ಚಿಕಿತ್ಸೆಗೆ ತೆಲುಗು ನಟನಿಂದ ರೂ. 25 ಕೋಟಿ ಪಡೆದಿದ್ದಾರೆಂಬ ವದಂತಿಗಳಿಗೆ ನಟಿ ಸಮಂತಾ ಸ್ಪಷ್ಟನೆ

ನಟಿ ಸಮಂತಾ (Photo: instagram.com/samantharuthprabhuoffl)
ಹೈದರಾಬಾದ್: ನಾನು ನನ್ನ ಕೆಲಸಗಳಿಗೆಲ್ಲ ದೊಡ್ಡ ಮೊತ್ತವನ್ನೇನೂ ಪಡೆದಿಲ್ಲವಾದರೂ, ನನಗೆ ನನ್ನ ಆರೈಕೆ ಮಾಡಿಕೊಳ್ಳುವ ಸಾಮರ್ಥ್ಯವಿದೆ ಎಂದು ತಮ್ಮ ಮಯೋಸೈಟಿಸ್ ಚಿಕಿತ್ಸೆಗಾಗಿ ತೆಲುಗು ತಾರಾ ನಟನೊಬ್ಬನಿಂದ ರೂ. 25 ಕೋಟಿ ನೆರವು ಪಡೆದಿದ್ದೇನೆ ಎಂಬ ವದಂತಿಗಳ ಕುರಿತು ನಟಿ ಸಮಂತಾ ಋತ್ ಪ್ರಭು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಈ ವದಂತಿಗಳು ಕಳೆದ ಕೆಲವು ದಿನಗಳಿಂದ ವೈರಲ್ ಆಗಿದ್ದವು. ಅದಕ್ಕೆ ಪ್ರತಿಯಾಗಿ ಸಮಂತಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮೇಲಿನಂತೆ ಪ್ರತಿಕ್ರಿಯೆ ನೀಡಿದ್ದಾರೆ ಎಂದು pinkvilla.com ವರದಿ ಮಾಡಿದೆ.
ನಕಲಿ ಸುದ್ದಿಗಳ ವಿರುದ್ಧ ವಾಗ್ದಾಳಿ ನಡೆಸಿರುವ ನಟಿ ಸಮಂತಾ, ಮಯೋಸೈಟಿಸ್ ಹಲವಾರು ಮಂದಿ ಅನುಭವಿಸುವ ಒಂದು ಸ್ಥಿತಿಯಾಗಿದ್ದು, ಇದರ ಚಿಕಿತ್ಸೆಯ ಕುರಿತು ಮಾಹಿತಿ ನೀಡುವಾಗ ಮಾಧ್ಯಮಗಳು ಹೊಣೆಗಾರಿಕೆಯಿಂದ ವರ್ತಿಸಬೇಕು ಎಂದು ಕಿಡಿ ಕಾರಿದ್ದಾರೆ.
"ಮಯೋಸೈಟಿಸ್ ಚಿಕಿತ್ಸೆಗೆ ರೂ. 25 ಕೋಟಿ ವೆಚ್ಚ? ಕೆಲವರು ನಿಮಗೆ ಕೆಟ್ಟ ಮಾಹಿತಿ ನೀಡಿರಬಹುದು. ನಾನು ಆ ಮೊತ್ತದಲ್ಲಿ ಅಲ್ಪ ಪ್ರಮಾಣದ ಮೊತ್ತವನ್ನು ಮಾತ್ರ ವ್ಯಯಿಸುತ್ತಿರುವುದಕ್ಕೆ ಸಂತೋಷದಿಂದಿದ್ದೇನೆ.
ಮತ್ತು, ನಾನು ನನ್ನ ವೃತ್ತಿ ಜೀವನದಲ್ಲಿ ಮಾಡಿರುವ ಎಲ್ಲ ಕೆಲಸಗಳಿಗೂ ದೊಡ್ಡ ಮೊತ್ತವನ್ನೇನೂ ಪಡೆದಿರಲಿಲ್ಲ. ಹೀಗಾಗಿ, ನಾನು ನನ್ನ ಆರೈಕೆಯನ್ನು ಮಾಡಿಕೊಳ್ಳಬಲ್ಲೆ. ನಿಮಗೆ ಧನ್ಯವಾದ.
ಮಯೋಸೈಟಿಸ್ ಸಾವಿರಾರು ಮಂದಿ ಅನುಭವಿಸುತ್ತಿರುವ ಒಂದು ಸ್ಥಿತಿಯಾಗಿದೆ. ಅದರ ಚಿಕಿತ್ಸೆಯ ಕುರಿತು ಮಾಹಿತಿ ಹಾಕುವಾಗ ದಯವಿಟ್ಟು ನಾವು ಹೊಣೆಗಾರಿಕೆಯಿಂದ ವರ್ತಿಸೋಣ" ಎಂದು ಅವರು ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಮನವಿ ಮಾಡಿದ್ದಾರೆ.







