ರಾಮಾಯಣ ರೋಮಾಂಚನ..!

ಚಿತ್ರ: ರಾಮಾಯಣ
ಭಾಗ-1
ನಿರ್ದೇಶನ: ನಿತೇಶ್ ತಿವಾರಿ
ನಿರ್ಮಾಣ: ಯಶ್, ನಮಿತ್ ಮಲ್ಹೋತ್ರ ಮೊದಲಾದವರು.
ತಾರಾಗಣ: ರಣ್ಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಮೊದಲಾದವರು.
ರಾಮಾಯಣ ಅಂದರೆ ಆಸ್ತಿಕ ಹಿಂದೂಗಳ ಪಾಲಿಗೆ ರೋಮಾಂಚನ. ಆದರ್ಶ ಪುರುಷನೋರ್ವ ಸಂಕಷ್ಟಗಳನ್ನು ಮೆಟ್ಟಿನಿಲ್ಲುವ ಕಥೆ ಎನ್ನುವುದೇ ಇದಕ್ಕೆ ಕಾರಣ ಇರಬಹುದು. ಅದರೊಂದಿಗೆ ಇಬ್ಬರು ಸ್ಟಾರ್ ನಟರ ಮೇಲಿನ ಅಭಿಮಾನವೂ ಸೇರಿದೆ. ಅದರಲ್ಲೂ ಯಶ್ಗೆಂದೇ ಚಿತ್ರ ನೋಡುವವರಿಗೂ ಕೊರತೆ ಇಲ್ಲ. ಚಿತ್ರ ಯಾರ ಅಭಿಮಾನಕ್ಕೂ ನಿರಾಶೆ ಮಾಡಿಲ್ಲ.
ರಾವಣನಿಂದಲೇ ರಾಮಾಯಣದ ಕಥೆಯ ಆರಂಭ. ರಾವಣನ ಬಾಲ್ಯ, ತಾಯಿಯ ಕೋರಿಕೆ, ತಪಸ್ಸು, ಬ್ರಹ್ಮನಿಂದ ಪಡೆಯುವ ವರ ಎಲ್ಲವನ್ನೂ ಅದ್ಭುತವಾಗಿ ಕಟ್ಟಿಕೊಡಲಾಗಿದೆ. ಗುಲಾಮರಂತಿದ್ದವರ ಮಧ್ಯದಿಂದ, ತಾಯಿಯ ಕೋರಿಕೆ ಈಡೇರಿಸಲು ಹೊರಡುವ ರಾವಣನ ಪಾತ್ರ ಯಶ್ ಅಭಿಮಾನಿಗಳ ಪಾಲಿಗೆ ತಾಯಿಗಾಗಿ ಚಿನ್ನ ತರಲು ಹೊರಟ ರಾಕಿಭಾಯ್ ಪಾತ್ರಕ್ಕೆ ಕನೆಕ್ಟ್ ಮಾಡಿಸುತ್ತದೆ! ರಾಮಾಯಣದ ಈ ಅರ್ಧಕಥೆ ಅಂತ್ಯವಾಗುವ ಹೊತ್ತಿಗೆ ರಾಮನಷ್ಟೇ ಅವಕಾಶ ರಾವಣನ ಪಾತ್ರಕ್ಕೂ ದೊರಕಿದೆ.
ವಾಲ್ಮೀಕಿ ರಾಮಾಯಣ ಹಲವು ರೂಪದಲ್ಲಿ ಬದಲಾಗಿದ್ದನ್ನು ನೋಡಿದ್ದೇವೆ. ಇಲ್ಲಿ ಕೂಡ ನಿರ್ದೇಶಕರು ಪಾತ್ರಗಳಿಗೆ ಒಂದಷ್ಟು ಬದಲಾವಣೆ ತಂದು ಶ್ರೇಷ್ಠತೆ ಹೆಚ್ಚಿಸಿದ್ದಾರೆ. ಅಥವಾ ರಾಮ ಮತ್ತು ರಾವಣ ಇಬ್ಬರು ಕೂಡ ಅವರವರ ದೃಷ್ಟಿಯಲ್ಲಿ ಹೇಗೆ ಸರಿ ಎಂದು ತೋರಿಸಲು ಪ್ರಯತ್ನಿಸಿದ್ದಾರೆ. ಇಲ್ಲಿನ ರಾಮ ಶೂರ್ಪನಖಿಯ ಮೂಗು ಕತ್ತರಿಸಲು ಲಕ್ಷ್ಮಣನಿಗೆ ಹೇಳುವುದಿಲ್ಲ. ಹಾಗೆಯೇ ರಾವಣನಿಗೆ ರಾಮನನ್ನು ಲಂಕೆಗೆ ಕರೆಸಿ ಹೋರಾಡುವುದಷ್ಟೇ ಉದ್ದೇಶ ಆಗಿರುತ್ತದೆ. ಅದರ ಹೊರತು, ಸೀತೆಯ ಮೇಲಿನ ವ್ಯಾಮೋಹವನ್ನು ಎಲ್ಲೂ ತೋರಿಸಿಲ್ಲ.
ಅದೇ ರೀತಿ ಯುದ್ಧ ವಿದ್ಯೆ ಬಲ್ಲ ಸೀತೆಗೆ ಇಲ್ಲಿ ರಾಕ್ಷಸರೊಂದಿಗೆ ಹೊಡೆದಾಡುವ ಅವಕಾಶ ನೀಡಲಾಗಿದೆ.
ಮಾಯಾ ಜಿಂಕೆಯ ಮೇಲೆ ಸೀತೆಗೆ ಮೋಹ ಮೂಡಲು ಕೂಡ ಮಾರೀಚನ ಮಾಯೆಯೇ ಕಾರಣ ಎಂದು ತೋರಿಸಲಾಗಿದೆ. ಜಿಂಕೆ ವೇಷದಲ್ಲಿದ್ದ ಮಾರೀಚ ಸಾಯುವ ಮೊದಲು ರಾಮನ ಧ್ವನಿಯಲ್ಲಿ ಕೂಗುತ್ತಾನೆ. ಆಗ ಅದನ್ನು ಲಕ್ಷ್ಮಣ ನಂಬುವುದಿಲ್ಲ. ವಾಲ್ಮೀಕಿ ರಾಮಾಯಣದ ಪ್ರಕಾರ ರಾಮನನ್ನು ಅರಸಿ ಹೋಗದ ಲಕ್ಷ್ಮಣ, ಬಹುಶಃ ತನ್ನ ಮೇಲಿನ ಆಸೆಯಿಂದಲೇ ಹೀಗೆ ಮಾಡುತ್ತಿರಬಹುದು ಎನ್ನುವ ಆಪಾದನೆಯನ್ನು ಸೀತೆ ಮಾಡುತ್ತಾಳೆ. ಆಗ ನೊಂದ ಲಕ್ಷ್ಮಣ ಸೀತೆಯನ್ನು ಅಲ್ಲೇ ಬಿಟ್ಟು ತೆರಳುತ್ತಾನೆ. ಆದರೆ ಇಲ್ಲಿ ಅಂಥ ಮಾತುಗಳನ್ನು ಸೀತೆಯಿಂದ ಹೇಳಿಸಿಲ್ಲ. ಆಕೆಯೇ ರಾಮನನ್ನು ಹುಡುಕಿ ಹೋಗುತ್ತಾಳೆ ಎನ್ನುವ ಹಂತದಲ್ಲಿ ಲಕ್ಷ್ಮಣ, ಸೀತೆಯನ್ನು ಆ ಪರ್ಣ ಕುಟೀರದಲ್ಲೇ ಬಿಟ್ಟು ಹೊರಡುವ ಸಂದರ್ಭ ಸೃಷ್ಟಿಯಾಗುತ್ತದೆ. ಹೀಗಾಗಿ ಈ ಮೂರು ವ್ಯಕ್ತಿತ್ವಗಳು ಇನ್ನಷ್ಟು ಉತ್ತಮವಾಗಿ ಕಾಣಿಸುತ್ತದೆ.
ಸೀತೆ ಮತ್ತು ಲಕ್ಷ್ಮಣರ ಸಂಬಂಧ ಇಂದಿನ ಅತ್ತಿಗೆ ಮೈದುನರಂತೆ ಆತ್ಮೀಯರಾಗಿರುವುದನ್ನು ತೋರಿಸಲಾಗಿದೆ. ವಾಲ್ಮೀಕಿ ರಾಮಾಯಣದಲ್ಲಿ ಲಕ್ಷ್ಮಣ ತಾನು ಅತ್ತಿಗೆಯ ಪಾದಗಳನ್ನಷ್ಟೇ ನೋಡಿರುವ ಕಾರಣ, ಕಾಲುಂಗುರದ ಹೊರತು ಬೇರೇನೂ ಗುರುತಿಸಿಲ್ಲ ಎಂದು ಹೇಳುವಂಥ ಸಂದರ್ಭ ಇದೆ. ಆದರೆ ಇಲ್ಲಿ ಅತ್ತಿಗೆ ಮೈದುನರನ್ನು ಆಧುನಿಕ ರೀತಿಯ ಸ್ನೇಹದಲ್ಲಿ ತೋರಿಸಿದ್ದಾರೆ. ಲಕ್ಷ್ಮಣನ ಹಾಸ್ಯಮಯ ಮಾತುಗಳು ಇವೆ. ಈ ಗಂಭೀರವಾದ ಕಾವ್ಯದ ಮಧ್ಯೆ ತುಸು ಲಘುವಾಗಿಸಲು ಇಂಥ ಬದಲಾವಣೆ ಮಾಡಿರಬಹುದು.
ಇದು ರಾಮಾಯಣದ ಒಂದನೇ ಭಾಗ ಮಾತ್ರ. ಸಾಮಾನ್ಯವಾಗಿ ಇದರಲ್ಲಿ ರಾಮನ ಬಾಲಕಾಂಡವೇ ತುಂಬಿರಬಹುದು ಎನ್ನುವ ನಿರೀಕ್ಷೆ ಇತ್ತು. ಹಾಗೇನಿಲ್ಲ. ಕಥೆ ಸೀತಾಪಹರಣದ ತನಕ ಇದೆ. ಬಹುಶಃ ಎಲ್ಲರಿಗೂ ಗೊತ್ತಿರುವ ಕಥೆಯಾದ ಕಾರಣವೇ ನಿರ್ದೇಶಕರು ಹೆಚ್ಚು ವಿವರಣೆಗಳಿಲ್ಲದೆ ಘಟನೆಗಳನ್ನು ತುಣುಕುಗಳಂತೆ ವೇಗವಾಗಿ ತೋರಿಸಿದ್ದಾರೆ. ಹಾಗಾಗಿಯೇ ಚಿತ್ರದಲ್ಲಿ ಲಕ್ಷ್ಮಣ ಶೀಘ್ರಕೋಪಿ ಯಾಕೆ? ಸಾವಿನ ಸಂದರ್ಭದಲ್ಲಿ ಪುತ್ರನಿಂದ ದೂರಾಗಿದ್ದು ನನ್ನ ಕರ್ಮದ ಫಲ ಎಂದು ದಶರಥ ಹೇಳಲು ಕಾರಣವೇನು ಎನ್ನುವ ವಿವರಗಳು ಇಲ್ಲಿ ಸಿಗುವುದಿಲ್ಲ. ಅದಕ್ಕಾಗಿ ತುಸು ಪುರಾಣ ಅಭ್ಯಾಸ ಮಾಡಿ ಹೋದರೆ ಉತ್ತಮ.
ರಾಮನ ಪಾತ್ರ ರಣಬೀರ್ ಕಪೂರ್ಗೆ ಚೆನ್ನಾಗಿ ಒಪ್ಪುವುದು ಟ್ರೇಲರ್ನಲ್ಲೇ ಸಾಬೀತಾಗಿದೆ. ಅದನ್ನು ತಮ್ಮ ನಟನೆಯ ಮೂಲಕವೂ ಸಾಬೀತು ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಬಿಲ್ಲು ಬಾಣ ಹಿಡಿದು ನಿಲ್ಲುವ ರಾಮನ ಜನಪ್ರಿಯ ಭಂಗಿಗಳಿಗೆ ಜೀವಂತಿಕೆ ನೀಡುವ ದೃಶ್ಯಗಳು ಆಸ್ತಿಕ ಪ್ರೇಕ್ಷಕರಿಗೆ ರೋಮಾಂಚನ ತರಬಲ್ಲದು. ರಣಬೀರ್ ಮತ್ತೊಂದು ಪಾತ್ರವಾದ ಪರಶುರಾಮನಾಗಿ ತೀರ ವಿಭಿನ್ನವಾಗಿ ಕಾಣಿಸಿದ್ದಾರೆ. ಅದಕ್ಕೆ ತಂತ್ರಜ್ಞಾನ ಸಹಕಾರ ಕೂಡ ಅದ್ಭುತವಾಗಿ ದೊರಕಿದೆ.
ಸಾಯಿ ಪಲ್ಲವಿ ಸೀತೆಯ ಪಾತ್ರಕ್ಕೆ ಹೊಂದುವುದಿಲ್ಲ ಎಂದವರಿಗೂ ಚಿತ್ರ ನೋಡಿ ಹೊರಬರುವಾಗ ಸೀತೆಯಾಗಿ ಸಾಯಿ ಪಲ್ಲವಿಯೇ ಕಾಣಿಸುತ್ತಾರೆ. ಪಾತ್ರದೊಳಗೆ ಆ ಮಟ್ಟಿನ ತಾದ್ಮಾತ್ಯ ತೋರಿದ ಕೀರ್ತಿ ಸಾಯಿ ಪಲ್ಲವಿಗೆ ಸಲ್ಲುತ್ತದೆ.
ರಾವಣನಾಗಿ ಯಶ್ ಕಥಾ ನಾಯಕನಿಗೆ ಇರುವ ಪ್ರಾಧಾನ್ಯತೆ ಯನ್ನೇ ಪಡೆದುಕೊಂಡಿದ್ದಾರೆ. ಪಾತ್ರಕ್ಕೆ ಒಪ್ಪುವ ಮೈಕಟ್ಟು ಮಾತ್ರವಲ್ಲ ಕಣ್ಣಿನಲ್ಲೇ ರಾವಣನ ಮನದ ಭಾವಗಳನ್ನು ಹೊಮ್ಮಿಸಿದ್ದಾರೆ. ಅದರಲ್ಲೂ ನಿರ್ಧಾರವನ್ನು ತೀರ್ಮಾನಿಸುವಾಗ 10 ತಲೆಗಳಿಗೂ ವಿಭಿನ್ನವಾದ ದಶ ದೇಹ ನೀಡಿ ಅದರಿಂದ ಮಾತನಾಡಿಸಿರುವ ರೀತಿ, ಆ ಪಾತ್ರಗಳಿಗೆ ತಕ್ಕಂತೆ ಬದಲಾಗುವ ಕಂಠ ಎಲ್ಲವೂ ಅದ್ಭುತ. ಈ ದೃಶ್ಯದಲ್ಲಿನ ನಟನೆ ಮತ್ತು ಜಟಾಯು ಜತೆಗಿನ ಹೋರಾಟದ ದೃಶ್ಯ ವೈಭವ ಎರಡು ಕೂಡ ಯಶ್ ಪಾತ್ರವನ್ನು ಮೆಲ್ಮಟ್ಟಕ್ಕೆ ಎತ್ತಿ ಹಿಡಿಯುತ್ತಿವೆ.
ಜಟಾಯುವಿನ ಮುಖ ಪೂರ್ತಿ ಹಕ್ಕಿಯಂತೆ ಕಂಡರೂ ಆ ಮುಖದಲ್ಲಿ ಭಾವನೆಗಳನ್ನು ಸ್ಪಷ್ಟವಾಗಿ ತೋರ್ಪಡಿಸಿದ ತಂತ್ರಜ್ಞರಿಗೆ ಸಲ್ಯೂಟ್. ಅದೇ ರೀತಿ ದೇವರ ಪಾತ್ರಗಳನ್ನು ಭೂಮಿ ಮೇಲೆ ತೋರಿಸದೇಇಡೀ ಆಕಾಶಕ್ಕೆ, ಗ್ಯಾಲಕ್ಸಿಯಲ್ಲೇ ಮುಖವನ್ನು ತೋರಿಸಿರುವ ಕಲ್ಪನೆಗೊಂದು ನಮಸ್ಕಾರ. ಇಂಥ ದೃಶ್ಯಗಳೇ ತ್ರೀಡಿ ಕನ್ನಡಕ ಧರಿಸಿದ ಪ್ರೇಕ್ಷಕರಲ್ಲೂ ರಸಾನುಭವ ತುಂಬುತ್ತವೆ.
ರಾವಣನ ತಾಯಿ ಕೈಕಸಿಯಾಗಿ ಮಲಯಾಳಂನ ಖ್ಯಾತ ಕಲಾವಿದೆ, ನೃತ್ಯಗಾತಿ ಶೋಭನಾ ನಟಿಸಿದ್ದಾರೆ.
ಲಕ್ಷ್ಮಣನಾಗಿ ರವಿ ದುಬೆ ಚೆನ್ನಾಗಿ ನಟಿಸಿದ್ದಾರೆ. ಆದರೆ ಅವರ ನಟನೆಯ ರೀತಿಗೆ ಆಧುನಿಕ ಶೈಲಿಯ ಸೋಂಕು ಇದೆ. ಇದನ್ನು ರಾವಣನ ಹೊಡೆದಾಟಗಳಲ್ಲೂ ಕಾಣಬಹುದಾಗಿದೆ. ಕನ್ನಡದಲ್ಲಿ ಹಿಂದಿಯ ಡಬ್ಬಿಂಗ್ ವರ್ಶನ್ ಆದರೂ ಸಂಭಾಷಣೆಗಳಿಗೆ ಎಐ ಮೂಲಕ ತುಟಿಗಳನ್ನು ಹೊಂದುವಂತೆ ಮಾಡಿರುವ ರೀತಿ ಅದ್ಭುತ. ಸಂಭಾಷಣೆಯಲ್ಲೂ ಅಷ್ಟೇ ಪೌರಾಣಿಕ ಶೈಲಿಯ ಕನ್ನಡ ಗಂಭೀರತೆ ತುಂಬಿದೆ. ಆದರೆ ಯಶ್ನಿಂದ ‘ಗೋಚಾರ ಫಲ’ ಎಂಬ ಉಚ್ಚಾರಣೆ ಹೊರಡಿಸಿರುವುದು ನಿರ್ದೇಶಕ ತಂಡದವರ ಅಕ್ಷಮ್ಯ ಅಪರಾಧ.
ದಶರಥನಾಗಿ ರಾಮಾಯಣ ಧಾರಾವಾಹಿಯ ರಾಮ ಅರುಣ್ ಗೋವಿಲ್ ಅವರನ್ನು ಆಯ್ಕೆ ಮಾಡಿರುವುದು ಸೀರಿಯಲ್ ವೀಕ್ಷಕರ ಭಾವಕ್ಕಷ್ಟೇ ಪೂರಕವಾಗಿರಬಹುದು. ಆದರೆ ಅವರನ್ನು ಬರಿಮೈಯಲ್ಲಿ ತೋರಿಸಿರುವ ಕಾರಣ ವೃದ್ಧನಂತೆ, ರೋಗಿಯಂತೆ ಗೋಚರಿಸಿದ್ದಾರೆ. ಮೊದಲ ದೃಶ್ಯದಲ್ಲಿ ಶ್ರೀರಾಮನಿಗೂ ತುಟಿಯ ರಂಗು ಹೆಚ್ಚಾದಂತಿದೆ. ಶೂರ್ಪನಖಿಯ ಪತಿ ವಿದ್ಯುತ್ಜಿಹನ ವೇಷದಲ್ಲಿ ವಿವೇಕ್ ಒಬೆರಾಯ್ ಕೀಲುಕುದುರೆ ವೇಷತೊಟ್ಟ ರಾಜನಂತೆ ಭಾಸವಾಗುತ್ತಾರೆ.
ಆದರೆ ಕುಂಭಕರ್ಣನ ಪಾತ್ರವನ್ನು ಮಕ್ಕಳು ಕೂಡ ಖುಷಿ ಪಡಬಲ್ಲಂತೆ ಚಿತ್ರಿಸಲಾಗಿದೆ.
ಹಾಡುಗಳನ್ನು ಅಗತ್ಯಕ್ಕೆ ತಕ್ಕಷ್ಟು ಮಾತ್ರ ಬಳಸಲಾಗಿದೆ. ಲಿರಿಕಲ್ ವೀಡಿಯೊ ನೋಡಿದ ಬಹಳ ಮಂದಿ ರಾಮ ಸೀತೆಯ ಪ್ರೇಮಗೀತೆ ಇರುವ ಬಗ್ಗೆ ತಪ್ಪು ತಿಳಿದಿದ್ದರು. ಆದರೆ ಸಾಹಿತ್ಯವನ್ನು ಭಕ್ತ ಪ್ರೇಕ್ಷಕರ ಕಲ್ಪನೆಗೆ ಬಿಟ್ಟು ದೃಶ್ಯ ತುಣುಕುಗಳಾಗಿ ಮಾತ್ರ ತೋರಿಸಲಾಗಿದೆ. ಹಿನ್ನೆಲೆ ಸಂಗೀತದಲ್ಲಿ ನಿಶ್ಯಬ್ದಕ್ಕೆ ಕೊಟ್ಟ ಪ್ರಾಧಾನ್ಯತೆ ಮನಗೆಲ್ಲುತ್ತದೆ.
ತೀರ ಸಣ್ಣ ಪುಟ್ಟ ಕೊರತೆಗಳ ಹೊರತಾಗಿ ಇತ್ತೀಚಿನ ವರ್ಷಗಳಲ್ಲಿ ರಾಜಕೀಯದಿಂದ, ಅಸಂಬದ್ಧದಿಂದ ಹೊರತಾಗಿ ಬಂದಿರುವ ಅಪರೂಪದ ಪೌರಾಣಿಕ ಚಿತ್ರ ಈ ರಾಮಾಯಣ ಎನ್ನುವಲ್ಲಿ ಯಾವ ಸಂದೇಹವೂ ಇಲ್ಲ.
(ಅಂಕಣಕಾರರು: ಪತ್ರಕರ್ತರು ಮತ್ತು ಸಿನೆಮಾ ವಿಮರ್ಶಕರು)






