರಿಗೆ ತಲುಪಿಸಿʼ ಎಂದು ಹೇಳಿದರು.
ಪ್ರಿಯದರ್ಶನ್ ನಿರ್ದೇಶನದ 'ಹೇರಾ ಫೇರಿ' ಚಿತ್ರ 2000ರಲ್ಲಿ ಬಿಡುಗಡೆಯಾಗಿತ್ತು. ಇದರ ಮುಂದುವರಿದ ಭಾಗ ನೀರಜ್ ವೋರಾ ನಿರ್ದೇಶನದ 'ಫಿರ್ ಹೇರಾ ಫೇರಿ' 2006ರಲ್ಲಿ ಬಿಡುಗಡೆಯಾಯಿತು. ಎರಡನೇ ಭಾಗ ಕೂಡಾ ದೊಡ್ಡ ಹಿಟ್ ಆಗಿತ್ತು. ಮೂರನೇ ಭಾಗ ಸುಮಾರು 2 ದಶಕಗಳ ನಂತರ ಐಕಾನಿಕ್ ಪಾತ್ರಗಳಾದ ರಾಜು(ಅಕ್ಷಯ್), ಶ್ಯಾಮ್(ಸುನೀಲ್) ಮತ್ತು ಬಾಬುರಾವ್(ಪರೇಶ್) ಅವರನ್ನು ಮತ್ತೆ ಒಟ್ಟುಗೂಡಿಸುತ್ತಿದೆ.
ಪರೇಶ್ ರಾವಲ್ ಅವರು ಚಿತ್ರದಿಂದ ಹಠಾತ್ತನೆ ನಿರ್ಗಮಿಸಿದ ಬಳಿಕ ಅಕ್ಷಯ್ ಕುಮಾರ್ ಅವರ ನಿರ್ಮಾಣ ಕಂಪೆನಿ ಅವರ ವಿರುದ್ಧ 25 ಕೋಟಿ ರೂ.ಮೊಕದ್ದಮೆ ಹೂಡಿತ್ತು. ಪರೇಶ್ ಅವರ ಈ ನಡೆಯು ಆರ್ಥಿಕ ನಷ್ಟವನ್ನು ಉಂಟುಮಾಡಿದೆ ಮತ್ತು ನಿರ್ಮಾಣದ ವೇಳಾಪಟ್ಟಿಯನ್ನು ಅಡ್ಡಿಪಡಿಸಿದೆ ಎಂದು ನಿರ್ಮಾಣ ಕಂಪೆನಿ ಆರೋಪಿಸಿತ್ತು.