'ಸಲಾರ್' ಟೀಸರ್ ಬಿಡುಗಡೆ: 12 ಗಂಟೆಗಳಲ್ಲಿ 45 ಮಿಲಿಯನ್ ವೀಕ್ಷಣೆ; ಹೆಚ್ಚಿದ ನಿರೀಕ್ಷೆ

Photo:Twitter /@hombalefilms
ಹೈದರಾಬಾದ್: ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ನಟ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ 'ಸಲಾರ್' ಸಿನೆಮಾದ ಟೀಸರ್ ಬಿಡುಗಡೆಯಾಗಿದ್ದು, ಕೇವಲ 12 ಗಂಟೆಗಳಲ್ಲಿ 45 ಮಿಲಿಯನ್ಗಿಂತಲೂ ಅಧಿಕ ವೀಕ್ಷಣೆಯಾಗಿದೆ.
ಕೆಜಿಎಫ್ ಸರಣಿಯ ಭರ್ಜರಿ ಗೆಲುವಿನಿಂದ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರಕ್ಕೆ ನಿರೀಕ್ಷೆಗಳು ಹೆಚ್ಚಿದೆ. ಬಾಹುಬಲಿ ಸರಣಿಯ ಬಳಿಕ ಸಾಹೋ, ರಾಧೆ-ಶ್ಯಾಮ್, ಆದಿಪುರುಷ್ ಮೊದಲಾದ ಸಿನೆಮಾಗಳು ಅಂದುಕೊಂಡಷ್ಟು ಗೆಲುವು ಸಾಧಿಸದಿರುವುದರಿಂದ ನಟ ಪ್ರಭಾಸ್ ಅವರೂ ಸಲಾರ್ ಮೇಲೆ ಬಹು ನಿರೀಕ್ಷೆಯನ್ನು ಇಟ್ಟು ಕೊಂಡಿದ್ದಾರೆ.
ಸಲಾರ್ ಚಿತ್ರದಲ್ಲಿ ಪ್ರಭಾಸ್ ಜೊತೆಗೆ ಮಲಯಾಳಂ ನಟ-ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್, ಟಿನು ಆನಂದ್, ಈಶ್ವರಿ ರಾವ್, ಜಗಪತಿ ಬಾಬು, ಶ್ರೀಯಾ ರೆಡ್ಡಿ, ಗರುಡ ರಾಮ್ ಸೇರಿದಂತೆ ಬಹು ತಾರಾಗಣ ಇದೆ.
ಟೀಸರ್ ನಲ್ಲಿ ಬಂದಿರುವ ಸರಳ ಇಂಗ್ಲಿಷ್ ಡೈಲಾಗ್ ಪ್ರಭಾಸ್ ಅಭಿಮಾನಿಗಳ ನಡುವೆ ಮೆಚ್ಚುಗೆ ಪಡೆದಿದ್ದು, ಟ್ವಿಟರಿನಲ್ಲಿ ʼSimple Englishʼ ಎಂದು ಅಭಿಮಾನಿಗಳು ಟ್ರೆಂಡ್ ಮಾಡುತ್ತಿದ್ದಾರೆ.
ಕೆಜಿಎಫ್, ಕಾಂತಾರ ಚಿತ್ರಗಳಿಂದ ದೇಶದ ಸಿನಿಪ್ರಿಯರ ಗಮನ ಸೆಳೆದಿದ್ದ ಹೊಂಬಾಳೆ ಸಂಸ್ಥೆಯೇ ಈ ಚಿತ್ರವನ್ನೂ ನಿರ್ಮಿಸುತ್ತಿದ್ದು, ಹಲವು ನೆಟ್ಟಿಗರು ಸಲಾರ್ ಚಿತ್ರವು ʼಕೆಜಿಎಫ್ʼ ಸರಣಿಯ ಭಾಗ ಎಂದು ಚರ್ಚೆಗಳನ್ನು ಶುರು ಮಾಡಿದ್ದಾರೆ. ಕೆಜಿಎಫ್ ಚಿತ್ರದಲ್ಲಿ ಕಂಡು ಬಂದ ಕೆಲವು ದೃಶ್ಯಗಳು ಸಲಾರ್ ಟೀಸರಿನಲ್ಲೂ ಗುರುತಿಸಿರುವ ಅಭಿಮಾನಿಗಳು, ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ.







