ʼಪರ್ವʼ: ಎಸ್.ಎಲ್. ಭೈರಪ್ಪ ಕೃತಿಗೆ ವಿವೇಕ್ ಅಗ್ನಿಹೋತ್ರಿ ನಿರ್ದೇಶನ

Photo: twitter/vivekagnihotri
ಬೆಂಗಳೂರು: ಸಾಹಿತಿ ಎಸ್.ಎಲ್. ಭೈರಪ್ಪ ಅವರು ಮಹಾಭಾರತದ ಆಧಾರದ ಮೇಲೆ ರಚಿಸಿರುವ ‘ಪರ್ವʼ ಕಾದಂಬರಿಯನ್ನು ತೆರೆಯ ಮೇಲೆ ತರಲು ವಿವಾದಾತ್ಮಕ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮುಂದಾಗಿದ್ದಾರೆ.
ಕಾದಂಬರಿಯ ಹೆಸರಿನಲ್ಲೇ ಚಿತ್ರ ಕೂಡಾ ಬಿಡುಗಡೆಯಾಗಲಿದ್ದು, ಶನಿವಾರ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ‘ಪರ್ವ’ ಸಿನಿಮಾದ ಟೈಟಲ್ ಲಾಂಚ್ ನಡೆದಿದೆ.
ಎಸ್ ಎಲ್ ಭೈರಪ್ಪ ಜೊತೆಗೆ ಚಿತ್ರತಂಡ ಪತ್ರಿಕಾಗೋಷ್ಠಿ ನಡೆಸಿ ಸಿನೆಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
‘ಪ್ರಕಾಶ್ ಬೆಳವಾಡಿ ಅವರು ನನಗೆ ಕರೆ ಮಾಡಿ, ಪರ್ವ ಕಾದಂಬರಿಯನ್ನು ಸಿನಿಮಾ ಮಾಡುವ ವಿಚಾರವಾಗಿ ಎಸ್.ಎಲ್. ಭೈರಪ್ಪ ಜೊತೆ ಮಾತನಾಡಿ ಎಂದು ಸೂಚಿಸಿದ್ದರು. ಅದಕ್ಕೂ ಮುನ್ನ ಮಂಗಳೂರಿನಲ್ಲಿ ಭೈರಪ್ಪ ಅವರನ್ನು ಭೇಟಿಯಾಗಿದ್ದೆ. ಅವರ ಆಲೋಚನೆಗಳಿಗೆ ನಾನು ಬೆರಗಾಗಿದ್ದೆ. ನನ್ನ ಚಿಂತನೆಗಳು ಕೂಡ ಅವರ ರೀತಿ ಇದೆ ಅನಿಸಿತು. ಅಲ್ಲಿಂದ ನಾನು ಅವರ ಜೊತೆ ಸಂಪರ್ಕ ಬೆಳೆಸಿಕೊಂಡೆʼ ಎಂದು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತಿಳಿಸಿದ್ದಾರೆ.
ಭೈರಪ್ಪ ಅವರು ಸಾಕಷ್ಟು ಅಧ್ಯಯನ ನಡೆಸಿ ಈ ಕೃತಿ ಬರೆದಿದ್ದಾರೆ. ನನ್ನ ಮೇಲೆ ಭರವಸೆ ಇಟ್ಟು ಈ ಸಿನಿಮಾವನ್ನು ನಿರ್ದೇಶಿಸುವ ಅವಕಾಶ ನೀಡಿದ್ದಕ್ಕೆ ನಾನು ಭೈರಪ್ಪ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಧರ್ಮದ ಬಗ್ಗೆ ಯಾರಿಗೆ ಯಾವುದೇ ಪ್ರಶ್ನೆ ಇದ್ದರೂ ಸಿನಿಮಾ ಉತ್ತರ ನೀಡುತ್ತದೆ ಎಂಬ ನಂಬಿಕೆ ನನಗಿದೆ. ಪರ್ವ ಸಿನಿಮಾ ಮೂರು ಭಾಗಗಳಲ್ಲಿ ಮೂಡಿಬರಲಿದೆ ಎಂದು ಅವರು ತಿಳಿಸಿದ್ದಾರೆ.
ʻʻಪರ್ವ ನಾಟಕವನ್ನು ಪ್ರಕಾಶ್ ಬೆಳವಾಡಿ ನಿರ್ದೇಶಿಸಿ, ನಟನೆ ಸಹ ಮಾಡಿದ್ದರು. ನಿರ್ದೇಶಕ ವಿವೇಕ್ ಮಾಡಿರುವ ಸಿನಿಮಾಗಳು ಸಕ್ಸಸ್ ಆಗಿವೆ. ಭಾರತಕ್ಕೆ ಮಾತ್ರ ಪರ್ವ ಸಿನಿಮಾ ಸೀಮಿತವಾಗಬಾರದು. ಆಂಗ್ಲ ಭಾಷೆಯಲ್ಲೂ ಸಿನಿಮಾವಾಗಿ ತೆರೆಗೆ ಬರಬೇಕು. ಪರ್ವ ಕಾದಂಬರಿಯನ್ನು ಈ ಮುಂಚೆ ಸಿನಿಮಾವಾಗಿ ಮಾಡುತ್ತೇವೆ ಎಂದು ಕೇಳುವ ಧೈರ್ಯ ಯಾರಿಗೂ ಇರಲಿಲ್ಲʼʼ ಎಂದು ಎಸ್ ಎಲ್ ಭೈರಪ್ಪ ಹೇಳಿದರು.







