ಜಾಗತಿಕ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸಿದ ಗಾಡ್ಝಿಲ್ಲಾ; ಧೂಳಿಪಟವಾದ ರಾಮಾಯಣ!

Photo Credit: hindustantimes
ಈ ವಾರಾಂತ್ಯದಲ್ಲಿ ‘ಗಾಡ್ಝಿಲ್ಲಾ ಮೈನಸ್ ಝೀರೋ’ ವಿಶ್ವದ ನಂಬರ್ 1 ಚಿತ್ರವಾಗಿದ್ದು, ಅಮೆರಿಕದ ಬಾಕ್ಸ್ ಆಫೀಸ್ ನಲ್ಲಿ ‘ರಾಮಾಯಣ’ ಮತ್ತು ಹಾಲಿವುಡ್ ಚಿತ್ರಗಳನ್ನು ಹಿಂದಿಕ್ಕಿದೆ.
ರಣ್ಬೀರ್ ಕಪೂರ್–ಸಾಯಿ ಪಲ್ಲವಿ ಜೋಡಿಯ ‘ರಾಮಾಯಣ’ ನಾಲ್ಕು ದಿನಗಳಲ್ಲಿ 499.20 ಕೋಟಿ ರೂ.ಗಳಷ್ಟು ಗಳಿಕೆ ಮಾಡಿದೆ. ಆರಂಭದಲ್ಲಿ ನಿಧಾನಗತಿಯ ಗಳಿಕೆ ದಾಖಲಿಸಿದ ಬಳಿಕ ವಾರಾಂತ್ಯದಲ್ಲಿ ಉತ್ತಮ ಗಳಿಕೆ ಸಾಧಿಸಿತ್ತು. ಆದರೆ, ಜಾಗತಿಕ ಬಾಕ್ಸ್ ಆಫೀಸ್ ನಲ್ಲಿ ಜಪಾನ್ ನ ಸಿನಿಮಾ ‘ಗಾಡ್ಝಿಲ್ಲಾ ಮೈನಸ್ ಝೀರೋ’ ಸದ್ದು ಮಾಡಿದೆ. ದಕ್ಷಿಣ ಏಷ್ಯಾದಲ್ಲಿ ಈ ಸಿನಿಮಾ ಬಿಡುಗಡೆಯಾಗದಿದ್ದರೂ, ಉತ್ತರ ಅಮೆರಿಕದಲ್ಲಿ ಭಾರತದ ಮಹಾಕಾವ್ಯ ‘ರಾಮಾಯಣ’ವನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಿದೆ. ದಕ್ಷಿಣ ಏಷ್ಯಾದಲ್ಲಿ ‘ರಾಮಾಯಣ’ ಐಮ್ಯಾಕ್ಸ್ ನಲ್ಲಿ ತನ್ನ ಪ್ರಾಬಲ್ಯ ತೋರಿಸಿರುವ ಕಾರಣದಿಂದ ‘ಗಾಡ್ಝಿಲ್ಲಾ’ ಬಿಡುಗಡೆಯಾಗಿಲ್ಲ.
ಉದ್ಯಮದ ಅಂದಾಜಿನ ಪ್ರಕಾರ, ‘ಗಾಡ್ಝಿಲ್ಲಾ ಮೈನಸ್ ಝೀರೋ’ ವಾರಾಂತ್ಯದಲ್ಲಿ ಉತ್ತರ ಅಮೆರಿಕದ ಬಾಕ್ಸ್ ಆಫೀಸ್ ನಲ್ಲಿ ಅಗ್ರಸ್ಥಾನ ಪಡೆದಿದೆ. ಶುಕ್ರವಾರ ಮತ್ತು ರವಿವಾರದ ನಡುವೆ ಆ ಸಿನಿಮಾ 31.6 ದಶಲಕ್ಷ ಡಾಲರ್ ಗಳಿಸಿದೆ. ಹೀಗಾಗಿ, ಮತ್ತೊಂದು ಸಿನಿಮಾ ‘ಕ್ಯಾಟ್ ಇನ್ ದಿ ಹ್ಯಾಟ್’ ಅನ್ನು ಎರಡನೇ ಸ್ಥಾನಕ್ಕೆ ತಳ್ಳಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಎಂಬ ಹೆಸರಿನಲ್ಲಿ ಬಿಡುಗಡೆಯಾದ ‘ರಾಮಾಯಣ’, ಯಾವುದೇ ಭಾರತೀಯ ಚಿತ್ರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅಮೆರಿಕದಲ್ಲಿ ಬಿಡುಗಡೆಯಾಗಿದ್ದರೂ, ಒಟ್ಟು ಗಳಿಕೆಯಲ್ಲಿ ಐದನೇ ಸ್ಥಾನದಲ್ಲಿತ್ತು. ನಿತೀಶ್ ತಿವಾರಿ ಅವರ ಈ ಸಿನಿಮಾ ಶುಕ್ರವಾರ ಮತ್ತು ರವಿವಾರದ ನಡುವೆ 8.7 ದಶಲಕ್ಷ ಡಾಲರ್ ಹಾಗೂ ವಿಸ್ತೃತ ಆರಂಭಿಕ ವಾರಾಂತ್ಯದಲ್ಲಿ 12.2 ದಶಲಕ್ಷ ಡಾಲರ್ ಗಳಿಸಿದೆ. ಹೀಗೆ ನೋಡಿದರೆ, ‘ಗಾಡ್ಝಿಲ್ಲಾ ಮೈನಸ್ ಝೀರೋ’ ಅಮೆರಿಕದಲ್ಲಿ ‘ರಾಮಾಯಣ’ಕ್ಕಿಂತ ಶೇ. 260ರಷ್ಟು ಹೆಚ್ಚು ಗಳಿಕೆ ಸಾಧಿಸಿದೆ. ಈ ಜಪಾನ್ ಚಲನಚಿತ್ರವನ್ನು 19 ದಶಲಕ್ಷ ಡಾಲರ್ ಬಜೆಟ್ ನಲ್ಲಿ ನಿರ್ಮಿಸಲಾಗಿದೆ. ಇದು ‘ರಾಮಾಯಣ’ದ ವರದಿಯಾದ ನಿರ್ಮಾಣ ವೆಚ್ಚವಾದ 210 ದಶಲಕ್ಷ ಡಾಲರ್ ನ ಶೇ. 9ರಷ್ಟು ಮಾತ್ರ.
‘ಗಾಡ್ಝಿಲ್ಲಾ ಮೈನಸ್ ಝೀರೋ’ ಅಮೆರಿಕದಲ್ಲಿ ಮಾತ್ರವಲ್ಲದೆ, ಜಾಗತಿಕವಾಗಿಯೂ ಪ್ರಾಬಲ್ಯ ಸಾಧಿಸಿದೆ. ಆದರೆ, ಭಾರತದಲ್ಲಿ ಉತ್ತಮ ಪ್ರದರ್ಶನ ನೀಡಿರುವುದರಿಂದ ‘ರಾಮಾಯಣ’ ಗಳಿಕೆಯ ಅಂತರವನ್ನು ಕಡಿಮೆ ಮಾಡಲು ಸಾಧ್ಯವಾಗಿದೆ. ವಿಶ್ವಾದ್ಯಂತ ಜಪಾನ್ ಸಿನಿಮಾ 63 ದಶಲಕ್ಷ ಡಾಲರ್ ಗಳಿಸಿದ್ದರೆ, ‘ರಾಮಾಯಣ’ 55 ದಶಲಕ್ಷ ಡಾಲರ್ ಗಳಿಸಿದೆ. ಈ ಪೈಕಿ 30 ದಶಲಕ್ಷ ಡಾಲರ್ಗಿಂತಲೂ ಹೆಚ್ಚು ಮೊತ್ತ ಭಾರತದಿಂದಲೇ ಬಂದಿದೆ. ಅಂದರೆ, ತನ್ನ ತಾಯ್ನಾಡಿನ ಮಾರುಕಟ್ಟೆಯಿಂದ ಬಂದಿದೆ.
►‘ಗಾಡ್ಝಿಲ್ಲಾ ಮೈನಸ್ ಝೀರೋ’ ಗೆಲ್ಲಲು ಕಾರಣವೇನು?
ಈ ಸಿನಿಮಾ 1949ರ ಕಾಲಘಟ್ಟದಲ್ಲಿ ನಡೆಯುತ್ತದೆ. ಎರಡನೇ ಮಹಾಯುದ್ಧದ ನಂತರ ಜಪಾನ್ ದೇಶವು ಪುನರ್ನಿರ್ಮಾಣದತ್ತ ಗಮನಹರಿಸುತ್ತಿರುವಾಗ ಹೊಸ ಬೆದರಿಕೆಯೊಂದನ್ನು ಎದುರಿಸುತ್ತದೆ. ಅದೇ ಕಿಂಗ್ ಘೀಡೋರಾ ಎಂಬ ಮೂರು ತಲೆಯ ಡ್ರ್ಯಾಗನ್ನಂತಹ ದೈತ್ಯ. ಈ ಸಂದರ್ಭದಲ್ಲಿ ಗಾಡ್ಝಿಲ್ಲಾ ಪ್ರವೇಶವಾಗುತ್ತದೆ.
2023ರಲ್ಲಿ ಬಿಡುಗಡೆಯಾಗಿದ್ದ ‘ಗಾಡ್ಝಿಲ್ಲಾ ಮೈನಸ್ ಒನ್’ ಚಿತ್ರದ ಕೊನೆಯಲ್ಲಿ ಗಾಡ್ಝಿಲ್ಲಾ ಸತ್ತಿದೆ ಅಥವಾ ಸೋತಿದೆ ಎಂದು ಎಲ್ಲರೂ ಅಂದುಕೊಂಡಿರುತ್ತಾರೆ. ಆದರೆ, ಈ ಹೊಸ ಚಿತ್ರದಲ್ಲಿ ಅದು ವಿಕಿರಣಶೀಲ ಶಕ್ತಿಯಿಂದಾಗಿ ಮರುಜೀವ ಪಡೆಯುತ್ತದೆ. ಹೀಗೆ ಮರುಜನ್ಮ ಪಡೆಯುವ ಗಾಡ್ಝಿಲ್ಲಾ ಕಿಂಗ್ ಘೀಡೋರಾವನ್ನು ಎದುರಿಸುತ್ತದೆ. ಈ ಮೂಲಕ ಜಪಾನ್ ದೇಶವನ್ನು ರಕ್ಷಿಸುವ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತದೆ.
ಈ ಬಾರಿಯ ‘ಗಾಡ್ಝಿಲ್ಲಾ’ ಸಿನಿಮಾ 2023ರ ಡಿಸೆಂಬರ್ ನಲ್ಲಿ ಬಿಡುಗಡೆಯಾದ ಹಿಂದಿನ ಸಿನಿಮಾಕ್ಕಿಂತ ಮೂರು ಪಟ್ಟು ಹೆಚ್ಚು ಗಳಿಕೆ ಮಾಡಿದೆ ಎಂದು ವಿಮರ್ಶೆಗಳು ಬಂದಿದ್ದವು. ತಕಾಶೀ ಯಮಜಾಕಿ ನಿರ್ದೇಶಿಸಿರುವ ‘ಗಾಡ್ಝಿಲ್ಲಾ ಮೈನಸ್ ಝೀರೋ’ವನ್ನು ಜಪಾನ್ ನ ಟೊಹೊ ನಿರ್ಮಿಸಿದ್ದು, ಉತ್ತರ ಅಮೆರಿಕದಲ್ಲಿ GKIDS ವಿತರಿಸಿದೆ.






