ಅಭಿಮಾನ, ಅನುಮಾನ ಮತ್ತು ಮುಸುಕಿನ ಕದನ

ಚಿತ್ರ: ಪೇಟ್ರಿಯಟ್
ನಿರ್ದೇಶನ: ಮಹೇಶ್ ನಾರಾಯಣ್
ನಿರ್ಮಾಣ: ಆ್ಯಂಟೊ ಜೋಸೆಫ್
ತಾರಾಗಣ: ಮಮ್ಮುಟ್ಟಿ, ಮೋಹನ್ ಲಾಲ್, ಕುಂಜಾಕೊ ಬೋಬನ್, ನಯನತಾರಾ ಮೊದಲಾದವರು.
ಕುತಂತ್ರಿ ರಾಜಕಾರಣಿಗಳ ಕೈಗೆ ಆಧುನಿಕ ತಂತ್ರಜ್ಞಾನ ಲಭಿಸಿದಾಗ ಖಂಡಿತವಾಗಿ ಅದರ ದುರ್ಬಳಕೆಯಾಗುತ್ತದೆ. ಆಗ ಅದರ ವಿರುದ್ಧದ ಹೋರಾಟಕ್ಕೆ ದೇಶಭಕ್ತಿ ಯಾವ ಮಟ್ಟದಲ್ಲಿರಬೇಕು ಎನ್ನುವುದನ್ನು ತೋರಿಸುವ ಚಿತ್ರವೇ ಪೇಟ್ರಿಯಟ್.
ನಳಿನಿ ರಾಮಕೃಷ್ಣನ್ ಕೇಂದ್ರ ಸರಕಾರದ ಮಾಜಿ ಸಚಿವೆ. ಆದರೆ ಈಗಿನ ಕೇಂದ್ರ ಸಚಿವ ತನ್ನ ವಿರುದ್ಧ ಪೆರಿಸ್ಕೋಪ್ ಎನ್ನುವ ತಂತ್ರಜ್ಞಾನ ಬಳಸಿ ಮಸಲತ್ತು ನಡೆಸಿರುವುದಾಗಿ ಸಂದೇಹಿಸುತ್ತಾರೆ. ಆಕೆಯ ಸಂದೇಹ ನಿಜ ಎನ್ನುವುದನ್ನು ಡಿಫೆನ್ಸ್ ರಿಸರ್ಚ್ ವಿಂಗ್‌ನ ಅಧಿಕಾರಿ ಡಾ. ಡ್ಯಾನಿಯಲ್ ಜೇಮ್ಸ್ ಸಾಬೀತು ಮಾಡುತ್ತಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವ ಮೊದಲೇ ಆ ಮಾಜಿ ಸಚಿವೆ ಅನಾರೋಗ್ಯದಿಂದ ಸಾವಿಗೀಡಾಗುತ್ತಾರೆ. ಆ ಸಾವಿನ ಕಾರಣವನ್ನು ಪರೀಕ್ಷಿಸುವ ಡಾ. ಡ್ಯಾನಿಯಲ್ ಜೇಮ್ಸ್ ವಾಸ್ತವ ಬಯಲುಗೊಳಿಸಲು ಹೋರಾಟ ಶುರು ಮಾಡುತ್ತಾರೆ. ಈ ಹೋರಾಟದಿಂದ ಅವರು ಏನೆಲ್ಲ ಅಪಾಯ ಎದುರಿಸುತ್ತಾರೆ? ಅವರ ಸಹಾಯಕ್ಕೆ ಯಾರೆಲ್ಲ ಹಸ್ತ ನೀಡುತ್ತಾರೆ? ಅಂತಿಮ ಗೆಲುವು ಯಾರದಾಗುತ್ತದೆ ಎನ್ನುವುದೇ ಚಿತ್ರದ ಪ್ರಮುಖ ಅಂಶ.
ದೇಶ ರಕ್ಷಣೆಗಾಗಿ ಎಂದು ಅಭಿವೃದ್ಧಿ ಪಡಿಸಿದ ತಂತ್ರಜ್ಞಾನವನ್ನು ವಿರೋಧ ಪಕ್ಷದ ಮೇಲೆಯೇ ಗೂಢಚರ್ಯೆ ಮಾಡಲು ಬಳಸಿದಂಥ ಘಟನೆ ನಮ್ಮಲ್ಲಿ ಈ ಹಿಂದೆಯೇ ನಡೆದಿದೆ. ‘ಪೆಗಾಸಸ್’ ಎನ್ನುವ ಹೆಸರಿನಲ್ಲಿ ನಡೆದ ಆ ಪ್ರಕರಣವನ್ನೇ ಈ ಚಿತ್ರದ ವಸ್ತುವಾಗಿ ಬಳಸಲಾಗಿದೆ. ಮಾತ್ರವಲ್ಲ ಎಳೆಯ ವಿದ್ಯಾರ್ಥಿನಿಯರ ಖಾಸಗಿ ಬದುಕು ಕೂಡ ಹೇಗೆ ದುರಂತಕ್ಕೆ ಈಡಾಗುತ್ತದೆ ಎನ್ನುವುದನ್ನು ಭಾವನಾತ್ಮಕವಾಗಿ ಚಿತ್ರಿಸಲಾಗಿದೆ.
ನೈಜ ಘಟನೆಗಳನ್ನು ಆಧಾರವಾಗಿಸಿ ಯಶಸ್ವಿ ಚಿತ್ರಗಳನ್ನು ನೀಡಿರುವ ನಿರ್ದೇಶಕ ಮಹೇಶ್ ನಾರಾಯಣ್ ಈ ಬಾರಿಯೂ ಅದರಲ್ಲಿ ಗೆದ್ದಿದ್ದಾರೆ. ಡಿಫೆನ್ಸ್ ರಿಸರ್ಚ್ ವಿಂಗ್ ಮತ್ತು ಕೇಂದ್ರ ಸಚಿವಾಲಯದ ವಾತಾವರಣವನ್ನು ನೈಜ ಎನ್ನುವ ಹಾಗೆ ಕಣ್ಣಮುಂದೆ ಕಟ್ಟಿಕೊಟ್ಟಿದ್ದಾರೆ.
ಡಾಕ್ಟರ್ ಡ್ಯಾನಿಯಲ್ ಜೇಮ್ಸ್ ಎನ್ನುವ ಡಿಫೆನ್ಸ್ ವಿಂಗ್ ಅಧಿಕಾರಿಯ ಪಾತ್ರವನ್ನು ಮಮ್ಮುಟ್ಟಿ ಚೆನ್ನಾಗಿ ನಿಭಾಯಿಸಿದ್ದಾರೆ. ಆ್ಯಕ್ಷನ್ ದೃಶ್ಯಗಳಲ್ಲಿಯೂ ಅಭಿಮಾನಿಗಳಿಗೆ ತೃಪ್ತಿ ನೀಡುವ ಅಭಿನಯ ನೀಡಿದ್ದಾರೆ. ಕೆಟ್ಟ ರಾಜಕಾರಣಿಗಳ ವಿರುದ್ಧ ಡ್ಯಾನಿಯಲ್ ನಡೆಸುವ ಹೋರಾಟದಲ್ಲಿ ಆಪ್ತಮಿತ್ರನಾಗಿ ನೆರವು ನೀಡುವವರು ಕರ್ನಲ್ ರಹೀಮ್ ನಾಯಕ್. ಈ ಪಾತ್ರದಲ್ಲಿ ಮೋಹನ್ ಲಾಲ್ ನಟಿಸಿದ್ದಾರೆ. ಮಮ್ಮುಟ್ಟಿ ಮತ್ತು ಮೋಹನ್ ಲಾಲ್ ಸುದೀರ್ಘ ಕಾಲ ಪರದೆ ಹಂಚಿಕೊಂಡು 18 ವರ್ಷಗಳೇ ಉರುಳಿವೆ. ಅದೇ ಕಾರಣದಿಂದಲೇ ಈ ಚಿತ್ರದ ಬಗ್ಗೆ ಇನ್ನಿಲ್ಲದ ನಿರೀಕ್ಷೆಗಳು ಅಭಿಮಾನಿಗಳಲ್ಲಿ ಮೂಡಿತ್ತು. ಆದರೆ ಅಂಥ ಕಮರ್ಷಿಯಲ್ ಸಿನೆಮಾದ ಬಿಲ್ಡಪ್ ನೀಡದಿದ್ದರೂ ಕಥೆಯಲ್ಲಿ ಇಬ್ಬರಿಗೂ ಉತ್ತಮ ಅವಕಾಶವನ್ನೇ ನೀಡಲಾಗಿದೆ. ಮಮ್ಮುಟ್ಟಿ, ಮೋಹನ್ ಲಾಲ್ ಸೇರಿದಂತೆ ಯಾವ ಪಾತ್ರದ ಇಂಟ್ರಡಕ್ಷನ್ ಸಂದರ್ಭದಲ್ಲಿಯೂ ವಿಶೇಷ ಬಿಲ್ಡಪ್ ನೀಡಲಾಗಿಲ್ಲ. ಮಾತ್ರವಲ್ಲ ಮೋಹನ್ ಲಾಲ್ ಆಗಮನವೇ ಮಧ್ಯಂತರದ ಬಳಿಕ. ಇಬ್ಬರನ್ನು ಕೂಡ ಅವರ ವಯಸ್ಸಿನ ಆಸುಪಾಸಲ್ಲೇ ಇರುವ ಹಿರಿಯರಾಗಿ ತೋರಿಸಲಾಗಿದೆ.
ಬಹುಶಃ ಇಂಥ ಒಂದಷ್ಟು ನಿರಾಶೆಗಳಿಂದಾಗಿ ಚಿತ್ರದ ಬಗ್ಗೆ ನೆಗೆಟಿವ್ ಅನಿಸಿಕೆಗಳನ್ನೇ ಹಬ್ಬಲಾಗುತ್ತಿದೆ. ಆದರೆ ಒಂದು ಗುಣಮಟ್ಟದ ಸಿನೆಮಾ ಇದು ಎನ್ನುವುದನ್ನು ಯಾವ ಕಾರಣದಿಂದಲೂ ಅಲ್ಲಗಳೆಯಲಾಗದು.
ಇಲ್ಲಿರುವುದು ಮಮ್ಮುಟ್ಟಿ, ಮೋಹನ್ ಲಾಲ್ ಅಷ್ಟೇ ಅಲ್ಲ, ಇದೊಂದು ಬಹುತಾರಾಗಣದ ಚಿತ್ರ. ಮಾಜಿ ಕೇಂದ್ರ ಸಚಿವೆ ನಳಿನಿಯಾಗಿ ರೇವತಿ ನಟಿಸಿದ್ದಾರೆ. ತಂತ್ರಜ್ಞಾನ ದುರ್ಬಳಕೆ ನಡೆಸುವ ಸಚಿವನಾಗಿ ಖ್ಯಾತ ಛಾಯಾಗ್ರಾಹಕ ಹಾಗೂ ನಟ ರಾಜೀವ್ ಮೆನನ್ ಅಭಿನಯಿಸಿದ್ದಾರೆ. ಡಿಫೆನ್ಸ್ ರಿಸರ್ಚ್ ವಿಂಗ್ ಚೀಫ್ ಆಗಿ ಕನ್ನಡಿಗ ಪ್ರಕಾಶ್ ಬೆಳವಾಡಿ ಕಾಣಿಸಿದ್ದಾರೆ. ಕನ್ನಡಿಗರ ಪಾಲಿಗೆ ಮತ್ತೊಂದು ಗುರುತಿಸುವಿಕೆ ಅಂದರೆ ಮಮ್ಮುಟ್ಟಿ, ಮೋಹನ್ ಲಾಲ್ ಮೊದಲಾದವರ ದೃಶ್ಯಗಳನ್ನು ಮಂಗಳೂರಿನಲ್ಲಿಯೂ ಚಿತ್ರೀಕರಿಸಿದಂತೆ ತೋರಿಸಲಾಗಿದೆ. ಮಾತ್ರವಲ್ಲ ಖುದ್ದು ಮಮ್ಮುಟ್ಟಿ ಒಂದಷ್ಟು ಕನ್ನಡ ಪದಗಳನ್ನೂ ಆಡುತ್ತಾರೆ. ಮೈಕಲ್ ದೇವಸ್ಸಿ ಪಾತ್ರದಲ್ಲಿ ಕುಂಜಾಕೋ ಬೋಬನ್ ವಿಭಿನ್ನವಾಗಿ ಕಾಣಿಸಿದ್ದಾರೆ. ಆದರೆ ಖಳ ಛಾಯೆಯಲ್ಲಿ ಫಹಾದ್ ಫಾಸಿಲ್ ಹೊಸದೇನೂ ತೋರಿಸಿಲ್ಲ. ಅದೇ ರೀತಿ ಮಮ್ಮುಟ್ಟಿಗೆ ಜೋಡಿ ಎನ್ನುವುದಷ್ಟೇ ನಯನ ತಾರಾ ಪಾತ್ರದ ಪ್ರಾಧಾನ್ಯತೆ.
ಚಿತ್ರದ ವಸ್ತು, ಸಂಗೀತ, ಹಿನ್ನೆಲೆ ಸಂಗೀತ, ಛಾಯಾಗ್ರಹಣ, ಚಿತ್ರಕಥೆಯಿಂದಾಗಿ ಪೇಟ್ರಿಯಟ್ ಶ್ರೇಷ್ಠ ಸ್ಥಾನ ಪಡೆಯುತ್ತದೆ. ಆದರೆ ಬಹುನಿರೀಕ್ಷಿತ ಮೋಹನ್ ಲಾಲ್ ಸಾಹಸ ದೃಶ್ಯಗಳಲ್ಲಿ ಸೃಜನಶೀಲತೆಯ ಕೊರತೆ ಕಾಣುತ್ತದೆ. ಚಿತ್ರದ ಮೂಲಕ ತೋರಿಕೆಯ ದೇಶಭಕ್ತಿಗಿಂತ ಕಾರ್ಯನಿರ್ವಹಣೆಯಲ್ಲಿನ ಕಷ್ಟ ಹೇಗಿರುತ್ತದೆ ಎಂದು ತೋರಿಸಲಾಗಿದೆ. ಬಾಯಿ ಮಾತಿನ ಆವೇಶಕ್ಕಿಂತ ಬದುಕಿನ ಬೃಹತ್ ಬಣ್ಣಗೇಡಿ ವ್ಯಕ್ತಿತ್ವಗಳನ್ನು ತಣ್ಣಗೆ ಪರಿಚಯಿಸುವ ಈ ಚಿತ್ರ ಒಂದು ರೀತಿಯಲ್ಲಿ ಅರಿವಿನ ಕಣಜವೇ ನಿಜ.






