‘ಪೆದ್ದಿ’ ಸಿನಿಮಾದಲ್ಲಿ ಲೈಂಗಿಕ ದೌರ್ಜನ್ಯ ಪ್ರಚೋದಿಸುವ ನಿರೂಪಣೆ: ಜಾಹ್ನವಿ ಕಪೂರ್

ನಟಿ ಜಾಹ್ನವಿ ಕಪೂರ್ (Photo: NDTV)
‘ಪೆದ್ದಿ’ ಸಿನಿಮಾದಲ್ಲಿ ಮಹಿಳೆಯರನ್ನು ಚಿತ್ರಿಸಿರುವ ರೀತಿಯನ್ನು ಪ್ರಶ್ನಿಸಲು ತಾನು ಇನ್ನಷ್ಟು ಗಟ್ಟಿಯಾಗಿ ಧ್ವನಿ ಎತ್ತಬೇಕಿತ್ತು ಎಂದು ನಟಿ ಜಾಹ್ನವಿ ಕಪೂರ್ ಒಪ್ಪಿಕೊಂಡಿದ್ದಾರೆ. ಸಿನಿಮಾದಲ್ಲಿ ಮಹಿಳೆಯರನ್ನು ಕೀಳಾಗಿ ಬಿಂಬಿಸಲಾಗಿತ್ತು ಮತ್ತು ಲೈಂಗಿಕ ದೌರ್ಜನ್ಯವನ್ನು ಪ್ರಚೋದಿಸುವಂತಹ ನಿರೂಪಣೆ ಇತ್ತು ಎಂದು ಅವರು ಹೇಳಿದ್ದಾರೆ.
‘ಕಾಫಿ ವಿತ್ ಕರಣ್’ ಕಾರ್ಯಕ್ರಮದ 9ನೇ ಸೀಸನ್ ನ ಇತ್ತೀಚಿನ ಸಂಚಿಕೆಯಲ್ಲಿ ಮಾತನಾಡಿದ 29 ವರ್ಷದ ನಟಿ, ಸಿನಿಮಾದಲ್ಲಿ ತಾವು ನಿರ್ವಹಿಸಿದ ‘ಅಚಿಯಮ್ಮ’ ಪಾತ್ರದ ಸುತ್ತ ಎದ್ದ ಟೀಕೆಗಳು ಮನಸ್ಸಿನ ಮೇಲೆ ಭಾರವಾದ ಪರಿಣಾಮ ಬೀರಿವೆ ಎಂದು ತಿಳಿಸಿದ್ದಾರೆ.
‘ಪೆದ್ದಿ’ ಸಿನಿಮಾದ ಚಿತ್ರೀಕರಣದ ಅನುಭವ ಮುಜುಗರ ಉಂಟುಮಾಡಿತ್ತು ಮತ್ತು ತಮ್ಮ ಘನತೆಗೆ ಧಕ್ಕೆ ತಂದಿತ್ತು ಎಂದು ಜಾಹ್ನವಿ ಹೇಳಿದ್ದಾರೆ. ಚಿತ್ರೀಕರಣದ ಉದ್ದಕ್ಕೂ ತಮಗೆ ಅಹಿತಕರ ಅನುಭವವಾಗಿತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ.
ಅಚಿಯಮ್ಮ ಪಾತ್ರವನ್ನು ವಸ್ತುವಿನಂತೆ ಬಿಂಬಿಸಿರುವುದು ಹಾಗೂ ಪಾತ್ರದ ಒಪ್ಪಿಗೆಯಿಲ್ಲದೆ ಮುತ್ತಿಡುವಂತಹ ದೃಶ್ಯಗಳು ವಿವಾದಕ್ಕೆ ಕಾರಣವಾಗಿದ್ದವು. ಈ ದೃಶ್ಯಗಳ ಬಗ್ಗೆ ಆನ್ ಲೈನ್ ನಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು. ಬುಚ್ಚಿ ಬಾಬು ಸನಾ ನಿರ್ದೇಶನದ ಸಿನಿಮಾದಲ್ಲಿ ರಾಮ್ ಚರಣ್ ಅವರೊಂದಿಗೆ ಜಾಹ್ನವಿ ಕಪೂರ್ ನಟಿಸಿದ್ದರು. ಸಿನಿಮಾ ಜೂನ್ 4ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.
ಚಿತ್ರದಲ್ಲಿ ಮಹಿಳೆಯರನ್ನು ಚಿತ್ರಿಸಿರುವ ರೀತಿ ಮತ್ತು ಪರದೆಯ ಮೇಲೆ ಲೈಂಗಿಕ ದೌರ್ಜನ್ಯವನ್ನು ತೋರಿಸಿರುವ ವಿಧಾನ ಕುರಿತು ವ್ಯಾಪಕ ಚರ್ಚೆ ನಡೆದ ಬಳಿಕ ನಿರ್ದೇಶಕ ಬುಚ್ಚಿ ಬಾಬು ಸನಾ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆಯಾಚಿಸಿದ್ದರು. ಪ್ರೇಕ್ಷಕರು ವ್ಯಕ್ತಪಡಿಸಿದ ಕಳವಳಗಳನ್ನೂ ಒಪ್ಪಿಕೊಂಡಿದ್ದರು.
ಕಾರ್ಯಕ್ರಮದ ಸಂಭಾಷಣೆ ವೇಳೆ ನಿರೂಪಕ ಕರಣ್ ಜೋಹರ್ ಅವರು, ‘ಪೆದ್ದಿ’ ಸಿನಿಮಾದಲ್ಲಿ ಮಹಿಳೆಯರನ್ನು ವಸ್ತುವಿನಂತೆ ಬಿಂಬಿಸಿರುವುದರ ಬಗ್ಗೆ ವ್ಯಕ್ತವಾದ ಟೀಕೆಗಳನ್ನು ಹೇಗೆ ಸ್ವೀಕರಿಸಿದ್ದೀರಿ ಮತ್ತು ಈ ವಿಚಾರದಲ್ಲಿ ನಿಮ್ಮ ನಿಲುವೇನು ಎಂದು ಜಾಹ್ನವಿ ಅವರನ್ನು ಪ್ರಶ್ನಿಸಿದರು.
“ಈ ವಿಚಾರದ ಬಗ್ಗೆ ಮಾತನಾಡಬೇಕೇ, ಬೇಡವೇ ಎಂಬ ಗೊಂದಲ ನನಗಿತ್ತು. ಆದರೆ, ಇಂತಹ ನಿರೂಪಣೆ ಸಮಾಜದ ಮೇಲೆ ಬೀರಬಹುದಾದ ಪರಿಣಾಮವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ನನಗೆ ಅನಿಸಿತು. ಈ ಸಿನಿಮಾಗಾಗಿ ಅನೇಕರು ಶ್ರಮಿಸಿದ್ದಾರೆ. ಹೀಗಾಗಿ, ಏನು ಹೇಳಬೇಕು ಎಂಬುದೇ ನನಗೆ ತಿಳಿಯುತ್ತಿರಲಿಲ್ಲ. ಇಂತಹ ಸಿನಿಮಾಗಳು ಸಮಾಜದ ಮೇಲೆ, ವಿಶೇಷವಾಗಿ ಮಹಿಳೆಯರ ಮೇಲೆ ಬೀರಬಹುದಾದ ಋಣಾತ್ಮಕ ಪರಿಣಾಮದ ಬಗ್ಗೆ ಯೋಚಿಸಿ ಮನಸ್ಸಿಗೆ ಬಹಳ ಹೊರೆಯಾಗಿದೆ. ಆ ಅವಮಾನವನ್ನು ನಾನು ಸದಾ ನನ್ನೊಂದಿಗೆ ಹೊತ್ತುಕೊಂಡಿರುತ್ತೇನೆ” ಎಂದು ಅವರು ಹೇಳಿದರು.
ಸಿನಿಮಾದಲ್ಲಿ ಮಹಿಳೆಯರನ್ನು ಚಿತ್ರಿಸಿರುವ ರೀತಿ ಸಮಸ್ಯಾತ್ಮಕವಾಗಿತ್ತು ಮತ್ತು ಅದು ಲೈಂಗಿಕ ದೌರ್ಜನ್ಯವನ್ನು ಪ್ರಚೋದಿಸುವಂತಿತ್ತು ಎಂದು ಜಾಹ್ನವಿ ಅಭಿಪ್ರಾಯಪಟ್ಟಿದ್ದಾರೆ. ಸಿನಿಮಾ ನಿರ್ಮಾಣದ ಹಂತದಲ್ಲಿ ಇನ್ನಷ್ಟು ಜಾಗರೂಕತೆ ವಹಿಸಬಹುದಿತ್ತು ಎಂದೂ ಹೇಳಿದ್ದಾರೆ.
“ನಾನು ಇನ್ನಷ್ಟು ಮಾಡಬಹುದಿತ್ತೇ? ಹೆಚ್ಚು ಜಾಗೃತಳಾಗಿ ಇರಬೇಕಿತ್ತೇ? ಖಂಡಿತವಾಗಿಯೂ ಹೌದು. ಏಕೆಂದರೆ, ಮಹಿಳೆಯರನ್ನು ಅತಿಯಾಗಿ ವಸ್ತುವಿನಂತೆ ಬಿಂಬಿಸಲಾಗಿತ್ತು. ಅದು ಲೈಂಗಿಕ ದೌರ್ಜನ್ಯವನ್ನು ಪ್ರಚೋದಿಸುವಂತಿತ್ತು. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಖಚಿತಪಡಿಸಿಕೊಳ್ಳಲು ಗಮನ ಹರಿಸುತ್ತೇನೆ. ಇನ್ನು ನಾನು ಮಾಡಬಹುದಾದದ್ದು ಅಷ್ಟೇ” ಎಂದು ಅವರು ಹೇಳಿದ್ದಾರೆ.
ಈ ವಿವಾದವು ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ತಾವು ತೆಗೆದುಕೊಂಡ ನಿರ್ಧಾರಗಳನ್ನು ಮರುಪರಿಶೀಲಿಸುವಂತೆ ಮಾಡಿದೆ ಎಂದು ಜಾಹ್ನವಿ ತಿಳಿಸಿದ್ದಾರೆ.
“ನಾನು ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತಪಡಿಸಬೇಕಾಗಿತ್ತು ಎಂದು ಯೋಚಿಸುತ್ತಾ ನನ್ನನ್ನೇ ತೀವ್ರವಾಗಿ ದೂಷಿಸಿಕೊಂಡಿದ್ದೇನೆ. ಹೀಗೆ ಹೇಳುವುದು ನನಗೆ ಇಷ್ಟವಿಲ್ಲ. ಏಕೆಂದರೆ, ಹಾಗೆ ಮಾಡಿದಾಗ ಜವಾಬ್ದಾರಿಯನ್ನು ಬೇರೆಯವರ ಮೇಲೆ ಹೊರಿಸಿದಂತಾಗುತ್ತದೆ. ವಾಸ್ತವದಲ್ಲಿ, ನಿರ್ದೇಶಕರು ಏನೇ ಹೇಳಿದರೂ, ನನಗೆ ಲಭ್ಯವಿದ್ದ ಮಾಹಿತಿಯ ಆಧಾರದ ಮೇಲೆ ಎಲ್ಲವನ್ನೂ ಸಾಧ್ಯವಾದಷ್ಟು ಕಡಿಮೆ ಸಮಸ್ಯೆ ಉಂಟಾಗುವ ರೀತಿಯಲ್ಲಿ ಹೇಗೆ ಮುಂದಿಡಬಹುದು ಎಂದು ಯೋಚಿಸಿದ್ದೆ” ಎಂದು ಅವರು ಹೇಳಿದ್ದಾರೆ.
ಸಿನಿಮಾ ರಂಗದಲ್ಲಿ ತಮಗಿರುವ ವಿಶೇಷ ಸ್ಥಾನಮಾನವನ್ನು ಒಪ್ಪಿಕೊಂಡಿರುವ ಜಾಹ್ನವಿ, ಮುಜುಗರ ಉಂಟುಮಾಡಿದ ನಿರ್ಧಾರಗಳನ್ನು ಪ್ರಶ್ನಿಸಲು ಆ ಸ್ಥಾನಮಾನವನ್ನು ಬಳಸಿಕೊಳ್ಳಬಹುದಿತ್ತು ಎಂದು ಹೇಳಿದ್ದಾರೆ.
ವಿವಾದಾತ್ಮಕ ದೃಶ್ಯಗಳನ್ನು ನೆನಪಿಸಿಕೊಂಡ ಅವರು, “ಒಂದು ರೀತಿಯಲ್ಲಿ, ಇದು ನನ್ನ ಘನತೆಗೆ ಧಕ್ಕೆ ತರುವಂತಹ ಅನುಭವವಾಗಿತ್ತು. ಚಿತ್ರೀಕರಣದ ಉದ್ದಕ್ಕೂ ಮುಜುಗರ ಉಂಟಾಗಿತ್ತು” ಎಂದು ತಿಳಿಸಿದ್ದಾರೆ.
ಈ ವಿವಾದದ ಕುರಿತು ಆನ್ಲೈನ್ ನಲ್ಲಿ ನಡೆದ ಚರ್ಚೆಗಳ ಬಗ್ಗೆ ಕೇಳಿದಾಗ, ಆ ಚರ್ಚೆಗಳು ನಡೆದಿರುವುದಕ್ಕೆ ಸಂತೋಷವಾಗಿದೆ ಎಂದು ಜಾಹ್ನವಿ ಉತ್ತರಿಸಿದ್ದಾರೆ.






