ದೊಡ್ಡ ಸ್ಟಾರ್ಗಳ ಪೈಪೋಟಿ ನಡುವೆಯೂ ಗೆದ್ದ ಪಾರ್ವತಿ ತಿರುವೋತು ನಟನೆಯ ‘ಪ್ರಥಮ ದೃಷ್ಟ್ಯಾ ಕುಟ್ಟಕ್ಕಾರ್’

Photo Credit : bookmyshow.com
ನಟಿ ಪಾರ್ವತಿ ತಿರುವೋತು ಪ್ರಮುಖ ಪಾತ್ರದಲ್ಲಿ ನಟಿಸಿರುವ ಶಹಾದ್ ನಿಲಂಬೂರ್ ನಿರ್ದೇಶನದ ‘ಪ್ರಥಮ ದೃಷ್ಟ್ಯಾ ಕುಟ್ಟಕ್ಕಾರ್’ ಎಂಬ ಮಲಯಾಳಂ ಕ್ರೈಮ್ ಥ್ರಿಲ್ಲರ್ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಏಳೇ ದಿನಗಳಲ್ಲಿ ಭರ್ಜರಿ 25 ಕೋಟಿ ರೂ. ಗಳಿಸಿದೆ.
ಈ ಸಿನಿಮಾ ಚಿತ್ರಮಂದಿರಕ್ಕೆ ಬಂದಾಗ ಮಾರುಕಟ್ಟೆಯಲ್ಲಿ ಈಗಾಗಲೇ ಎರಡು ದೊಡ್ಡ ಸಿನಿಮಾಗಳ ಪೈಪೋಟಿ ಇತ್ತು. ಅದಾಗಲೇ ಜಾಗತಿಕವಾಗಿ 300 ಕೋಟಿಗೂ ಅಧಿಕ ಗಳಿಸಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದ ಗಿರೀಶ್ ಎ.ಡಿ ಅವರ ‘ಬೆತ್ಲೆಹೆಮ್ ಕುಟುಂಬ ಯುನಿಟ್’ ಮತ್ತು ‘ಬೆತ್ಲೆಹೆಮ್ ಕುಟುಂಬ ಯುನಿಟ್ಗಿಂತ ಒಂದುವಾರ ಮೊದಲು ಬಿಡುಗಡೆಯಾಗಿದ್ದ ದುಲ್ಕರ್ ಸಲ್ಮಾನ್ ಅವರ ‘ಐ ಆಮ್ ಗೇಮ್’ ಸಿನಿಮಾಗಳ ನಡುವೆ ಸ್ಪರ್ಧೆಯಲ್ಲಿ ‘ಪ್ರಥಮ ದೃಷ್ಟ್ಯಾ ಕುಟ್ಟಕ್ಕಾರ್’ ಎದ್ದು ನಿಂತಿದೆ.
ದುಲ್ಕರ್ ಸಲ್ಮಾನ್ ಅಥವಾ ನಿವಿನ್ ಪೌಲಿ ಅವರಂತಹ ದೊಡ್ಡ ತಾರಾ ಮೌಲ್ಯವಿರುವ ಸಿನಿಮಾವಲ್ಲದೆ ಇದ್ದರೂ, ಪಾರ್ವತಿ ಅವರ ನಟನೆಯ ಮೇಲೆ ಸಿನಿಮಾ 25 ಕೋಟಿ ಗಳಿಕೆ ಮಾಡಿರುವುದು ಚಿತ್ರರಂಗದಲ್ಲಿ ದೊಡ್ಡ ಯಶಸ್ಸು ಎಂದು ಪರಿಗಣಿಸಲಾಗಿದೆ.
2025ರಲ್ಲಿ ತಮ್ಮ ಯಾವುದೇ ಸಿನಿಮಾಗಳು ಬಿಡುಗಡೆಯಾಗದಿರುವ ಕೊರತೆಯನ್ನು ಪಾರ್ವತಿ ನೀಗಿಸಿಕೊಂಡಿರುವುದು ಮಾತ್ರವಲ್ಲದೆ, ತಾವು ಆಯ್ಕೆ ಮಾಡಿಕೊಳ್ಳುವ ಚಿತ್ರಗಳ ಬಗ್ಗೆ ಪ್ರೇಕ್ಷಕರಿಗೆ ಇರುವ ನಂಬಿಕೆ ಮತ್ತು ಅಭಿಮಾನಿ ಬಳಗದ ಅಚಲ ಬೆಂಬಲವನ್ನೂ ಈ ಮೂಲಕ ಸಾಬೀತು ಮಾಡಿದ್ದಾರೆ.
“ವೃತ್ತಿ ಜೀವನದಾದ್ಯಂತ ಒಂದೇ ರೀತಿಯ ಯಶಸ್ಸನ್ನು ಬಯಸಿದ್ದೇನೆ. ಚಿತ್ರವೊಂದು ಹಿಟ್ ಆಗುವುದು ನನ್ನ ನಿಯಂತ್ರಣದಲ್ಲಿರುವ ವಿಷಯವಲ್ಲ. ಆದರೆ ಪ್ರತಿ ಬಾರಿಯೂ ನೂರರಷ್ಟು ಪ್ರಾಮಾಣಿಕ ಅಭಿನಯವನ್ನು ನೀಡುವುದು ನನ್ನ ಕೈಯಲ್ಲಿದೆ ಎಂದು ನಾನು ನಂಬುತ್ತೇನೆ. ಹೀಗಾಗಿ ಪಾರ್ವತಿ ನಟಿಸುವ ಚಿತ್ರವೆಂದರೆ ಅದರಲ್ಲಿ ಖಂಡಿತವಾಗಿಯೂ ಏನಾದರೂ ವಿಶೇಷವಿರುತ್ತದೆ ಎಂದು ಜನರು ಹೇಳುವುದೇ ನಿಜವಾದ ಯಶಸ್ಸಿನ ವ್ಯಾಖ್ಯಾನ” ಎಂದು ಅವರು ಮಾಧ್ಯಮದ ಜೊತೆಗಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಚಿತ್ರಮಂದಿರದಲ್ಲಿ ಕೇವಲ ಕತೆಯ ಬಲದಿಂದ ಬಾಯಿ ಮಾತಿನಿಂದಲೇ ಪ್ರಚಾರ ಪಡೆಯುತ್ತಿರುವ ಸಿನಿಮಾವು 7 ದಿನಗಳಲ್ಲಿ 25 ಕೋಟಿ ರೂ. ಗಳಿಕೆ ಮಾಡಿದೆ. ವಿದೇಶಿ ಮಾರುಕಟ್ಟೆಯಲ್ಲೂ ಬಿಡುಗಡೆಯಾಗುತ್ತಿದೆ. ಶಹಾದ್ ನಿರ್ದೇಶನದ ಸಿನಿಮಾದಲ್ಲಿ ದೊಡ್ಡ ತಾರಾ ಮೌಲ್ಯ ಇಲ್ಲದೆ ಇದ್ದರು ತನಿಖಾ ಕ್ರೈಮ್ ಥ್ರಿಲ್ಲರ್ ಕಥೆಯ ಬಲದಿಂದ ಗೆದ್ದಿದೆ. ಈ ಸಿನಿಮಾವನ್ನು ಸುಮಾರು 8ರಿಂದ 10 ಕೋಟಿ ರೂ. ಬಜೆಟ್ನಲ್ಲಿ ನಿರ್ಮಿಸಲಾಗಿದೆ ಎಂದು ವರದಿಯಾಗಿದೆ. ಹೀಗಾಗಿ ಒಂದೇ ವಾರದಲ್ಲಿ 25 ಕೋಟಿ ರೂ. ಗಳಿಕೆ ಮಾಡಿರುವುದು ಸೂಪರ್ ಹಿಟ್ ಎನಿಸಿಕೊಂಡಿದೆ.
ಪತಿಯ ಮರಣದ ನಂತರ ಅನುಕಂಪದ ಆಧಾರದ ಮೇಲೆ ಪೊಲೀಸ್ ಇಲಾಖೆಗೆ ಮಹಿಳಾ ಕಾನ್ಸ್ಟೇಬಲ್ ಆಗಿ ಸೇರುವ ಅಲೀನಾ ಅಬ್ರಹಾಂ (ಪಾರ್ವತಿ ತಿರುವೋತು) ಸುತ್ತ ಕತೆ ಸಾಗುತ್ತದೆ. ಕೊಟ್ಟಾಯಂ ಪೊಲೀಸ್ ಠಾಣೆಯಲ್ಲಿ ನಡೆಯುವ ಲಾಕಪ್ ಡೆತ್ ಪ್ರಕರಣದಲ್ಲಿ ನಾಲ್ವರು ಜೂನಿಯರ್ ಪೊಲೀಸ್ ಅಧಿಕಾರಿಗಳು ಸಿಲುಕುತ್ತಾರೆ. ಕೇವಲ ಮೇಲ್ಮೋಟದ ಸಾಕ್ಷ್ಯದಿಂದ ಯಾರು ಅಪರಾಧಿ ಎಂದು ತೀರ್ಮಾನಿಸಬಾರದು ಎಂಬುದನ್ನು ಈ ಸಸ್ಪೆನ್ಸ್ ಥ್ರಿಲ್ಲರ್ನಲ್ಲಿ ತೋರಿಸಲಾಗಿದೆ.
ತಾರಾಗಣದಲ್ಲಿ ‘ಕುಂಬಳಂಗಿ ನೈಟ್ಸ್’ ಖ್ಯಾತಿಯ ಯುವ ನಟ ಮ್ಯಾಥ್ಯೂ ಥಾಮಸ್ ಮತ್ತೊಂದು ಪ್ರಮುಖ ಪಾತ್ರದಲ್ಲಿದ್ದಾರೆ. ಉನ್ನಿಮಾಯ ಪ್ರಸಾದ್, ಸಿದ್ಧಾರ್ಥ್ ಭರತನ್ ವಿನಯ್ ಪೋರ್ಟ್, ವಿಜಯ ರಾಘವನ್ ಮೊದಲಾದವರು ನಟಿಸಿದ್ದಾರೆ. ಶಹಾದ್ ನಿಲಂಬೂರ್ ಸಿನಿಮಾವನ್ನು ನಿರ್ದೇಶಿಸಿದರೆ, ಮುಜೀಬ್ ಮಜೀದ್ ಸಂಗೀತ ನೀಡಿದ್ದಾರೆ.






