‘ರಕ್ಕಸಪುರದೊಳ್’ ಟ್ರೇಲರ್ ಬಿಡುಗಡೆ; ಪೊಲೀಸ್ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ

ರಕ್ಕಸಪುರದೊಳ್ | Photo Credit : imdb.com
ಗ್ರಾಮವೊಂದರಲ್ಲಿ ನಡೆಯುವ ನಿಗೂಢ ಘಟನೆಗಳನ್ನು ಪೊಲೀಸರು ಯಶಸ್ವಿಯಾಗಿ ಬಗೆಹರಿಸುವ ಕತೆ ಎಂದು ‘ರಕ್ಕಸಪುರದೊಳ್’ ಸಿನಿಮಾದ ಟ್ರೇಲರ್ ನೋಡಿದಾಗ ತಿಳಿದುಬರುತ್ತದೆ.
ಖ್ಯಾತ ನಿರ್ದೇಶಕ ರವಿ ಸಾರಂಗ ನಿರ್ದೇಶನದ ಮತ್ತು ನಟ ರಾಜ್ ಬಿ ಶೆಟ್ಟಿ ಅಭಿನಯದ ಸಿನಿಮಾ ‘ರಕ್ಕಸಪುರದೊಳ್’ ಸಿನಿಮಾದ ಟ್ರೇಲರ್ ಅನ್ನು ಇಂದು ಬಿಡುಗಡೆ ಮಾಡಲಾಗಿದೆ. ಇದು ಗ್ರಾಮವೊಂದರಲ್ಲಿ ನಡೆಯುವ ನಿಗೂಢ ಘಟನೆಗಳನ್ನು ಪೊಲೀಸರು ಯಶಸ್ವಿಯಾಗಿ ಬಗೆಹರಿಸುವ ಕತೆ ಎಂದು ಟ್ರೇಲರ್ ನೋಡಿದಾಗ ತಿಳಿದುಬರುತ್ತದೆ. ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಅವರು ಮೊತ್ತ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.
ರಕ್ಕಸಪುರದೊಳ್ ಟ್ರೇಲರ್ ನಲ್ಲಿ ಏನಿದೆ?
ರಾಜ್ ಬಿ ಶೆಟ್ಟಿ ‘ಸು ಫ್ರಂ ಸೊ’ ಯಶಸ್ವೀ ಸಿನಿಮಾ ನೀಡಿದ ನಂತರ ‘ಲ್ಯಾಂಡ್ ಲಾರ್ಡ್’ನಲ್ಲಿ ಅಭಿನಯಿಸಿ ಮೆಚ್ಚುಗೆ ಗಳಿಸಿದ್ದರು. ಇದೀಗ 2026 ಫೆಬ್ರವರಿ 06ರಂದು ಅವರ ಮತ್ತೊಂದು ಚಿತ್ರ ‘ರಕ್ಕಸಪುರದೊಳ್’ ಬಿಡುಗಡೆಯಾಗುತ್ತಿದೆ. ಮದ್ಯದ ಚಟದ ವಿರುದ್ಧ ಹೋರಾಟದಲ್ಲಿ ತೊಂದರೆಗೆ ಸಿಲುಕುವ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ನಟಿಸಿದ್ದಾರೆ. ಎರಡು ನಿಮಿಷ 36 ಸೆಕೆಂಡುಗಳಿರುವ ಟ್ರೇಲರ್ ಪಟ್ಟಣದ ಉಸ್ತುವಾಗಿ ವಹಿಸಿದ ಪೊಲೀಸ್ ಅಧಿಕಾರಿಯ ಪರಿಚಯದ ಜೊತೆಗೆ ಆರಂಭವಾಗುತ್ತದೆ. ಅಪರಾಧ ಅತಿ ಕಡಿಮೆ ಇರುವ ಪಟ್ಟಣದಲ್ಲಿ ಪ್ರಭಾವಿ ವ್ಯಕ್ತಿಯ ಮಗಳನ್ನು ಕೊಲೆ ಮಾಡಲಾಗುತ್ತದೆ. ಈ ಪ್ರಕರಣದ ನಿಗೂಢತೆ, ಅಲೌಕಿಕ ಶಕ್ತಿ ಸೇರಿದಂತೆ ಬಹು ದಿಕ್ಕುಗಳಲ್ಲಿ ತನಿಖೆ ಹೊರಳುತ್ತದೆ. ಹೀಗೆ ಗ್ರಾಮದೊಳಗೆ ಅಡಿಗಿರುವ ರಕ್ಕಸರನ್ನು ಬಹಿರಂಗಪಡಿಸುವ ಕತೆಯನ್ನು ಹೊಂದಿದೆ.
ಕುತೂಹಲ ಕೆರಳಿಸಿದ ರಕ್ಕಸಪುರದೊಳ್
ರಕ್ಕಸ ಎಂದರೆ ರಾಕ್ಷಸ ಎಂದರ್ಥ. ಪುರ ಎಂದರೆ ಊರು. ರಾಕ್ಷಸರೇ ಇರುವ ಊರು ಎಂಬುದು ‘ರಕ್ಕಸಪುರದೊಳ್’ ಸಿನಿಮಾ ಶೀರ್ಷಿಕೆಯ ಅರ್ಥ ಎಂಬ ವಿವರಣೆಯನ್ನು ಸಿನಿಮಾ ಮಹೂರ್ತದ ಸಂದಭರ್ಭದಲ್ಲಿ ರವಿ ಸಾರಂಗ ನೀಡಿದ್ದರು.
ಈಗಾಗಲೇ ಟೀಸರ್ ಮತ್ತು ‘ನೀನಾ, ನೀನಾ…’ ಹಾಡು ಜನಪ್ರಿಯವಾಗಿದೆ. ನಿರ್ದೇಶಕ ಜೋಗಿ ಪ್ರೇಮ್ ಹಾಡಿದ ‘ಸಿದ್ದಯ್ಯ ಸ್ವಾಮಿ ಬನ್ನಿ’ ಎನ್ನುವ ಹಾಡು ಬಿಡುಗಡೆಯಾಗಿದೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಈ ಹಾಡಿಗೆ ತೆರೆ ಮೇಲೆ ಅಭಿನಯಿಸಿದ್ದಾರೆ. ಅರ್ಜುನ್ ಜನ್ಯಾ ತೆರೆಮರೆಯಲ್ಲಿ ಸಂಗೀತ ನಿರ್ದೇಶನಗಳ ಮೂಲಕ ಚಿರಪರಿಚಿತರಾಗಿದ್ದರೂ, ತೆರೆ ಮೇಲೆ ಬಣ್ಣ ಹಚ್ಚಿರುವುದು ಅಪರೂಪ. ಈ ಹಾಡನ್ನು ಕ್ರಾಂತಿ ಕುಮಾರ್ ಬರೆದಿದ್ದಾರೆ. ಗ್ರಾಮಸ್ಥರು ತಮ್ಮ ತೊಂದರೆಗಳ ಪರಿಹಾರಕ್ಕಾಗಿ ಸಿದ್ದಯ್ಯ ಸ್ವಾಮಿ ಮೊರೆ ಹೋಗುವಾಗ ಈ ಸನ್ನಿವೇಶ ಬರುತ್ತದೆ. ಈ ಹಾಡಿನಲ್ಲಿ ರಾಜ್ ಬಿ ಶೆಟ್ಟಿ, ಗೌರವ್ ಶೆಟ್ಟಿ ಮತ್ತು ಗ್ರಾಮಸ್ಥರ ದೊಡ್ಡ ಗುಂಪೇ ಕಾಣಿಸಿಕೊಂಡಿದೆ.
ರವಿವರ್ಮ ನಿರ್ಮಾಣದ ಸಿನಿಮಾ
ನಿರ್ದೇಶಕ ಪ್ರೇಮ್ ಜೊತೆಗೆ ಕೆಲಸ ಮಾಡಿರುವ ಅನುಭವ ಹೊಂದಿರುವ ರವಿ ಸಾರಂಗ ‘ರಕ್ಕಸಪುರದೊಳ್’ ಸಿನಿಮಾ ನಿರ್ದೇಶಿಸಿದ್ದಾರೆ. ಕೊಳ್ಳೇಗಾಲದ ಸುತ್ತಮುತ್ತ ಸಿನಿಮಾ ಚಿತ್ರೀಕರಣ ನಡೆದಿದೆ. ರವಿವರ್ಮ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಾಹಸ ನಿರ್ದೇಶಕ ಡಾ ರವಿವರ್ಮ ಕನ್ನಡದ ಜೊತೆಗೆ ತೆಲುಗು, ತಮಿಳು ಮತ್ತು ಹಿಂದಿ ಚಿತ್ರದಲ್ಲೂ ಕೆಲಸ ಮಾಡಿದ್ದಾರೆ. ‘ರುಸ್ತುಂ’ ಸಿನಿಮಾದ ಮೂಲಕ ನಿರ್ದೇಶಕರಾಗಿದ್ದ ರವಿವರ್ಮ, ಇದೀಗ ‘ರಕ್ಕಸಪುರದೊಳ್’ ಸಿನಿಮಾದ ಮೂಲಕ ನಿರ್ಮಾಪಕರಾಗಿದ್ದಾರೆ.







